ಸುತ್ತೂರು ಮಠ ಜಾತಿ-ಮತ ಮೀರಿದ ಮಾನವೀಯ ಬಾಂಧವ್ಯದ ಕೇಂದ್ರ
ಮೈಸೂರು

ಸುತ್ತೂರು ಮಠ ಜಾತಿ-ಮತ ಮೀರಿದ ಮಾನವೀಯ ಬಾಂಧವ್ಯದ ಕೇಂದ್ರ

January 12, 2021

ಮೈಸೂರು,ಜ.11(ಆರ್‍ಕೆ)-ಶ್ರೀ ಸುತ್ತೂರು ಮಠ ಜಾತಿ-ಮತ ಮೀರಿದ ಮಾನವೀಯ ಮೌಲ್ಯ ಹೊಂದಿದ ಧಾರ್ಮಿಕ ಕೇಂದ್ರ ವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಬಣ್ಣಿಸಿದ್ದಾರೆ.

ಮೈಸೂರು ಜಿಲ್ಲೆಯ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಗಳವರ 1061ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಜಾತಿ-ಮತ ಮೀರಿದ ಮಾನವೀಯ ಬಾಂಧವ್ಯ ಹೊಂದಿರುವ ಮಠವು, ಬೇರೆ ಮಠ ಹಾಗೂ ಸಂಸ್ಥೆಗಳಿಗೆ ಮಾದರಿ ಯಾಗಿದೆ ಎಂದರು.

ಹತ್ತು ಶತಮಾನಗಳ ಹಿಂದೆ ಲೋಕ ಕಲ್ಯಾಣಕ್ಕಾಗಿ ಕಪಿಲಾ ನದಿ ದಡದಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಮಹಾಸಂಸ್ಥಾನ ಸ್ಥಾಪಿಸಿದ ಶ್ರೀ ಶಿವರಾತ್ರೀಶ್ವರ ಶಿವಯೋಗಿ ಗಳು ಶ್ರೇಷ್ಠ ಸಂತರ ಪೈಕಿ ಪ್ರಾತಸ್ಮರಣೀಯ ರಾದವರಷ್ಟೇ ಅಲ್ಲದೆ, ಗಂಗರು ಮತ್ತು ಚೋಳರ ನಡುವೆ ಸಂಭವಿಸಲಿದ್ದ ಯುದ್ಧ ವನ್ನು ತಡೆದು ಘೋರ ಅನಾಹುತ ತಪ್ಪಿಸಿ ದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ ಎಂದರು.

ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾ ಜಿಕ, ಸಾಹಿತ್ಯಾತ್ಮಕ ಮತ್ತು ಸಾಂಸ್ಕøತಿಕ ಕ್ಷೇತ್ರದ ಅಭ್ಯುದಯಕ್ಕೆ ತಮ್ಮದೆ ಆದ ಭವ್ಯ ಕೊಡುಗೆ ನೀಡುತ್ತಾ ಬಂದಿರುವ ಶ್ರೀಮಠವು. ನಾಡಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲೂ ನೆರವು ನೀಡಿ ತ್ರಿವಿಧ ದಾಸೋಹಗಳ ಮೂಲಕ ಲಕ್ಷಾಂತರ ಮಂದಿಯ ಬಾಳು ಬೆಳಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕರ್ನಾಟಕದಲ್ಲಿ ಮಠಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಬದುಕಿನಲ್ಲಿ ಅಪಾರ ಕೊಡುಗೆ ನೀಡಿವೆ. ಸುತ್ತೂರು ಮಠವು ನಡೆಸುತ್ತಿ ರುವ ಜನಪರ ಚಟುವಟಿಕೆಗಳಿಗೆ ಸರ್ಕಾರ ಸದಾ ಬೆಂಬಲ ನೀಡುತ್ತದೆ ಎಂದು ಅವರು ಇದೇ ಸಂದರ್ಭ ನುಡಿದರು.

ಭಾರತೀಯ ಜ್ಯೋತಿವಿಜ್ಞಾನ ಸಂಶೋ ಧನಾ ಕೇಂದ್ರದ ಅಧ್ಯಕ್ಷರಾದ ಡಾ.ಕೆ.ಜಿ. ಪುಟ್ಟಹೊನ್ನಯ್ಯ ಅವರು ರಚಿಸಿರುವ ಸುತ್ತೂರು ಶ್ರೀ ಶಿವರಾತ್ರೀಶ್ವರ ಪಂಚಾಂಗ ಹಾಗೂ ವಿಜಯಪುರದ ನಿವೃತ್ತ ಉಪ ನ್ಯಾಸಕ ಎಸ್.ಎನ್. ಸಿಂಪಿಗೇರ ಅವರ ‘ಶ್ರೀ ಸುತ್ತೂರೇಶ್ವರ ಶತಕಗಳು’ ಕೃತಿಯನ್ನು ಯಡಿಯೂರಪ್ಪ ಅವರು ಈ ಸಮಾರಂಭ ದಲ್ಲಿ ಬಿಡುಗಡೆ ಮಾಡಿದರು.

ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್, ತೋಟಗಾರಿಕೆ ಹಾಗೂ ಪೌರಾಡಳಿತ ಸಚಿವ ನಾರಾಯಣಗೌಡ, ಶಾಸಕರಾದ ಎಸ್.ಎ. ರಾಮದಾಸ್, ಎಲ್.ನಾಗೇಂದ್ರ, ಜಿ.ಟಿ. ದೇವೇಗೌಡ, ತನ್ವೀರ್‍ಸೇಠ್, ನಿರಂಜನ ಕುಮಾರ್, ಎನ್.ಮಹೇಶ್, ಅಶ್ವಿನ್ ಕುಮಾರ್, ವಿಧಾನ್ ಪರಿಷತ್ ಸದಸ್ಯ ಹೆಚ್.ವಿಶ್ವನಾಥ, ಚಿತ್ರನಟ ದೊಡ್ಡಣ್ಣ, ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

 

 

Translate »