ಸಚಿವರಿಗೆ ಕೈಗಾರಿಕೋದ್ಯಮಿಗಳ ಸರಣಿ ಬೇಡಿಕೆ ಮನವಿ ಸಲ್ಲಿಕೆ
ಮೈಸೂರು

ಸಚಿವರಿಗೆ ಕೈಗಾರಿಕೋದ್ಯಮಿಗಳ ಸರಣಿ ಬೇಡಿಕೆ ಮನವಿ ಸಲ್ಲಿಕೆ

May 9, 2020

ಮೈಸೂರು, ಮೇ 8(ಆರ್‍ಕೆ)- ಲಾಕ್ ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಕೈಗಾ ರಿಕೆಗಳ ಪುನಶ್ಚೇತನಕ್ಕೆ ಆರ್ಥಿಕ ನೆರವು ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡ ಬೇಕೆಂದು ಆಗ್ರಹಿಸಿ ಮೈಸೂರಿನ ವಿವಿಧ ಕೈಗಾರಿಕಾ ಸಂಘಗಳ ಪದಾಧಿಕಾರಿಗಳು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಸರಣಿ ಬೇಡಿಕೆಗಳನ್ನು ಸಲ್ಲಿಸಿದರು.

ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸು ಅವರು ಸಲ್ಲಿಸಿದ ಮನವಿ ಪತ್ರದಲ್ಲಿ ಎಂಎಸ್‍ಎಂಇ ಕೈಗಾರಿಕೆಗಳಿಗೆ 2 ತಿಂಗಳ ಎಂಎಂಟಿ ಚಾರ್ಜ್ ವಿನಾ ಯಿತಿಯನ್ನು ತಕ್ಷಣವೇ ಅನುಷ್ಠಾನಗೊಳಿಸ ಬೇಕು, ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಬೇಕು, ಮಂಜೂರಾಗಿರುವ ಕೈಗಾರಿಕಾ ನಿವೇಶನ ಗಳಿಗೆ ಒಂದು ವರ್ಷ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.

ಸರ್ಕಾರದಿಂದ ನೀಡಲಾಗುವ ಸಹಾಯ ಧನ ಮತ್ತು ರಿಯಾಯಿತಿಯನ್ನು ಕೈಗಾ ರಿಕೆಗಳಿಗೆ ತಕ್ಷಣವೇ ಬಿಡುಗಡೆ ಮಾಡ ಬೇಕು. ಶೇ. 4ರ ಬಡ್ಡಿ ದರದಲ್ಲಿ ಸಾಲ ಮಂಜೂರಾತಿ, ಲಾಕ್‍ಡೌನ್ ಅವಧಿ ಯಲ್ಲಿ ಪಾವತಿಸಬೇಕಾಗಿರುವ ಬ್ಯಾಂಕ್ ಸಾಲದ ಕಂತುಗಳನ್ನು ಕಡೇ ಕಂತಿನ ನಂತರ ಕಟ್ಟಲು ಅವಕಾಶ ಕಲ್ಪಿಸಬೇ ಕೆಂದು ಅವರು ಆಗ್ರಹಿಸಿದರು.

ಅಂತರ ಜಿಲ್ಲಾ ಕಾರ್ಮಿಕರು ಪ್ರಯಾ ಣಿಸಲು ಪಾಸ್ ನೀಡುವ ಅಧಿಕಾರವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ನೀಡಿ ಎಂದು ವಾಸು ಅವರು ಮನವಿ ಮಾಡಿದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ ಅಧ್ಯಕ್ಷ ಸುರೇಶ್‍ಕುಮಾರ್ ಜೈನ್ ಅವರು ನೀಡಿದ ಮನವಿ ಪತ್ರದಲ್ಲಿ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಟೈಲರಿಂಗ್, ಜೆರಾಕ್ಸ್, ಜಾಬ್ ಟೈಪಿಂಗ್, ಕರಕುಶಲ ಉತ್ಪನ್ನಗಳ ತಯಾರಕರು ಹಾಗೂ ಸ್ವಯಂ ಉದ್ಯೋಗಿಗಳಿಗೆ ನೆರವು ನೀಡಬೇಕೆಂದು ಕೋರಿದ್ದಾರೆ.

ಏಪ್ರಿಲ್ ತಿಂಗಳ ಸಂಬಳ ಪಾವತಿಸಲು ಸಮಸ್ಯೆಯಾಗಿರುವುದರಿಂದ ಎರಡು ತಿಂಗಳ ಸಂಬಳವನ್ನು ಕಾರ್ಮಿಕರ ಖಾತೆಗೆ ಸರ್ಕಾರ ನೇರವಾಗಿ ಪಾವತಿಸಬೇಕು. ಕಟ್ಟಡ ಕಾರ್ಮಿಕರಿಗೆ ನೀಡಿರುವಂತೆ ಲೇಬರ್ ಕಾರ್ಡ್ ಮಾದರಿಯ ಗುರುತಿನ ಚೀಟಿ, ಫಿಟ್‍ನೆಸ್ ಮತ್ತು ವೆರಿಫಿಕೇಷನ್ ಸರ್ಟಿಫಿಕೇಟ್ ಅನ್ನು ಕಾರ್ಮಿಕರಿಗೆ ನೀಡಬೇಕೆಂದು ಮನವಿ ಮಾಡಿದರು.

Translate »