ಕೊರೊನಾ ಸೋಂಕಿತ ಇಬ್ಬರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ಚೆಲುವಾಂಬ ವೈದ್ಯರ ತಂಡ
ಮೈಸೂರು

ಕೊರೊನಾ ಸೋಂಕಿತ ಇಬ್ಬರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ಚೆಲುವಾಂಬ ವೈದ್ಯರ ತಂಡ

June 29, 2020

ಮೈಸೂರು,ಜೂ.28(ಎಂಟಿವೈ)- ಸಾಂಸ್ಕøತಿಕ ನಗರಿ ಮೈಸೂ ರಿನ ಚೆಲುವಾಂಬ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಜಯಲಕ್ಷ್ಮೀ ಪುರಂ ಲಕ್ಷ್ಮೀದೇವಮ್ಮ ಶಂಕರ್‍ಶೆಟ್ಟಿ ಹೆರಿಗೆ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಇಬ್ಬರು ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು, ತಾಯಿ, ಮಕ್ಕಳು ಆರೋಗ್ಯದಿಂದಿದ್ದಾರೆ. ಮೈಸೂರಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ ಮೂರನೇ ಪ್ರಕರಣ ಇದಾಗಿದೆ.

ಮೈಸೂರು ಜಿಲ್ಲೆಯಲ್ಲಿ ಕೆ.ಆರ್.ನಗರ ಹಾಗೂ ಬನ್ನೂರು ನಿವಾಸಿಗಳಾದ ಇಬ್ಬರು ತುಂಬು ಗರ್ಭಿಣಿಯರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಕೊರೊನಾ ಸೋಂಕಿತ ಗರ್ಭಿಣಿಯರಿಗಾಗಿಯೇ ಮೀಸಲಿರಿಸಿರುವ ಜಯಲಕ್ಷ್ಮೀಪುರಂ ಲಕ್ಷ್ಮೀದೇವಮ್ಮ ಶಂಕರ್ ಶೆಟ್ಟಿ ಹೆರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ರಾತ್ರಿ ಇಬ್ಬರೂ ಸೋಂಕಿತರಿಗೂ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಚೆಲುವಾಂಬ ಆಸ್ಪತ್ರೆಯ ಇಬ್ಬರು ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಇಬ್ಬರು ಅರವಳಿಕೆ ತಜ್ಞರ ಹಾಗೂ ಇಬ್ಬರು ಮಕ್ಕಳ ತಜ್ಞರನ್ನು ಕರೆಸಿಕೊಳ್ಳಲಾಯಿತು. ಆರು ಮಂದಿ ವೈದ್ಯರ ತಂಡಕ್ಕೆ ಮೂವರು ಸ್ಟಾಫ್ ನರ್ಸ್ ಹಾಗೂ ಓರ್ವ ಡಿ ಗ್ರೂಪ್ ಸಿಬ್ಬಂದಿಯನ್ನು ಹೆರಿಗೆಗೆ ನಿಯೋಜಿಸಲಾಯಿತು. ರಾತ್ರಿ 11.28ಕ್ಕೆ ಒಬ್ಬರಿಗೆ ಹೆರಿಗೆ ಮಾಡಿಸಿ ದರೆ, ಮಧ್ಯರಾತ್ರಿ (ಮುಂಜಾನೆ) 2.30ಕ್ಕೆ ಮತ್ತೊಬ್ಬರಿಗೆ ಹೆರಿಗೆ ಮಾಡಿಸಲಾಯಿತು. ಮೂವರು ಸ್ಟಾಫ್ ನರ್ಸ್, ಓರ್ವ ಮಹಿಳಾ ಸಿಬ್ಬಂದಿ ಹಾಗೂ ಆರು ಮಂದಿ ವೈದ್ಯರ ತಂಡ ಭಾನುವಾರ ಮುಂಜಾನೆ 5 ಗಂಟೆವರೆಗೂ ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಗಮನ ಕೊಟ್ಟು ಉಪಚರಿಸುತ್ತಿದ್ದರು. ನಂತರ ವಷ್ಟೇ ಇಬ್ಬರ ಆರೋಗ್ಯವೂ ಸ್ಥಿರವಾಗಿರುವುದನ್ನು ಮನಗಂಡು ವೈದ್ಯರು ವಿಶ್ರಾಂತಿಗೆ ತೆರಳಿದರು. ಹೆರಿಗೆ ಮಾಡಿಸುವ ವೇಳೆ ಎಲ್ಲರಿಗೂ ಪಿಪಿಇ ಕಿಟ್ ನೀಡಲಾಗಿತ್ತು. ಅದನ್ನು ಧರಿಸಿಯೇ ಕರ್ತವ್ಯ ನಿರ್ವಹಿಸಿದರು. ಜೂ.20ರಂದು ಸೋಂಕಿತ ಗರ್ಭಿಣಿ ಯೊಬ್ಬರಿಗೆ ಚೆಲುವಾಂಬ ಆಸ್ಪತ್ರೆಯ ವೈದ್ಯರ ತಂಡ ಜಯಲಕ್ಷ್ಮೀಪುರಂ ಹೆರಿಗೆ ಆಸ್ಪತ್ರೆಯಲ್ಲೇ ಯಶಸ್ವಿಯಾಗಿ ಹೆರಿಗೆ ಮಾಡಿಸಿತ್ತು. ಕಳೆದ ರಾತ್ರಿ ಆದ ಎರಡು ಹೆರಿಗೆಯಿಂದಾಗಿ ಮೈಸೂರಲ್ಲಿ ಒಟ್ಟು ಮೂವರು ಸೋಂಕಿತ ಗರ್ಭಿಣಿಯರಿಂದ ಹೆರಿಗೆ ಮಾಡಿಸಿದಂತಾ ಗಿದೆ. ಸೋಂಕಿತ ಗರ್ಣಿಣಿಯರಿಗಾಗಿಯೇ ಜಯಲಕ್ಷ್ಮೀಪುರಂ ಹೆರಿಗೆ ಆಸ್ಪತ್ರೆಯನ್ನು ಕೋವಿಡ್ ಹೆರಿಗೆ ಆಸ್ಪತ್ರೆಯಾಗಿ ಕಾಯ್ದಿರಿಸಲಾಗಿದ್ದು, ಈ ಆಸ್ಪತ್ರೆಯಲ್ಲಿ ಸೋಂಕಿಲ್ಲದ ಗರ್ಭಿಣಿಯನ್ನು ದಾಖಲಿಸಿಕೊಳ್ಳುವುದಿಲ್ಲ. ಎಲ್ಲರನ್ನು ಚೆಲುವಾಂಬ ಆಸ್ಪತ್ರೆಗೆ ಕಳುಹಿಸ ಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಇದೇ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ಸಾಧ್ಯತೆ ಹೆಚ್ಚಾಗಿದೆ

Translate »