ನವದೆಹಲಿ, ಜೂ.28- ಕೊರೊನಾ ಸೋಂಕು ಇಡೀ ದೇಶವನ್ನೇ ಕಾಡುತ್ತಿದೆ. ಅನ್‍ಲಾಕ್‍ನಲ್ಲಿ ನಮಗೆ ಎರಡು ಮಹತ್ವದ ಜವಾಬ್ದಾರಿಗಳಿವೆ. ಒಂದು ಕೊರೊನಾ ಸೋಲಿಸುವುದು. ಮತ್ತೊಂದು ಆರ್ಥಿಕತೆ ಸುಧಾರಿಸುವುದು. ಹೀಗಾಗಿ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಷ್ಟ್ರವನ್ನುದ್ದೇಶಿಸಿ ತಮ್ಮ 66ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 6 ತಿಂಗಳ ಹಿಂದೆ ಕೊರೊನಾ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಇದೀಗ ಅದು ದೇಶ ವನ್ನೇ ಆವರಿಸಿಕೊಂಡಿದೆ. ಕೊರೊನಾ ಜೊತೆಗೆ ಆಂಫಾನ್ ಚಂಡಮಾರುತ, ನಿಸರ್ಗ ಚಂಡಮಾರುತ, ಮಿಡತೆ ದಾಳಿ, ಅಲ್ಲಲ್ಲಿ ಸಣ್ಣ ಭೂಕಂಪಗಳು ಇವೆಲ್ಲ ದರ ಮಧ್ಯೆ ನೆರೆ ದೇಶ ನೀಡುತ್ತಿರುವ ಕಿರುಕುಳದ ವಿರುದ್ಧ ಸಹ ಹೋರಾಡಬೇಕಾಗಿದೆ ಎಂದರು.
ಮುಂಜಾಗ್ರತೆ ಪಾಲಿಸದೆ ಇದ್ದಲ್ಲಿ ನಿಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕಲಿದೆ. ಹೀಗಾಗಿ 6 ಅಡಿ ಅಂತರ ದಲ್ಲಿ ನಿಂತು ಮಾತನಾಡಿ. ಕೊರೊನಾ ಎದುರಿಸಲು ಹಲವು ಹಳ್ಳಿಗಳಲ್ಲಿ ಜನ ಹೋರಾಡುತ್ತಿದ್ದಾರೆ. ಹಲ ವೆಡೆ ಕ್ವಾರಂಟೇನ್ ಕೇಂದ್ರಗಳನ್ನು ಸಿದ್ಧಪಡಿಸಿ ದ್ದಾರೆ. ದೇಶಕ್ಕಾಗಿ ಎಲ್ಲರೂ ಬದುಕಬೇಕಾಗಿದೆ. ವಲಸೆ ಕಾರ್ಮಿಕರಿಗೆ ಅವರು ಇದ್ದಲ್ಲೇ ಕೆಲಸ ಸಿಗುತ್ತಿದೆ. ರೈತರು ಹಾಗೂ ಕಾರ್ಮಿಕರಿಗೆ ನೆರವಾಗಲೆಂದೇ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಮೋದಿ ತಿಳಿಸಿದರು.
ನಾವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳ ಬೇಕಾಗಿದೆ. ಕೊರೊನಾದಿಂದಾಗಿ ಹಲವರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡಬೇಕಾಗಿದೆ. ಈಗ ದೇಶಕ್ಕಾಗಿ ಎಲ್ಲರ ಹೋರಾಟದ ಸಮಯ ವಾಗಿದೆ. ಅದಕ್ಕಾಗಿ ಎಲ್ಲರೂ ಸಮರ್ಥರಾಗೋಣ ಎಂದು ಹೇಳಿದ ಅವರು, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರೈತ ಕಾಮೇಗೌಡರನ್ನು ಶ್ಲಾಘಿಸಿದರು.
ಭಾರತಕ್ಕೆ ಗೆಳೆತನವನ್ನು ಕಾಪಾಡಿಕೊಳ್ಳುವುದು ಗೊತ್ತು, ಅದೇ ವೇಳೆ ಪ್ರತಿಕಾರ ತೀರಿಸಿಕೊಳ್ಳುವುದೂ ಗೊತ್ತು ಎಂದು ಪರೋಕ್ಷವಾಗಿ ಚೀನಾಗೆ ಎಚ್ಚರಿಕೆ ನೀಡಿದ ಮೋದಿ, ಗಾಲ್ವಾನ್ ಕಣಿವೆಯಲ್ಲಿ 20 ಮಂದಿ ಯೋಧರು ತಾಯ್ನಾಡಿಗಾಗಿ ಪ್ರಾಣ ತೆತ್ತಿದ್ದಾರೆ. ಆ ವೀರ ಯೋಧರ ಮೇಲೆ ಭಾರತಕ್ಕೆ ಅಪಾರ ಗೌರವ ವಿದೆ. ಲಡಾಖ್‍ನಲ್ಲಿ ಭೂಮಿ ಕಬಳಿಸಲು ಬಂದವ ರಿಗೆ ಈಗಾಗಲೇ ತಕ್ಕ ಉತ್ತರ ನೀಡಲಾಗಿದೆ. ಶಾಂತಿ ಹಾಗೂ ವಿಕಾಸದ ಹಾದಿಯಲ್ಲಿ ಭಾರತ ಹಿಂದೆಂದಿ ಗಿಂತಲೂ ಮುಂದೆ ಇದೆ. ಭಾರತ ತನ್ನ ಗಡಿ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳುವಲ್ಲಿ ಹೊಂದಿ ರುವ ಬದ್ಧತೆಯನ್ನು ಇಡೀ ವಿಶ್ವವೇ ನೋಡಿದೆ ಎಂದರು.
ಲಡಾಖ್ ಘಟನೆಯಿಂದ ಸ್ಥಳೀಯ ವಸ್ತುಗಳ ಮಹತ್ವ ಗೊತ್ತಾಗಿದೆ. ಹೀಗಾಗಿ ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡೋಣ. ಲಡಾಖ್ ಸಂಘರ್ಷದ ಬಳಿಕ ಹಲವರು ಸ್ವದೇಶಿ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ದೇಶೀ ವಸ್ತುಗಳ ಬಳಕೆಗೆ ಕರೆ ನೀಡುತ್ತಿದ್ದಾರೆ. ಅಸ್ಸಾಂನ ರಜನಿ ಎಂಬುವರು ‘ನಾನು ದೇಶೀ ವಸ್ತುಗಳನ್ನೇ ಇನ್ನು ಮುಂದೆ ಬಳಸುತ್ತೇನೆ. ಮಾತ್ರವಲ್ಲದೆ, ಇತರರಿಗೆ ಸ್ಥಳೀಯ ವಸ್ತುಗಳನ್ನು ಬಳಸುವಂತೆ ಉತ್ತೇಜಿಸುತ್ತೇನೆ’ ಎಂದು ಹೇಳಿದ್ದಾರೆ. ಹೀಗೆ ದೇಶದ ನೂರಾರು ಭಾಗಗಳಿಂದ ಅನೇಕ ಮಂದಿ ನನಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಸ್ವಾವಲಂಬಿಗಳಾಗುವಲ್ಲಿ ಭಾರತೀಯರು ತೆಗೆದುಕೊಂಡಿರುವ ಈ ದಿಟ್ಟ ನಿರ್ಧಾರ ಶ್ಲಾಘನೀಯ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದರು.