ಮೈಸೂರು,ಡಿ.22(ವೈಡಿಎಸ್)-ಕೋವಿಡ್ ಹಿನ್ನೆಲೆ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕ್ರಿಸ್‍ಮಸ್ ಹಬ್ಬ ಹಾಗೂ ಹೊಸ ವರ್ಷದ ಸಂಭ್ರಮ ಆಚರಿಸುವ ವೇಳೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೈಸೂರು ನಗರ ಉಪ ಪೊಲೀಸ್ ಆಯುಕ್ತರು, ನಗರದ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಮಂಗಳವಾರ ಸ್ಪಷ್ಟ ಸೂಚನೆ ನೀಡಿದ್ದಾರೆ.
2020ರ ಡಿ.24 ಹಾಗೂ 31ರಂದು ಇನ್‍ಸ್ಪೆಕ್ಟರ್ ಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿವರೆಗೂ ಗಸ್ತಿನಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ಕಂಡುಬಂದಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು. ಸಾರ್ವ ಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕ್ರಿಸ್‍ಮಸ್ ಹಬ್ಬ ಮತ್ತು ಹೊಸ ವರ್ಷಾಚರಣೆ ಸಂದರ್ಭ ನಗರದ ಎಲ್ಲಾ ಚರ್ಚ್‍ಗಳು ಹಾಗೂ ಪ್ರಮುಖ ದೇವಸ್ಥಾನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲು ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಠಾಣೆಗಳ ಇನ್‍ಸ್ಪೆಕ್ಟರ್‍ಗಳು ತಮ್ಮ ವ್ಯಾಪ್ತಿಯ ಚರ್ಚ್‍ಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸಲು ಅಗತ್ಯ ಕ್ರಮಕೈಗೊಳ್ಳ ಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳದ, ಹೆಚ್ಚಿನ ಜನರು ಸೇರುವ ಸಾಮೂಹಿಕ ಕೂಟ (ಪಾರ್ಟಿ)ಗಳನ್ನು ಸಾರ್ವಜನಿಕ ಸ್ಥಳ ಮತ್ತು ಹೆಚ್ಚು ಜನಸಂಖ್ಯೆಯುಳ್ಳ ವಸತಿ ಸಮುಚ್ಛಯಗಳಲ್ಲಿ ಆಯೋಜಿಸುವುದನ್ನು ನಿಷೇಧಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕಾರ್ಯಕ್ರಮ ನಡೆಸಿ ದೆಡೆ ಆಯೋಜಕರ ವಿರುದ್ಧವೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಕ್ರಿಸ್‍ಮಸ್ ಹಾಗೂ ಹೊಸ ವರ್ಷಾ ಚರಣೆ ಸಂದರ್ಭ ಚರ್ಚ್ ಹಾಗೂ ದೇವಸ್ಥಾನಗಳಲ್ಲಿ ಒಮ್ಮೆಲೆ ಹೆಚ್ಚು ಜನರು ಸೇರದಂತೆ ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಮೇಲ್ವಿಚಾರಕರು, ಆಯೋ ಜಕರು ಕಟ್ಟುನಿಟ್ಟಿನ ಕ್ರಮ ವಹಿಸಲು ಸೂಕ್ತ ಮಾರ್ಗದರ್ಶನ ನೀಡಬೇಕು.
2020ರ ಡಿ.30ರಿಂದ 2021ರ ಜ.2ರವರೆಗೆ ನಗರದ ಎಲ್ಲಾ ಕ್ಲಬ್, ರೆಸ್ಟೋರೆಂಟ್, ಪಬ್ ಹಾಗೂ ಸಾಮಾಜಿಕ ಅಂತರವಿಲ್ಲದೆ ಹೆಚ್ಚು ಜನರು ಸೇರುವ ವಿಶೇಷ ಕಾರ್ಯಕ್ರಮಗಳು, ಡಿಜೆ-ಡ್ಯಾನ್ಸ್, ವಿಶೇಷ ಪಾರ್ಟಿಗಳನ್ನು ನಿಷೇಧಿಸಲಾಗಿದೆ. ಆದರೆ, ಕ್ಲಬ್, ಪಬ್, ರೆಸ್ಟೋರೆಂಟ್‍ಗಳು ನಿತ್ಯದಂತೆ ತೆರೆದಿದ್ದು, ನಡೆಸಲು ನಿರ್ಬಂಧವಿಲ್ಲ. ಈ ಬಗ್ಗೆ ಠಾಣಾ ವ್ಯಾಪ್ತಿಯ ಎಲ್ಲಾ ಕ್ಲಬ್, ರೆಸ್ಟೋರೆಂಟ್, ಪಬ್ ಮಾಲೀಕರೊಂದಿಗೆ ಸಭೆ ನಡೆಸಿ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಸೂಕ್ತ ತಿಳಿವಳಿಕೆ ನೀಡಬೇಕು. ಹೋಟೆಲ್, ಮಾಲ್, ಪಬ್, ರೆಸ್ಟೋರೆಂಟ್‍ಗಳ ಮಾಲೀಕರು, ಸರ್ಕಾ ರದ ಆದೇಶದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳು ವತ್ತ ನಿಗಾ ಇಡಬೇಕು. ಅಗತ್ಯವಿದ್ದಲ್ಲಿ ಜನರನ್ನು ಸರದಿ ಯಲ್ಲಿ ಪ್ರವೇಶಿಸಲು ಅಥವಾ ಆನ್‍ಲೈನ್ ಮುಖಾಂ ತರ, ಟೋಕನ್ ಪದ್ಧತಿಯಲ್ಲಿ ಮುಂಗಡ ಸ್ಥಳ ಕಾಯ್ದಿ ರಿಸಲು ವ್ಯವಸ್ಥೆ ಕಲ್ಪಿಸುವುದು. ಈ ಬಗ್ಗೆ ವ್ಯಾಪ್ತಿಯಲ್ಲಿನ ಎಲ್ಲಾ ಹೋಟೆಲ್, ಮಾಲ್ ಹಾಗೂ ರೆಸ್ಟೋರೆಂಟ್ ಗಳ ಮಾಲೀಕರಿಗೆ ತಿಳುವಳಿಕೆ ನೀಡಬೇಕು. ಪ್ರಾಂಗಣ, ಉಪಾಹಾರ ಸ್ಥಳ, ವ್ಯವಸ್ಥಿತ ಕಟ್ಟಡ ಸಮುಚ್ಛಯಗಳಲ್ಲಿ ಜನರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು. ಒಂದು ವೇಳೆ ಸಾಮಾಜಿಕ ಅಂತರ ಕಾಪಾಡದ, ಮಾಸ್ಕ್ ಧರಿಸದ ಹಾಗೂ ಕೋವಿಡ್ ಮಾರ್ಗಸೂಚಿ ಪಾಲಿಸದ ಪ್ರಕರಣ ಕಂಡುಬಂದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಡಿಸಿಪಿ ಎ.ಎನ್.ಪ್ರಕಾಶ್ ಗೌಡ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.