ರೈತ ವಿರೋಧಿ ನೀತಿ ವಿರುದ್ಧ ಕಬ್ಬು ಬೆಳೆಗಾರರ ಪ್ರತಿಭಟನೆ
ಮೈಸೂರು

ರೈತ ವಿರೋಧಿ ನೀತಿ ವಿರುದ್ಧ ಕಬ್ಬು ಬೆಳೆಗಾರರ ಪ್ರತಿಭಟನೆ

September 7, 2021

ಮೈಸೂರು, ಸೆ.6(ಆರ್‍ಕೆಬಿ)- ಡೀಸೆಲ್, ಅಡುಗೆ ಅನಿಲ, ರಸಗೊಬ್ಬರದ ದರ ಪದೇ ಪದೆ ಏರಿಸಲಾಗುತ್ತಿದ್ದು, ರೈತರ ಕಬ್ಬಿನ ದರ ನಿಗದಿಯಲ್ಲಿ ಯಾವುದೇ ಮಾನದಂಡವಿಲ್ಲ. ಇದು ರೈತ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿ, ಕಬ್ಬು ಬೆಳೆಗಾರರು ಸೋಮವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಎಫ್‍ಆರ್‍ಪಿ ದರವನ್ನು ಕೇವಲ 50 ರೂ. ಏರಿಕೆ ಮಾಡಿ, 2900 ರೂ. ನಿಗದಿ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ವನ್ನು ಖಂಡಿಸಿದ ಪ್ರತಿಭಟನಾಕಾರರು, ಇದನ್ನು ಕೂಡಲೇ ಪರಿಶೀಲನೆ ನಡೆಸಿ ಟನ್ ಕಬ್ಬಿಗೆ ಕನಿಷ್ಠ ರೂ.3200 ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಸಕ್ಕರೆ ಕಾರ್ಖಾನೆ ಸಕ್ಕರೆ ನಿಯಂತ್ರಣ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ಸಕಾಲಕ್ಕೆ ಕಬ್ಬು ಕಟಾವು ಮಾಡದೆ, ಸರಬರಾಜು ಹಣ ನೀಡದೆ ವಿಳಂಬ ಮಾಡುತ್ತಿದೆ. ಕಬ್ಬಿನ ಉಪ ಉತ್ಪನ್ನ ಗಳ ಲಾಭವನ್ನು ರೈತರಿಗೆ ಹಂಚಿಕೆ ಮಾಡು ತ್ತಿಲ್ಲ. 4-5 ವರ್ಷಗಳಿಂದ ಇಳುವರಿ ಪ್ರಮಾಣವನ್ನು ಕಡಿಮೆ ತೋರಿಸುತ್ತಿದ್ದಾರೆ. ಇದರಿಂದ ರೈತರು ನಷ್ಟಕ್ಕೊಳಗಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬಿನ ಬೆಳೆಯನ್ನು ಫಸಲ್‍ಬೀಮಾ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಬೇಕು. ಕಬ್ಬಿನ ಉಪ ಉತ್ಪನ್ನಗಳ 2019-20, 21ನೇ ಸಾಲಿನ ಲಾಭ ವನ್ನು ರೈತರಿಗೆ ಹಂಚಿಕೆ ಮಾಡಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆ ವಿಳಂಬವಾಗಿ ಪಾವತಿಸುವ ಹಣಕ್ಕೆ ಶೇ.15 ಬಡ್ಡಿ ಸೇರಿಸಿ, ರೈತರಿಗೆ ಕೊಡಿಸಬೇಕು. ಜಿಲ್ಲೆಯ ಬ್ಯಾಂಕು ಗಳು ಸಾಲ ವಸೂಲಾತಿಯಲ್ಲಿ ರೈತರ ಮೇಲಿನ ಕಿರುಕುಳ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿ ಕಾರಿ ಡಾ.ಬಗಾದಿ ಗೌತಮ್, ರೈತರ ಬೇಡಿಕೆ ಗಳನ್ನು ಆಲಿಸಿ, ಬಣ್ಣಾರಿ ಸಕ್ಕರೆ ಕಾರ್ಖಾನೆ ಯವರು ಈಗ ನಿಗದಿಪಡಿಸಿರುವ ದರದಂತೆ ಟನ್ ಕಬ್ಬಿಗೆ ನಾಳೆಯಿಂದಲೇ 2819 ರೂ. ರೈತರ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದ್ದಾರೆ. ಈ ಭರವಸೆ ಬಳಿಕ ಪ್ರತಿಭಟನಾ ಕಾರರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿರುವುದಾಗಿ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು. ಸಂಘದ ಜಿಲ್ಲಾಧ್ಯಕ್ಷ ಪಿ.ಸೋಮ ಶೇಖರ್, ರಾಜ್ಯ ಕಾರ್ಯದರ್ಶಿ ಅತ್ತಳ್ಳಿ ದೇವರಾಜ್, ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಿರಗಸೂರು ಶಂಕರ್, ಕೂಡನ ಹಳ್ಳಿ ರಾಜಣ್ಣ, ಸಿದ್ದೇಶ್, ಬರಡನಪುರ ನಾಗರಾಜ್, ದೇವೇಂದ್ರ ಕುಮಾರ್, ಗೌರಿ ಶಂಕರ ರಾಜಣ್ಣ, ಮಂಜುನಾಥ್, ವೆಂಕ ಟೇಶ್, ರಾಜು ಇನ್ನಿತರರು ಉಪಸ್ಥಿತರಿದ್ದರು

ಎನ್‍ಟಿಎಂ ಶಾಲೆ, ನಿರಂಜನ ಮಠದ ಅಸ್ಮಿತೆ ಉಳಿಸುವ ಪ್ರಯತ್ನವಾಗಿ

Translate »