ಕೊರೊನಾ ನಿಯಂತ್ರಣ ಕ್ರಮಗಳ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಲಿ
ಮೈಸೂರು

ಕೊರೊನಾ ನಿಯಂತ್ರಣ ಕ್ರಮಗಳ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಲಿ

September 23, 2020

ಮೈಸೂರು, ಸೆ.22(ಪಿಎಂ)- ರಾಜ್ಯದಲ್ಲಿ ಕೊರೊನಾದಿಂದ ಮಾರಣ ಹೋಮವಾಗುತ್ತಿದ್ದು, ಈವರೆಗೆ ಸುಮಾರು 8 ಸಾವಿರ ಮಂದಿ ಸಾವನ್ನಪ್ಪಿ ದ್ದಾರೆ. ಕೂಡಲೇ ಸರ್ಕಾರ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿ ಕೊರೊನಾ ನಿಯಂತ್ರಣ ದಲ್ಲಿ ಆಗುತ್ತಿರುವ ಲೋಪದ ಬಗ್ಗೆ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಒತ್ತಾಯಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೊರೊನಾ ಸೋಂಕು ಹಾಗೂ ಅದರಿಂದಾಗುವ ಸಾವಿನ ಪ್ರಮಾಣ ಹೆಚ್ಚಿದ್ದು, ಇಡೀ ದೇಶದಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ. ಇನ್ನು ಕೋವಿಡ್ ಆಸ್ಪತ್ರೆಗಳು ನರಕದಂತೆ ಆಗಿದ್ದು, ಯಾವುದೇ ಸಮರ್ಪಕ ಸೌಲಭ್ಯಗಳು ಅಲ್ಲಿ ದೊರೆಯದಂತಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗುತ್ತಿದ್ದರೂ ಆರೋಗ್ಯ ಸಚಿವರು ತಲೆಕೆಡಿಸಿಕೊಳ್ಳುತ್ತಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೇ ಎಷ್ಟೊ ಮಂದಿ ಮಾರ್ಗ ಮಧ್ಯೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಕೊರೊನಾ ವಿಚಾರ ದಲ್ಲಿ ಆರಂಭದಿಂದಲೂ ಅವೈಜ್ಞಾನಿಕ ಕ್ರಮಗಳನ್ನೇ ತೆಗೆದು ಕೊಳ್ಳುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಕೇವಲ 21 ದಿನಗಳಲ್ಲಿ ಕೊರೊನಾ ನಿಯಂತ್ರಿಸುತ್ತೇವೆ ಎಂದಿದ್ದರು. ಆ ಬಗ್ಗೆ ಅವರು ಮಾತೇ ಆಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ದೇಶದಲ್ಲಿ ಶೇ.90ರಷ್ಟು ಕುಟುಂಬಗಳು ತಮ್ಮ ಮನೆಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನೇ ಹೊಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಅವಕಾಶ ಕಲ್ಪಿಸುವುದಾದರೆ ಯಾರಿಗೆ ಪ್ರಯೋಜನ. ಸರ್ಕಾರ ಮೊದಲು ಇಂತಹ ಅವೈಜ್ಞಾನಿಕ ಚಿಂತನೆ ಗಳನ್ನು ಬಿಡಬೇಕು. ಸರ್ಕಾರ ಹೈಕೋರ್ಟ್ ನ್ಯಾಯಮೂರ್ತಿ ಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿ ಕೊರೊನಾ ನಿಯಂತ್ರಣಕ್ಕೆ ಅಡ್ಡಿಯಾಗಿರುವ ಲೋಪಗಳನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ನಗರ ಪಾಲಿಕೆ ಮಾಜಿ ಸದಸ್ಯ ಸುನಿಲ್, ಕಾಂಗ್ರೆಸ್ ಮುಖಂಡ ಸೋಮಶೇಖರ್ ಮತ್ತಿತರರು ಗೋಷ್ಠಿಯಲ್ಲಿದ್ದರು.

 

 

Translate »