ನವದೆಹಲಿ: ಜಗದ್ವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಯನ್ನು ನಡೆಸಲು ಸುಪ್ರೀಂ ಕೋರ್ಟ್ ಷರತ್ತುಬದ್ಧ ಅನು ಮತಿ ನೀಡಿದೆ. ಅಲ್ಲದೆ ದೇವಾ ಲಯ ರಥಯಾತ್ರೆ ನಿರ್ವಹಣೆ ಜವಾಬ್ದಾರಿಯನ್ನು ಕೇಂದ್ರ ಮತ್ತು ದೇವಾಲಯ ನಿರ್ವಹಣೆ ಮಂಡ ಳಿಗೆ ವಹಿಸಿದೆ. ಇದರೊಡನೆ ಸುಪ್ರಸಿದ್ಧ ಪುರಿ ಜಗನ್ನಾಥ ರಥ ಯಾತ್ರೆಗೆ ಹಾದಿ ಸುಗಮ ವಾಗಿದೆ. ಆದರೆ ನ್ಯಾಯಾಲಯ ಕೆಲ ಷರತ್ತು ಸಹ ವಿಧಿಸಿದೆ. ಭಕ್ತರು ಇಲ್ಲದೆಯೇ ರಥಯಾತ್ರೆ ನಡೆಸಬೇಕು, ರಥಯಾತ್ರೆ ಕೈಂಕರ್ಯದ ನೇರಪ್ರಸಾರ ಮಾಡಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಆದೇಶಿಸಿದೆ.
ಜೂ.18ರಂದು ನೀಡಿದ್ದ ತನ್ನ ತೀರ್ಪನ್ನು ಬದಲಾಯಿಸಿ ಈ ಸಂಬಂಧ ಸುಪ್ರೀಂ ಕೋರ್ಟ್ ನ್ಯಾಯಪೀಠ ಆದೇಶಿಸಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಥಯಾತ್ರೆ ನಡೆಸಲು ಅನುಮತಿ ನೀಡಲು ಸುಪ್ರೀಂಕೋರ್ಟ್ ಈ ಮೊದಲು ನಿರಾಕರಿಸಿತ್ತು. ಲಾಕ್ಡೌನ್ ನಿರ್ಬಂಧಗಳನ್ನು ಉಲ್ಲಂಘಿಸಿ ರಥಯಾತ್ರೆ ನಡೆಸಿದರೆ ಆ ದೇವರು ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಈ ಹಿಂದೆ ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. ಸಾಮಾಜಿಕ ಅಂತರ ನಿಬಂಧನೆಗಳಿಗೆ ಪ್ರಾಮುಖ್ಯತೆ ಕಲ್ಪಿಸಲು ಯಾತ್ರೆ ನಿರ್ವಹಣೆಯಲ್ಲಿ ಯಂತ್ರಗಳು, ಆನೆಗಳ ಬಳಕೆ ಬಗ್ಗೆ ಹೈಕೋರ್ಟ್ ಒಲವು ತೋರಿಸಿರುವುದು ದೇಗುಲದ ಸತ್ ಸಂಪ್ರದಾಯ ಹಾಗೂ ಕಾಯ್ದೆಗೆ ವಿರುದ್ಧ ಎಂದು ಅರ್ಜಿದಾರರರ ವಾದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದ ನ್ಯಾಯಪೀಠ ಜೂ.18ರಂದು ಪುರಿ ಜಗನ್ನಾಥ್ ರಥಯಾತ್ರೆಗೆ ತಡೆಯಾಜ್ಞೆ ವಿಧಿಸಿ ಆದೇಶಿಸಿತ್ತು. ಇದೀಗ ಕೋರ್ಟ್ ಅನುಮತಿ ದೊರೆತ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭುವನೇಶ್ವರದಲ್ಲಿ ಇಂದು ಸಂಜೆ 5 ಗಂಟೆಗೆ ರಥಯಾತ್ರೆ ಪೂರ್ವಸಿದ್ಧತಾ ಸಭೆ ನಡೆಸಲಿದ್ದಾರೆ.