ಮೈಸೂರಿನ ಭೂ ಮಾಫಿಯಾ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿ
ಮೈಸೂರು

ಮೈಸೂರಿನ ಭೂ ಮಾಫಿಯಾ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿ

June 3, 2021

ಮೈಸೂರು,ಜೂ.2(ಪಿಎಂ)- ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿಯಾಗಿದ್ದು, ಅವರನ್ನು ಟೀಕಿಸುವುದು ಸರಿಯಲ್ಲವೆಂದು ಕೆಲವರ ಟೀಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಸುಮಾರು 25 ವರ್ಷಗಳಿಂದ ಮೈಸೂರಿ ನಲ್ಲಿ ನಡೆದಿರುವ ಭೂ ಮಾಫಿಯಾ ಬಗ್ಗೆ ಸಮಗ್ರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸು ವಂತೆ ಜಿಲ್ಲಾಧಿಕಾರಿಗಳನ್ನು ಕೋರಿದರು.
ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತದಲ್ಲಿ (ಆರ್ ಗೇಟ್) ಮಲಗಿ ವಿಭಿನ್ನ ವಾಗಿ ಏಕಾಂಗಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಕೋವಿಡ್ ಹಿನ್ನೆಲೆಯಲ್ಲಿ ಎಸ್‍ಎಸ್ ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಗಳನ್ನು (ರಾಜ್ಯ ಪಠ್ಯಕ್ರಮ) ರದ್ದುಗೊಳಿಸಿ, ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕರ್ತವ್ಯ ನಿಷ್ಠೆಗೆ ಗೌರವ ನೀಡಬೇಕು. ಅವರು ಗಂಡು ಮಹಿಳೆ. ಸಾಮಾನ್ಯ ಜನತೆಗೆ ನ್ಯಾಯ ದೊರೆಯಲು ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ರೋಹಿಣಿ ಸಿಂಧೂರಿ ಅವರಂತಹ ಅಧಿಕಾರಿ ಮೈಸೂರಿಗೆ ಬೇಕು. ಸುಮಾರು 25 ವರ್ಷಗಳಲ್ಲಿ ಮೈಸೂರಿನಲ್ಲಿ ನಡೆದಿರುವ ಭೂ ಒತ್ತುವರಿ, ಕಬಳಿಕೆ ಸಂಬಂಧ ಸಮಗ್ರವಾಗಿ ಕಡತ ಗಳನ್ನು ಕಲೆ ಹಾಕಿ, ಸರ್ಕಾರಕ್ಕೆ ಸಂಪೂರ್ಣ ವರದಿ ಸಲ್ಲಿಸುವಂತೆ ಡಿಸಿಯವರಲ್ಲಿ ಮನವಿ ಮಾಡಿದ ಅವರು, ಅಂತೆಯೇ ಸರ್ಕಾರ ಸದರಿ ವರದಿ ಬಹಿರಂಗಪಡಿಸ ಬೇಕು ಎಂದು ಒತ್ತಾಯಿಸಿದರು.

ಪಿಎಸಿ ತನಿಖೆಗೆ ಮುಂದಾಗಲಿ: ಮೈಸೂರು ಭೂ ಮಾಫಿಯಾ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಯಾರ್ಯಾರು ಇದರ ಹಿಂದೆ ಇದ್ದಾರೆ. ಎಷ್ಟು ಲಕ್ಷ ಸಾವಿರ ಕೋಟಿ ರೂ. ಇದರಿಂದ ಸರ್ಕಾರಕ್ಕೆ ಬರಬೇಕಿದೆ ಎಂಬುದು ತನಿಖೆಯಾಗಬೇಕು. ಈ ಸಂಬಂಧ ವಿಧಾನಮಂಡಲ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಖುದ್ದು ಮೈಸೂರಿಗೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಲ್ಲಿ ಈ ಸಾಲಿನ ಸಿಬಿಎಸ್‍ಇ, ಐಸಿಎಸ್‍ಇ ಪಠ್ಯಕ್ರಮದ 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲಾ ಗಿದೆ. ಅಂತೆಯೇ ರಾಜ್ಯದಲ್ಲೂ ಎಸ್‍ಎಸ್ ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ (ರಾಜ್ಯ ಪಠ್ಯಕ್ರಮ) ಇಲ್ಲದೇ ವಿದ್ಯಾರ್ಥಿ ಗಳನ್ನು ತೇರ್ಗಡೆ ಮಾಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು. ಈ ಸಂಬಂಧ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ವಿದ್ಯಾರ್ಥಿಗಳಿಗೆ ಕೇವಲ 2 ತಿಂಗಳು ಪಾಠ ನಡೆದಿದ್ದು, ಇನ್ನು ಆನ್‍ಲೈನ್ ಪಾಠ ದಿಂದ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಮಡಿವಂತಿಕೆ ಬಿಟ್ಟು ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲೇಬೇಕು ಎಂದು ಒತ್ತಾಯಿಸಿದರು.

Translate »