ಸಭೆ, ಸಮಾರಂಭ, ಮದುವೆ ಇನ್ನಿತರೆ ಕಾರ್ಯಗಳಲ್ಲಿ ಪೊಲೀಸರ ಕಣ್ಗಾವಲು
ಮೈಸೂರು

ಸಭೆ, ಸಮಾರಂಭ, ಮದುವೆ ಇನ್ನಿತರೆ ಕಾರ್ಯಗಳಲ್ಲಿ ಪೊಲೀಸರ ಕಣ್ಗಾವಲು

November 6, 2020

ಮೈಸೂರು, ನ.5(ಎಸ್‍ಬಿಡಿ)- ಕೊರೊನಾ ಸೃಷ್ಟಿಸಿರುವ ಅವಾಂತರವನ್ನು ಜನ ಇಷ್ಟು ಬೇಗ ಮರೆತಿರುವುದು ಆತಂಕಕಾರಿ ಬೆಳವಣಿಗೆ. ಸದ್ಯ ಕೊಂಚ ತಗ್ಗಿರುವ ಕೊರೊನಾ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಮತ್ತೆ ಆರ್ಭಟಿಸುವ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಸಿದ್ದರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ.

ಅದರಲ್ಲೂ ಸೋಂಕು ಹೆಚ್ಚು ಹರಡಲು ಅವಕಾಶವಿರುವ ವಿವಾಹ ಇನ್ನಿತರ ಕಾರ್ಯಕ್ರಮ ಗಳಲ್ಲಂತೂ ನಿರ್ಲಕ್ಷ್ಯದ ಪರಾಕಾಷ್ಠೆ ಕಾಣಬಹುದು. ಕಲ್ಯಾಣ ಮಂಟಪಗಳು, ಸಭಾಂಗಣಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಏಕಕಾಲದಲ್ಲಿ 200ಕ್ಕಿಂತ ಹೆಚ್ಚು ಜನ ಜಮಾಯಿಸಬಾರದು ಎಂಬುದು ವಿವಾಹ ಸಡಗರದಲ್ಲಿ ನೆನಪೇ ಇರುವುದಿಲ್ಲ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆಯಂತೂ ಇಲ್ಲವೇ ಇಲ್ಲ. ಊಟದ ಹಾಲ್‍ನಲ್ಲಿ ನೂಕುನುಗ್ಗಲಿನಲ್ಲಿ ಕೊರೊನಾ ಅಟ್ಟಹಾಸ. ಹೀಗಾದರೆ ಕೊರೊನಾ ನಿಯಂತ್ರಣ ಹೇಗೆ ಸಾಧ್ಯ?. ತಿಂಗಳಿಂದ ಹಂತಹಂತವಾಗಿ ಸೊರಗುತ್ತಿರುವ ಕೊರೊನಾ ಸೋಂಕಿಗೆ ಮತ್ತೆ ನಾವೇ ಶಕ್ತಿ ತುಂಬು ತ್ತಿದ್ದೇವೆ. ಕಲ್ಯಾಣ ಮಂಟಪ, ಸಭಾಂಗಣ ಮಾಲೀ ಕರು, ವ್ಯವಸ್ಥಾಪಕರು, ವಿವಾಹ ಇನ್ನಿತರ ಕಾರ್ಯ ಕ್ರಮ ಆಯೋಜಕರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪ್ರತಿಯೊ ಬ್ಬರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಮೈಸೂರು ನಗರ ಪೊಲೀಸರು ಮಹತ್ವದ ಸಲಹೆ-ಸೂಚನೆ ಜೊತೆಗೆ ನಿಯಮ ಪಾಲಿಸದವರಿಗೆ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.

ಅನುಮತಿ ಕಡ್ಡಾಯ: ನಿನ್ನೆಯಷ್ಟೇ ಕಲ್ಯಾಣ ಮಂಟಪಗಳ ಮಾಲೀಕರ ಸಭೆ ನಡೆಸಿ, ಮುನ್ನೆಚ್ಚರಿಕೆ ಕ್ರಮಗಳ ಸಂಬಂಧ ಸಲಹೆ-ಸೂಚನೆ ನೀಡಲಾಗಿದೆ. ವಿವಾಹ ನಡೆಯುವ ದಿನಾಂಕ, ಕಲ್ಯಾಣ ಮಂಟಪ ಬುಕ್ ಮಾಡಿರುವವರ ಹೆಸರು ಇನ್ನಿತರ ಮಾಹಿತಿಯನ್ನು ಸಮೀಪದ ಪೊಲೀಸ್ ಠಾಣೆಗೆ ನೀಡಲೇಬೇಕೆಂದು ತಿಳಿಸಲಾಗಿದೆ. ಹಾಗೆಯೇ ಒಳಾಂ ಗಣ ಹಾಗೂ ಹೊರಾಂಗಣದಲ್ಲಿ ಆಯೋಜಿಸುವ ಸಾರ್ವ ಜನಿಕ ಕಾರ್ಯಕ್ರಮಗಳಿಗೆ ಆಯಾ ವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ)ರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಗುರುವಾರ ಆದೇಶಿಸಿದ್ದಾರೆ. ಸೋಂಕು ಎಲ್ಲೆಡೆ ಹರಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಲ ನಿರ್ದೇಶನ ನೀಡಲಾಗಿದೆ.  ಕಾರ್ಯಕ್ರಮ ಆಯೋಜಕರೇ ಕೋವಿಡ್-19 ಮಾರ್ಗಸೂಚಿ ಅನುಷ್ಠಾನಕ್ಕೆ ಓರ್ವ ಜವಾಬ್ದಾರಿಯುತ ಪ್ರತಿನಿಧಿಯನ್ನು ನಿಯೋಜಿಸಿ ಅವರ ಮೂಲಕ ಎಸಿಪಿ ಅನುಮತಿಗೆ ಅರ್ಜಿ ಸಲ್ಲಿಸಬೇಕು. ಒಳಾಂಗಣದಲ್ಲಿ ಶೇ.50ರಷ್ಟು ಆಸನ ವ್ಯವಸ್ಥೆ ಮಾಡಬೇಕು. ಸಭಾಂ ಗಣದಲ್ಲಿ ಒಂದು ಸಮಯದಲ್ಲಿ 200ಕ್ಕಿಂತ ಹೆಚ್ಚು ಜನ ಸೇರಿಸಬಾರದು. ಮೈದಾನ ಇನ್ನಿತರ ಹೊರಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸುವಾಗ ಆಯಾ ಸ್ಥಳದ ವಿಸ್ತೀರ್ಣದ ಅನುಸಾರ ಸಾಮಾಜಿಕ ಅಂತರದ ಕಟ್ಟುನಿಟ್ಟಿನ ಪಾಲನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ, ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರತಿನಿಧಿ ನೇಮಿಸಿ: ವ್ಯಾಪಾರ ಮಳಿಗೆ, ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ, ಧಾರ್ಮಿಕ ಸ್ಥಳ, ಸಿನಿಮಾ ಮಂದಿರ, ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಕೋವಿಡ್ ನಿಯಂ ತ್ರಣ ಮಾರ್ಗಸೂಚಿ ಅನುಷ್ಠಾನಕ್ಕೆ ಓರ್ವ ಜವಾಬ್ದಾರಿಯುತ ಪ್ರತಿನಿಧಿ ನೇಮಿಸಿ, ಅವರ ಹೆಸರು ಹಾಗೂ ದೂರವಾಣಿ ಸಂಖ್ಯೆಯನ್ನು ಸ್ಥಳೀಯ ಪೆÇಲೀಸ್ ಠಾಣೆಗೆ ಸಲ್ಲಿಸಬೇಕು. `ಅನುಷ್ಠಾನ ಪ್ರತಿನಿಧಿ’ಗಳು ತಮ್ಮ ಉಸ್ತುವಾರಿಗೆ ಬರುವ ಸಭಾ ಭವನ, ವಾಣಿಜ್ಯ ಮಳಿಗೆ, ಹೋಟೆಲ್, ಬಹಿರಂಗ ಕಾರ್ಯಕ್ರಮಗಳಲ್ಲಿ ಸ್ಥಳದಲ್ಲೇ ಉಪಸ್ಥಿತರಿದ್ದು ಮಾರ್ಗಸೂಚಿಗಳು ಉಲ್ಲಂಘನೆಯಾಗದಂತೆ ಜವಾಬ್ದಾರಿ ವಹಿಸಿಕೊಳ್ಳಬೇಕು. ಸಾಮಾಜಿಕ ಅಂತರವನ್ನು ಗುರುತಿಸಿ, ಅದರಂತೆ ಆಸನದ ವ್ಯವಸ್ಥೆಯನ್ನು ಕಲ್ಪಿಸುವುದು ಮತ್ತು ಯಾವುದೇ ಕಾರಣಕ್ಕೂ ನಿಗದಿಪಡಿಸಿದ ಜನರ ಸಂಖ್ಯೆಯನ್ನು ಮೀರದಂತೆ ಕ್ರಮವಹಿಸಬೇಕು. ಪ್ರವೇಶದ್ವಾರಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಿ, ಶುಚಿತ್ವ ಕಾಪಾಡುವುದು. ಅಗತ್ಯ ಸ್ವಯಂಸೇವಕರನ್ನು ತಾವೇ ನೇಮಕ ಮಾಡಿಕೊಳ್ಳುವುದರ ಜೊತೆಗೆ ಪೆÇಲೀಸರ ಸಹಾಯವನ್ನು ಪಡೆಯಬಹುದು. ಹಾಗೆಯೇ ಸರ್ಕಾರಿ ಕಾರ್ಯಕ್ರಮಗಳನ್ನು ಆಯೋಜಿಸುವವರು ಸಂಬಂಧಪಟ್ಟ ಇಲಾಖೆಯಿಂದ ಒಬ್ಬ ಜವಾಬ್ದಾರಿಯುತ ಅಧಿಕಾರಿಯನ್ನು ನೇಮಿಸಿ ಪೆÇಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆದು, ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಡಾ.ಚಂದ್ರಗುಪ್ತ ಸೂಚನೆ ನೀಡಿದ್ದಾರೆ.

 

 

Translate »