ಮೈಸೂರು, ಸೆ.22(ಪಿಎಂ)- ಸರ್ಕಾರಿ ವೈದ್ಯರ ಅಸಹಕಾರ ಚಳುವಳಿ ಬಳಿಕ ಇದೀಗ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆಯ ವೈದ್ಯರು ಸೇರಿದಂತೆ ವಿವಿಧ ಸಿಬ್ಬಂದಿ ವರ್ಗ ಸೆ.24 ರಿಂದ ರಾಜ್ಯಾದ್ಯಂತ ಕೆಲಸ ಸ್ಥಗಿತಗೊಳಿಸಿ ಅನಿರ್ದಿ ಷ್ಟಾವಧಿ ಮುಷ್ಕರಕ್ಕೆ ತೀರ್ಮಾನಿಸಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ಸರ್ಕಾರಿ ವೈದ್ಯರ ಪ್ರತಿ ಭಟನೆ ನಿವಾರಿಸಿ ನಿಟ್ಟುಸಿರು ಬಿಡುತ್ತಿದ್ದ ಸರ್ಕಾರಕ್ಕೆ ಇದೀಗ ಮತ್ತೊಂದು ಸವಾಲು ಎದುರಾದಂತಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಕಲ್ಪಿಸಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ಗುರು ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧರಿಸಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಸಂಘದ ಮೈಸೂರು ಜಿಲ್ಲಾ ಘಟಕದ ಗೌರವಾಧ್ಯಕ್ಷ ಮಂಜುನಾಥ್, ಗುತ್ತಿಗೆ ಹಾಗೂ ಹೊರಗುತ್ತಿಗೆಯಡಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ, ಅರೆ ವೈದ್ಯಕೀಯ ಸೇರಿದಂತೆ ವಿವಿಧ ಸಿಬ್ಬಂದಿ ವರ್ಗದ ಹಲವು ವರ್ಷ ಗಳ ಬೇಡಿಕೆ ಈಡೇರಿಸಲು ಸರ್ಕಾರ ಯಾವುದೇ ಗಂಭೀರ ಕ್ರಮ ವಹಿಸದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮುಷ್ಕರಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರದ ಬಜೆಟ್‍ನ ಶೇಕಡ ವಾರು ಹೆಚ್ಚಿಸಬೇಕು. ಈ ಕ್ಷೇತ್ರದ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡ ಬೇಕು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯ ಸಿಬ್ಬಂದಿಯೂ ಒಳಗೊಂಡಂತೆ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಕಲ್ಪಿಸಿ, ಖಾಯಂ ಗೊಳಿಸಬೇಕು. ಎಲ್ಲಾ ಹುದ್ದೆಗಳಿಗೆ ವೇತನ ಭತ್ಯೆ ಮತ್ತು ವೇತನ ಶ್ರೇಣಿ ನೀಡಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ವೈದ್ಯಕೀಯ ಶಿಕ್ಷಣ ಇಲಾಖೆಯು ಜಾರಿ ಮಾಡಿರುವ ಏಕರೂಪ ವೇತನದ ಮಾದರಿಯು ಎಲ್ಲಾ ನೌಕರರಿಗೂ ಅನ್ವಯಿಸುವಂತೆ ಕ್ರಮ ಕೈಗೊಳ್ಳ ಬೇಕು ಎಂದು ಅವರು ಆಗ್ರಹಿಸಿದರು.
ಎಲ್ಲಾ ಹೊರಗುತ್ತಿಗೆ ನೌಕರರಿಗೂ ಗುತ್ತಿಗೆದಾರರ ಮಧ್ಯಸ್ಥಿಕೆ ಇಲ್ಲದೇ ನೇರವಾಗಿ ಇಲಾಖೆಯೇ ವೇತನ ಪಾವತಿ ಮಾಡಬೇಕು. ಜೊತೆಗೆ ಒಳಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ದೊರೆಯುವ ಸೌಲಭ್ಯ ಗಳನ್ನು ಹೊರಗುತ್ತಿಗೆ ನೌಕರರಿಗೂ ಕಲ್ಪಿಸಿಕೊಡಬೇಕು. ಆರೋಗ್ಯ ಭಾಗ್ಯ ಯೋಜನೆಯನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೂ ವಿಸ್ತರಿಸಬೇಕು ಎಂದರು.
ಖಾಯಂ ನೌಕರರಿಗೆ ನೀಡುವಂತೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೂ ಸಾವು ಅಥವಾ ಅಂಗವೈಕಲ್ಯ ಸಂದರ್ಭದಲ್ಲಿ ಸರಿ ಸಮಾನವಾದ ಪರಿಹಾರ ನೀಡಬೇಕು. ಜೊತೆಗೆ ಕಳೆದ 10 ವರ್ಷಗಳ ಅವಧಿಯಲ್ಲಿ ಇಂತಹ ಪ್ರಕರಣಗಳನ್ನು ಗುರುತಿಸಿ ಪರಿಹಾರ ನೀಡಬೇಕು. ಸಣ್ಣಪುಟ್ಟ ನೆಪವೊಡ್ಡಿ ನೌಕರರನ್ನು ಕೆಲಸದಿಂದ ತೆಗೆಯುವ ಅನಾಗ ರಿಕ ಪದ್ಧತಿ ಕೈಬಿಡಬೇಕು. ಕರ್ತವ್ಯದ ಸ್ಥಳದಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಮೇಲಾಗುವ ಶೋಷಣೆ ತಡೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿದರು. ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಜೇಶ್, ಪದಾಧಿಕಾರಿಗಳಾದ ಚಂದ್ರಶೇಖರ್, ಉಮೇಶ್ ಇತರರು ಗೋಷ್ಠಿಯಲ್ಲಿದ್ದರು.