ಮೈಸೂರು, ಜು.27(ಆರ್‍ಕೆಬಿ)- ಅಂತಿಮ ವರ್ಷದ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದುಪಡಿಸಬೇಕು. ವಿದ್ಯಾರ್ಥಿಗಳ ಜೀವವನ್ನು ಪಣಕ್ಕಿಟ್ಟು ಪರೀಕ್ಷೆ ನಡೆಸುವುದು ಬೇಡವೇ ಬೇಡ ಎಂದು ಆಗ್ರಹಿಸಿ ಎಐಡಿಎಸ್‍ಓ (ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್) ಆಶ್ರಯದಲ್ಲಿ ಸೋಮ ವಾರ ಮೈಸೂರು ವಿಶ್ವ ವಿದ್ಯಾನಿಲಯದ ಕ್ರಾಫರ್ಡ್ ಹಾಲ್ ಎದುರು ಪ್ರತಿಭಟನೆ ನಡೆಸಲಾಯಿತು.
ಕೊರೊನಾ ಭೀಕರತೆ ಹೆಚ್ಚುತ್ತಿದೆ. ಸಾವು ಪ್ರಕರಣಗಳೂ ಏರುತ್ತಲೇ ಇವೆ. ಕೊರೊನಾ ಸೋಂಕು ಸಮುದಾಯ ಮಟ್ಟದಲ್ಲಿ ಹರಡುತ್ತಿದೆ. ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ, ಹಾಸಿಗೆ ಗಳು ದೊರೆಯದ ಪರಿಸ್ಥಿತಿ ಇದೆ. ಇದರಿಂದ ಶೈಕ್ಷಣಿಕ ವಲಯವೂ ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾ ತೀವ್ರಗತಿ ಯಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರಬಲ ಆಗ್ರಹಕ್ಕೆ ಮಣಿದು ಪದವಿ, ಇಂಜಿನಿಯರಿಂಗ್, ಸ್ನಾತಕೋ ತ್ತರ ವಿದ್ಯಾರ್ಥಿಗಳ ಅಂತಿಮ ವರ್ಷದ ಪರೀಕ್ಷೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಪರೀಕ್ಷೆಗಳನ್ನು ರದ್ದುಪಡಿಸಿ, ಅಂತಿಮ ವರ್ಷದ ಪರೀಕ್ಷೆ ಮಾತ್ರ ನಡೆಸಲು ನಿರ್ದೇಶನ ನೀಡಲಾಗಿದೆ. ಇದು ಸಮಂಜಸ ನಿರ್ಧಾರವಲ್ಲ. ಹೀಗಾಗಿ ಅಂತಿಮ ವರ್ಷದ ಪರೀಕ್ಷೆಗಳನ್ನು ಸಹ ರದ್ದುಪಡಿಸುವಂತೆ ಶಿಕ್ಷಣ ತಜ್ಞರು, ಪೋಷಕರು, ವಿದ್ಯಾರ್ಥಿಗಳೂ ಒತ್ತಾಯಿಸುತ್ತಿ ದ್ದಾರೆ. ಹೀಗಿದ್ದರೂ ವಿವಿಯು ಆ.3ರಿಂದ ವಿದ್ಯಾರ್ಥಿಗಳು ಕಾಲೇಜುಗಳಿಗೆ ಹಾಜರಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸಬೇಕು. 11ನೇ ತಾರೀಕಿನಿಂದ ತರಗತಿಗಳಿಗೆ ಹಾಜರಾಗಬೇಕು ಎಂದು ಸೂಚಿಸಿದೆ. ಪದವಿ ವಿದ್ಯಾರ್ಥಿ ಗಳಿಗೆ ಆ.12ರಿಂದ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೆ.1ರಿಂದ ಪರೀಕ್ಷೆ ನಡೆಸಲಾಗುವುದು ಎಂಬಿತ್ಯಾದಿ ಅಂಶಗಳ ನ್ನೊಳಗೊಂಡ ವೇಳಾಪಟ್ಟಿಯ ಸುತ್ತೋಲೆ ಹೊರಡಿಸಿದೆ. ಇದು ವಿವಿ ವ್ಯಾಪ್ತಿಯ ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಜಿಲ್ಲೆಗಳ ವಿವಿಧ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ ಎಂದು ದೂರಿದರು.
ಬಹುಪಾಲು ಕಾಲೇಜುಗಳಲ್ಲಿ ಸ್ಥಳೀಯ ವಿದ್ಯಾರ್ಥಿ ಗಳಿಲ್ಲ. ಹಾಸ್ಟೆಲ್‍ಗಳಲ್ಲಿದ್ದ ಬೇರೆ ತಾಲೂಕು, ಜಿಲ್ಲೆಗಳ ವಿದ್ಯಾರ್ಥಿಗಳು ಲಾಕ್‍ಡೌನ್ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ಹೋಗಿದ್ದು, ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಅನೇಕ ಬಡಾವಣೆಗಳು, ಹಳ್ಳಿಗಳು ಸೀಲ್‍ಡೌನ್ ಆಗಿವೆ. ಹಾಗಾಗಿ ಅವರು ಕಾಲೇಜುಗಳಿಗೆ ಬರಲು ಕಷ್ಟವಾಗುತ್ತದೆ. ಇಂತಹ ಸಣ್ಣ ವಿಚಾರವನ್ನು ಪರಿಗಣಿಸದ ಮೈಸೂರು ವಿವಿ ತರಾತುರಿಯಲ್ಲಿ ತರಗತಿ, ಪರೀಕ್ಷೆ ನಡೆಸುತ್ತಿರುವುದು ಸರಿಯಲ್ಲ. ಕೊರೊನಾ ವ್ಯಾಪಕ ಹಾವಳಿಯ ನಡುವೆ ತರಗತಿ, ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳು, ಉಪನ್ಯಾಸಕರು, ಪೋಷಕರ ಹಿತದೃಷ್ಟಿ ಯಿಂದ ಒಳ್ಳೆಯದಲ್ಲ. ಕೂಡಲೇ ಸುತ್ತೋಲೆ ವಾಪಸ್ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‍ಓ ಜಿಲ್ಲಾ ಕಾರ್ಯ ದರ್ಶಿ ಚಂದ್ರಕಲಾ, ಉಪಾಧ್ಯಕ್ಷೆ ಆಸಿಯಾ ಬೇಗಂ, ನಿತಿನ್, ವಿಷ್ಣುತೇಜ, ಕಿರಣ್ ಇತರರು ಇದ್ದರು.