ಲವ್ ಜಿಹಾದ್ ಹತ್ತಿಕ್ಕಲು ಕಠಿಣ ಕಾನೂನು ಜಾರಿ
ಮೈಸೂರು

ಲವ್ ಜಿಹಾದ್ ಹತ್ತಿಕ್ಕಲು ಕಠಿಣ ಕಾನೂನು ಜಾರಿ

November 6, 2020

ಮಂಗಳೂರು, ನ.5(ಕೆಎಂಶಿ)-ಲವ್ ಜಿಹಾದ್ ಅಂಕುಶಕ್ಕೆ ಕಠಿಣ ಕಾನೂನು ತರುವುದಾಗಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಮಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಲವ್ ಜಿಹಾದ್ ಬಗ್ಗೆ ಸಚಿವ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಡಿದ ಪ್ರಸ್ತಾಪಕ್ಕೆ ಮಧ್ಯ ಪ್ರವೇಶಿಸಿ ಮಾತನಾಡಿದ ಮುಖ್ಯ ಮಂತ್ರಿಯವರು, ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ನಡೆಯುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದಕ್ಕೆ ಅಂತ್ಯ ಹಾಡಲು ಕಠಿಣ ಕಾನೂನು ಜಾರಿ ಮಾಡುತ್ತೇನೆ. ಕಾನೂನು ತರುವ ಸಂಬಂಧ ಅಧಿಕಾರಿಗಳೊಟ್ಟಿಗೆ ಸುದೀರ್ಘ ಚರ್ಚೆ ಮಾಡಿದ್ದು, ಮುಂದಿನ ಚಳಿಗಾಲದ ಅಧಿವೇಶನದ ವೇಳೆಗೆ ಕಾಯ್ದೆ ಸಿದ್ಧಗೊಳ್ಳಲಿದೆ.

ಈಗಾಗಲೇ ಉತ್ತರ ಪ್ರದೇಶ ಮತ್ತು ಇನ್ನಿತರ ಎರಡು ರಾಜ್ಯಗಳಲ್ಲಿ ಲವ್ ಜಿಹಾದ್‍ಗೆ ಅಂಕುಶ ಹಾಕಲು ತಂದಿರುವ ಕಾನೂನುಗಳನ್ನು ಅಧಿ ಕಾರಿಗಳು ಪರಿಶೀಲನೆ ಮಾಡಿದ್ದಾರೆ. ಪಕ್ಷದ ತೀರ್ಮಾನಗಳನ್ನು ಸರ್ಕಾರ ಯಥಾವತ್ತಾಗಿ ಪಾಲಿಸುತ್ತದೆ ಎಂದು ತಿಳಿಸಿದ್ದಾರೆ.

ಕೋವಿಡ್ ನಿರ್ವಹಣೆಗೆ ಸರ್ಕಾರ ತೆಗೆದು ಕೊಂಡಿರುವ ಕ್ರಮಗಳ ಬಗ್ಗೆಯು ಮುಖ್ಯಮಂತ್ರಿ ಯವರು ಪ್ರಸ್ತಾಪಿಸಿ, ಸಭೆಗೆ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆಯು ಸುದೀರ್ಘವಾಗಿ ಚರ್ಚೆ ನಡೆದು, ಪರ್ಯಾಯ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ಕೊಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು ಎಂದು ತಿಳಿದು ಬಂದಿದೆ.

2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಕಾರ್ಯಕರ್ತ ರನ್ನು ಸಜ್ಜುಗೊಳಿಸಲು ಕೋರ್ ಕಮಿಟಿ ನಿರ್ಧರಿ ಸಿದೆ. ಪಕ್ಷ ಯಾವ ಭಾಗದಲ್ಲಿ ತನ್ನ ನೆಲೆ ಇಲ್ಲವೋ ಅಂತಹ ಕಡೆ ಕಾಂಗ್ರೆಸ್-ಜೆಡಿಎಸ್ ಮುಖಂ ಡರನ್ನು ಸೆಳೆದುಕೊಂಡು, ಪಕ್ಷದ ಬೇರನ್ನು ಬಿತ್ತಲು ಸಭೆ ನಿರ್ಧರಿಸಿದೆ.

ಅನ್ಯ ಪಕ್ಷಗಳಿಂದ ಮುಖಂಡರು ಬರಲು ಮುಂದಾದರೆ ಈ ಬಗ್ಗೆ ಪರಿಶೀಲನೆ ಮಾಡಿ, ರಾಜ್ಯ ಘಟಕ ಅವರನ್ನು ಸೇರ್ಪಡೆ ಮಾಡಿ ಕೊಳ್ಳಬೇಕು. ಈಗಿನಿಂದಲೇ ಸಿದ್ಧತೆ ಮಾಡಿಕೊಂಡರೆ, ನಾವು ಮತ್ತೆ ಮುಂದೆ ಅಧಿಕಾರಕ್ಕೆ ಬರಬಹುದು ಎಂಬುದರ ಬಗ್ಗೆ ಸಭೆ ವಿಶ್ವಾಸ ವ್ಯಕ್ತಪಡಿಸಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ, ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸಲು ಪಕ್ಷ ಸಿದ್ಧವಿದೆ ಎಂದರು. ಚುನಾವಣೆಯಲ್ಲಿ ಹೆಚ್ಚು ಮತ ಗಳಿಸುವ ಮೂಲಕ ಪಕ್ಷದ ಸಂಘಟನೆಯನ್ನು ವಿಸ್ತರಿಸಲು ಮತ್ತು ಬೇರು ಮಟ್ಟದಲ್ಲಿ ಬೆಳೆಸಲು ಸಹಕಾರಿಯಾಗಲಿದೆ. ಈ ಉದ್ದೇಶದಿಂದ ಪಂಚಾಯತ್ ಚುನಾವಣೆ ನಡೆದರೆ, ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿ ಗಳು ಎಲ್ಲಾ ಕ್ಷೇತ್ರದಲ್ಲೂ ಕಣಕ್ಕಿಳಿಯಲಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದ ವಿಧಾನ ಸಭೆ ಉಪ ಚುನಾವಣೆ ಮತ್ತು ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲೂ ನಮ್ಮ ಪಕ್ಷ ಜಯಭೇರಿ ಭಾರಿಸಲಿದೆ ಎಂದರು. ಲವ್ ಜಿಹಾದ್ ಮತ್ತು ಡ್ರಗ್ಸ್ ಮಾಫಿಯಾ ಗಳನ್ನು ಮಟ್ಟ ಹಾಕಲು ಸರ್ಕಾರ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.

ಅಶೋಕ್ ಗಸ್ತಿ ಅವರ ನಿಧನದಿಂದ ತೆರವಾಗಿರುವ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಮೂರು ನಾಲ್ಕು ಹೆಸರನ್ನು ಅಂತಿಮಗೊಳಿಸಿ, ಕೇಂದ್ರ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲು ಸಭೆ ಸಮ್ಮತಿಸಿತು ಎಂದರು. ಲವ್ ಜಿಹಾದ್ ಜೊತೆಗೆ ಗೋ ಹತ್ಯೆ ನಿಷೇಧಕ್ಕೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಭೆ ಒಮ್ಮತದ ತೀರ್ಮಾನ ಕೈಗೊಂಡಿದೆ. ಗೋಹತ್ಯೆ ನಿಷೇಧಕ್ಕೆ ಹಿಂದೆ 2008ರಲ್ಲಿ ಬಿಜೆಪಿ ಸರ್ಕಾರವು ಕಾನೂನು ಜಾರಿಗೊಳಿಸಿತ್ತು. ನಂತರ ಬಂದ ಸಿದ್ದರಾಮಯ್ಯ ಸರ್ಕಾರ ಅದನ್ನು ರದ್ದುಗೊಳಿಸಿತ್ತು. ಇದೀಗ ಪುನರ್ ವಿಮರ್ಶೆ ಮಾಡಿ, ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

Translate »