ಬಾಗಿಲು ತೆರೆದ ಪ್ರಸಿದ್ಧ ಹಾಸನಾಂಬೆ ದೇವಸ್ಥಾನ
ಮೈಸೂರು

ಬಾಗಿಲು ತೆರೆದ ಪ್ರಸಿದ್ಧ ಹಾಸನಾಂಬೆ ದೇವಸ್ಥಾನ

November 6, 2020

ಹಾಸನ, ನ.5(ಸೋಮೇಶ್)- ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕಲ್ಪಿಸುವ ಇತಿಹಾಸ ಪ್ರಸಿದ್ಧ ಹಾಸನದ ಅಧಿ ದೇವತೆ ಹಾಸನಾಂಬೆ ದೇವಾಲಯದ ಬಾಗಿಲನ್ನು ಗುರು ವಾರ ವಾರ್ಷಿಕ ಧಾರ್ಮಿಕ ವಿಧಿ-ವಿಧಾನದೊಂದಿಗೆ ಗಣ್ಯರ ಸಮ್ಮುಖದಲ್ಲಿ ತೆರೆಯಲಾಯಿತು.

ಮೊದಲು ದೇವಿ ಗರ್ಭಗುಡಿ ಬಾಗಿಲಿಗೆ ಪೂಜೆ ಸಲ್ಲಿಸಿದ ನಂತರ ಅರಸು ಮನೆತನದ ನರಸಿಂಹರಾಜ ಅರಸು ಅವರು ಬಾಳೆ ಕಂದು ಕಡಿಯುವ ಮೂಲಕ ಮಧ್ಯಾಹ್ನ 12.31ರ ಸಮಯಕ್ಕೆ ಸರಿಯಾಗಿ ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆಯಲಾಯಿತು. ಕೊರೊನಾ ಹಿನ್ನೆಲೆಯಲ್ಲಿ ಆಹ್ವಾನಿತರನ್ನು ಬಿಟ್ಟರೆ ಉಳಿದ ಯಾರಿಗೂ ದೇವಾ ಲಯದ ಒಳಗೆ ಪ್ರವೇಶ ಇಲ್ಲ. ಇಂದು ರಾಜಕಾರಣಿಗಳು ಮತ್ತು ಅವರ ಬೆಂಬಲಿಗರ ಬಿಟ್ಟರೆ ಹೆಚ್ಚು ಭಕ್ತರು ಕಂಡು ಬರಲಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ದೇವಾಲಯದ ಆವರಣವನ್ನು ಸ್ಯಾನಿಟೈಸ್ ಮಾಡಲಾಗಿತ್ತು.

ಇಂದಿನಿಂದ ನ.16ರವರೆಗೂ ಹಾಸನಾಂಬೆ ದೇವಸ್ಥಾನದ ಬಾಗಿಲು ತೆಗೆಯಲಿದ್ದು, ಅಲ್ಲಿವರೆಗೂ ಪ್ರತಿನಿತ್ಯ ಪೂಜಾ ಕಾರ್ಯಗಳು ಜರುಗಲಿವೆ. ಮೊದಲ ಮತ್ತು ಕೊನೆ ದಿನ ಮಾತ್ರ ಆಹ್ವಾನಿತರಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾರ್ವಜನಿಕ ರಿಗೆ ಹಾಸನಾಂಬೆ ನೇರ ದರ್ಶನವನ್ನು ನಿಷೇಧಿಸಿದೆ. ಹೀಗಾಗಿ ಸಾರ್ವಜನಿಕರಿಗೆ ದೇವಸ್ಥಾನದ ಆವರಣ ಹಾಗೂ ನಗರದ ವಿವಿಧ ಭಾಗಗಳಲ್ಲಿ ಅಳವಡಿಸಿರುವ ಎಲ್‍ಇಡಿ ಪರದೆ ಗಳ ಮೂಲಕ ಹಾಗೂ ಆನ್‍ಲೈನ್ ನೇರಪ್ರಸಾರದ ಮೂಲಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ದೇವ ಸ್ಥಾನದ ಆವರಣದಲ್ಲಿ ಎಲ್‍ಇಡಿ ಪರದೆಯಲ್ಲಿಯೇ ದೇವಿ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ಆದರೂ ದೇವಿಯ ಮೊದಲ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಿ ದ್ದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ವಿಧಿ-ವಿಧಾನದೊಂದಿಗೆ ಹಾಸನಾಂಬೆ ಬಾಗಿಲನ್ನು ತೆಗೆಯಲಾಗಿದೆ. ಸರಳವಾಗಿ ಈ ಬಾರಿ ಜಾತ್ರೆ ಆಚರಿಸಲಾಗುವುದರಿಂದ ಸಾರ್ವ ಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಎಲ್‍ಇಡಿ ಪರದೆ ಮೂಲಕ ದೇವಿ ದರ್ಶನ ಕಲ್ಪಿಸಲಾಗಿದೆ ಎಂದರು.

ದೇವಸ್ಥಾನದ ಒಳಗೆ ಯಾರೂ ಬರಬೇಡಿ. ಹೊರಗೆ ಕೈ ಮುಗಿದು ತಾಯಿಗೆ ಭಕ್ತಿ ಸಮರ್ಪಿಸಿ. ನ.16ರಂದು ಮಧ್ಯಾಹ್ನ 12 ಗಂಟೆ ನಂತರ ಬಾಗಿಲು ಹಾಕಲಾಗುವುದು. ತಾಯಿಯ ದಯೆಯಿಂದ ಕೊರೊನಾದಿಂದ ಮುಕ್ತಿ ಕಲ್ಪಿಸುವಂತೆ ಪ್ರಾರ್ಥಿಸಿರುವುದಾಗಿ ಹೇಳಿದರು. ಗರ್ಭ ಗುಡಿ ಪ್ರವೇಶದ ವೇಳೆ ವರ್ಷದ ಹಿಂದೆ ಹಚ್ಚಿದ್ದ ಎರಡು ದೀಪ ಬೆಳಗುತ್ತಲೇ ಇದ್ದವು. ಕೆಲವೊಂದು ದೈವೀ ಸಾಕ್ಷಾ ತ್ಕಾರದೊಂದಿಗೆ ಹಾಸನಾಂಬೆ ದೇಶ-ವಿದೇಶದಲ್ಲಿ ಪ್ರಖ್ಯಾತಿ ಗಳಿಸಿ, ಭಾರೀ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿದೆ.

ಇದೇ ವೇಳೆ ಕಾನೂನು ಸಚಿವ ಹೆಚ್.ಸಿ.ಮಾಧು ಸ್ವಾಮಿ ಮಾತನಾಡಿ, ವರ್ಷಕ್ಕೊಮ್ಮೆ ತೆರೆಯುವ ಜಿಲ್ಲೆಯ ಶಕ್ತಿ ದೇವತೆ ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆದು ಸಾರ್ವಜನಿಕರಿಗೆ ಅವಕಾಶ ಕೊಡಲಾಗುತ್ತಿತ್ತು. ಈ ವರ್ಷ ಕೊರೊನಾ ಸೋಂಕಿನ  ಹಿನ್ನೆಲೆಯಲ್ಲಿ ಆಹ್ವಾನಿತರಿಗೆ ಮಾತ್ರ ಪ್ರವೇಶ ಅವಕಾಶ ನೀಡಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಮಾತನಾಡಿ, ಹಾಸನಾಂಬೆ ದೇವಾ ಲಯಕ್ಕೆ ಯಾರು ರಾಜಕೀಯ ಬೆರೆಸಬಾರದು. ಹೊರಗಿನಿಂದ ಹಾಲಿ ಮಂತ್ರಿ, ಮಾಜಿ ಮಂತ್ರಿಗಳು ಬರುವುದರಿಂದ ಜನಪ್ರತಿನಿಧಿಗಳಿಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ ಅವರು ಈ ಬಗ್ಗೆ ಜಿಲ್ಲಾ ಮಂತ್ರಿಗಳಿಗೆ ಮನವಿ ಮಾಡುವುದಾಗಿ ಹೇಳಿದರು.

ಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡ ಮಾತನಾಡಿ, ಯಾರೇ ಜನಪ್ರತಿನಿಧಿಗಳು ಬರಲಿ ಹಾಸನಾಂಬೆ ದೇವಾಲಯದ ಬಾಗಿಲು ತೆಗೆದ ಮೊದಲ ಮತ್ತು ಬಾಗಿಲು ಹಾಕುವ ದಿವಸ ಮಾತ್ರ ದರ್ಶನಕ್ಕೆ ಅವಕಾಶ ಮಾಡಿಕೊಡಲು ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿದ್ದಾರೆ. ಇಂದಿನಿಂದ ಬಾಗಿಲು ಹಾಕುವವರೆಗೂ ಯಾರಿಗೂ ಒಳ ಪ್ರವೇಶ ಇರುವುದಿಲ್ಲ. ಯಾರೇ ಬಂದರೂ ದೇವಾಲಯದ ಹೊರಗೆ ನಿಂತು ಕೈಮುಗಿದು ಎಲ್.ಇ.ಡಿ.ಯಲ್ಲೇ ದರ್ಶನ ಪಡೆದು ವಾಪಸ್ ಹೋಗಬೇಕು ಎಂದರು.

ಈ ವೇಳೆ ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್, ಹಾಗೂ ತಹಸೀಲ್ದಾರ್ ಶಿವಶಂಕರಪ್ಪ, ಜಿಲ್ಲಾ ನ್ಯಾಯಾಧೀಶರು ಸೇರಿದಂತೆ ಇತರರು ಹಾಸನಾಂಬೆ ದೇವಿ ಹಾಗೂ ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ತೆರಳಿ ಮೊದಲ ಪೂಜೆ ಸಲ್ಲಿಸಿದರು.

 

 

Translate »