ಮೈಸೂರು, ನ.8(ಎಂಟಿವೈ)- ಮೈಸೂ ರಲ್ಲಿ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಕಡಿವಾಣ ಹಾಕಲು ವಾರಾಂತ್ಯ ಹಾಗೂ ರಜೆ ದಿನಗಳಲ್ಲಿ ದೀಪಾ ಲಂಕಾರ, ಸಾಮಾನ್ಯ ದಿನಗಳಂದು ನಡೆಯುತ್ತಿದ್ದ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮದಿಂದ ಕಂಗೊಳಿಸುತ್ತಿದ್ದ ಅರಮನೆ ಇನ್ನಷ್ಟು ದಿನ ಮಂಕಾಗಲಿದೆ. ದೀಪಾಲಂಕಾರ ಕಣ್ತುಂಬಿಕೊಳ್ಳಲು ಜನರು ಮುಗಿ ಬೀಳುವುದನ್ನು ಮನಗಂಡು ಮುಂದಿನ ಕೆಲ ದಿನಗಳವರೆಗೆ ದೀಪಾ ಲಂಕಾರ ಮಾಡದಿರಲು ನಿರ್ಧರಿಸಲಾಗಿದೆ.
ಗುಂಪುಗೂಡುವಿಕೆಯಿಂದ ಕೊರೊನಾ ವೈರಸ್ ಹರಡುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ 200ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದಕ್ಕೆ ಕೇಂದ್ರ ಸರ್ಕಾರದ ಕೋವಿಡ್-19 ಮಾರ್ಗಸೂಚಿಯಲ್ಲಿ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ದಿನ ವಾರಾಂತ್ಯ ರಜೆ ದಿನ ಹಾಗೂ ಹಬ್ಬದ ದಿನದಂದು ಅರಮನೆಯ ದೀಪಾಲಂಕಾರಕ್ಕೆ ಹಾಗೂ ಭಾನುವಾರ ಹೊರತುಪಡಿಸಿ ಉಳಿದ ದಿನಗಳಂದು ಸಂಜೆ ವೇಳೆ ಇರುತ್ತಿದ್ದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಮತ್ತಷ್ಟು ದಿನ ಸ್ಥಗಿತ ಗೊಳಿಸಲು ಉದ್ದೇಶಿಸಲಾಗಿದೆ. ದೇಶದಲ್ಲಿ ಕೊರೊನಾ ಸೋಂಕು ವ್ಯಾಪಿಸುವ ಹಿನ್ನೆಲೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾ.22ರಂದು ಕರೆ ನೀಡಿದ್ದ `ಜನತಾ ಕಫ್ರ್ಯೂ’ ದಿನದಿಂದ ಮೈಸೂರು ಅರಮನೆಯ ದೀಪಾಲಂಕಾರ ಹಾಗೂ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು. ಅಂದಿನಿಂದ ಸುಮಾರು 6 ತಿಂಗಳು ಮಂಕಾಗಿಯೇ ಇದ್ದ ಮೈಸೂರು ಅರಮನೆ ನಾಡ ಹಬ್ಬ ದಸರಾ ಮಹೋತ್ಸವದ ವೇಳೆ ಝಗಮಗಿಸುವ ದೀಪಾಲಂಕಾರದಿಂದ ಕಂಗೊಳಿಸಿತ್ತು. ನವರಾತ್ರಿಯ ಆರಂಭ ದಿನವಾದ ಅ.17ರಿಂದ ಜಂಬೂ ಸವಾರಿ ದಿನ ಅ.26ರವರೆಗೆ ದೀಪಾಲಂಕಾರದಿಂದ ಮೈಸೂರು ಅರಮನೆ ದೀಪಾಲಂಕಾರದಿಂದ ನೋಡುಗರ ಕಣ್ಮನ ಸೆಳೆದಿತ್ತು. ಈ ವೇಳೆ ಅರಮನೆ ಆವರಣ ಪ್ರವೇಶಿಸಲು ಕೇವಲ 50 ಮಂದಿಗೆ ಮಾತ್ರ ಅವಕಾಶ ನೀಡಿದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ದೀಪಾಲಂಕಾರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಹಿಂದೆ ವಾರಾಂತ್ಯ ರಜೆ ದಿನ ಹಾಗೂ ಹಬ್ಬದ ದಿನ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಅರಮನೆಗೆ ದೀಪಾಲಂಕಾರ ಮಾಡಲಾಗುತ್ತಿತ್ತು. ಈ ವೇಳೆ 2ರಿಂದ 3 ಸಾವಿರ ಮಂದಿ ಬಂದು ದೀಪಾಲಂಕಾರವನ್ನು ವೀಕ್ಷಿಸುತ್ತಿದ್ದರು. ಅಲ್ಲದೇ ವಾರಾಂತ್ಯ ದಿನವನ್ನು ಹೊರತುಪಡಿಸಿ ಅರಮನೆಗೆ ಧ್ವನಿ ಮತ್ತು ಬೆಳಕು ವ್ಯವಸ್ಥೆ ಮಾಡಲಾಗುತ್ತಿತ್ತು. ಇದನ್ನು ವೀಕ್ಷಿಸಲು ಸುಮಾರು 800 ರಿಂದ 1000 ಮಂದಿ ಆಗಮಿಸುತ್ತಿದ್ದರು. ಇದನ್ನು ಮನಗಂಡು ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ ಅರಮನೆಗೆ ವಾರಾಂತ್ಯ ಹಾಗೂ ವಿಶೇಷ ಸಂದರ್ಭಗಳಲ್ಲಿ ದೀಪಾಲಂಕಾರ ಮಾಡದಿರಲು ನಿರ್ಧರಿಸಲಾಗಿದೆ. ಇದರೊಂದಿಗೆ ಧ್ವನಿ ಮತ್ತು ಬೆಳಕು ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಜನಜಂಗುಳಿ ನೆರೆಯುವುದರಿಂದ ಸ್ಥಗಿತಗೊಳಿಸಲಾಗಿದೆ
ಅರಮನೆಗೆ ಮಾಡುತ್ತಿದ್ದ ದೀಪಾಲಂಕಾರ ಹಾಗೂ ಧ್ವನಿ ಮತ್ತು ಬೆಳಕು ವ್ಯವಸ್ಥೆಯನ್ನು ನೋಡಲು ಸಾವಿರಾರು ಮಂದಿ ಆಗಮಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸೋಂಕು ಹರಡಬಹುದೆಂಬ ಮುಂಜಾಗ್ರತಾ ಕ್ರಮದಿಂದಾಗಿ ವಾರಾಂತ್ಯ ಮತ್ತು ವಿಶೇಷ ದಿನಗಳಂದು ಮಾಡುತ್ತಿದ್ದ ದೀಪಾಲಂಕಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಸಾಮಾನ್ಯ ದಿನಗಳಂದು ಮಾಡುತ್ತಿದ್ದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಸೋಂಕು ನಿಯಂತ್ರಣವಾದ ಬಳಿಕವಷ್ಟೇ ದೀಪಾಲಂಕಾರದೊಂದಿಗೆ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಮತ್ತೆ ಆರಂಭಿಸಲಾಗುತ್ತದೆ. -ಟಿ.ಎಸ್.ಸುಬ್ರಹ್ಮಣ್ಯ, ಉಪ ನಿರ್ದೇಶಕ, ಅರಮನೆ ಆಡಳಿತ ಮಂಡಳಿ