ಮೈಸೂರು ಜನತೆಗೆ ಸಿಹಿ ಸುದ್ದಿ
ಮೈಸೂರು

ಮೈಸೂರು ಜನತೆಗೆ ಸಿಹಿ ಸುದ್ದಿ

March 9, 2021

ಬೆಂಗಳೂರು, ಮೈಸೂರು, ಬಳ್ಳಾರಿ ಮತ್ತು ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಒಟ್ಟು 5 ಕೋಟಿ ರೂಪಾಯಿ ವೆಚ್ಚದಲ್ಲಿ ತುರ್ತು ಚಿಕಿತ್ಸಾ ವಿಭಾಗವನ್ನು ಪ್ರಾರಂಭಿಸಲಾಗುತ್ತಿದೆ. ಅಲ್ಲದೆ ಮೈಸೂರು ವಿಜ್ಞಾನ ಸಂಸ್ಥೆಯಲ್ಲಿ ಟ್ರಾಮಾ ಕೇರ್ ಕೇಂದ್ರ ಪ್ರಾರಂಭ ಮಾಡುತ್ತಿದೆ. ಶಿವಮೊಗ್ಗ ಹಾಗೂ ಮೈಸೂರಿನಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾದೇಶಿಕ ಚಿಕಿತ್ಸಾ ಕೇಂದ್ರ ಪ್ರಾರಂಭ ಮಾಡುವ ಘೋಷಣೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಮೈಸೂರು ಭಾಗದ ಬಹುವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿಗಳು ಈಡೇರಿಸಿರುವ ಮುಖ್ಯಮಂತ್ರಿ ಗಳನ್ನು ಮೈಸೂರು ಜನತೆಯ ಪರವಾಗಿ ಅಭಿನಂದಿಸುವುದಾಗಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಬಹುದಿನಗಳ ಬೇಡಿಕೆಯಾಗಿದ್ದ ನೀರು ಸರಬರಾಜು ಹಾಗೂ ಒಳಚರಂಡಿ ಜಾಲವನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಿ ನಿರ್ವಹಿಸಲು ಮುಡಾ ಮತ್ತು ಹೊರವಲಯ ಪ್ರದೇಶವನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯಾಪ್ತಿಗೆ ಸೇರಿಸಲಾಗಿದೆ. ಕಾವೇರಿ ನೀರಾವರಿ ನಿಗಮದ ವತಿಯಿಂದ ಮೈಸೂರು ಜಿಲ್ಲೆಯ ಕಬಿನಿ ಅಣೆಕಟ್ಟೆಯ ಕೆಳಭಾಗದಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿ ಮಾಡುವುದಾಗಿ ಘೋಷಣೆ ಮಾಡಿದ್ದು ಸ್ವಾಗತಾರ್ಹ ಕ್ರಮವಾಗಿದೆ ಎಂದರು.

ಪರಿಶಿಷ್ಟ ಜಾತಿ, ಪಂಗಡಗಳಿಗೂ ಬಂಪರ್: ಇನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿಗಳಿಗೆ ಹಾಲಿ ಜಾರಿಯಲ್ಲಿರುವ ಶೇ.4ರ ಬಡ್ಡಿ ಸಹಾಯಧನ ಯೋಜನೆ ಯನ್ನು ಮತ್ತಷ್ಟು ವಿಸ್ತರಣೆ ಮಾಡಲಾಗಿದ್ದು, ಮಳಿಗೆ/ಡೀಲರ್‍ಶಿಪ್, ಪ್ರಾಂಚೈಸಿ ಮತ್ತು ಹೋಟೆಲ್ ಉದ್ಯಮ ಸ್ಥಾಪನೆಗೆ ಗರಿಷ್ಠ 1 ಕೋಟಿ ರೂಪಾಯಿವರೆಗೂ ಸಾಲ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಕೃಷಿ ಮತ್ತು ಪೂರಕ ಚಟುವಟಿಕೆ, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ, ಬೆಂಗಳೂರು ಸಮಗ್ರ ಅಭಿವೃದ್ಧಿ, ಸಂಸ್ಕೃತಿ ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ಸೇವಾ ವಲಯಗಳನ್ನಾಗಿ ವಿಂಗಡಿಸಿ ಎಲ್ಲ ವರ್ಗಗಳಿಗೂ ಚೇತರಿಕೆ ನೀಡುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಈ ಸಾಲಿನ ಬಜೆಟ್‍ನಲ್ಲಿ ಮಾಡಿರುವುದನ್ನು ಮುಕ್ತ ಕಂಠದಿಂದ ಸ್ವಾಗತಿಸುವುದಾಗಿ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಬಜೆಟ್ ಅನ್ನು ವಿರೋಧಿಸಿರುವ ಪ್ರತಿಪಕ್ಷಗಳು ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸದೆ ಜನತೆಯ ಅನುಕೂಲಕ್ಕಾಗಿ ಸಹಕರಿಸುವಂತೆ ಸಚಿವರು ವಿಪಕ್ಷಗಳಲ್ಲಿ ಮನವಿ ಮಾಡಿದ್ದಾರೆ. ಕೊರೋನಾ ಸಂಕಷ್ಟದ ಕಾಲದಲ್ಲಿ ಮುಖ್ಯಮಂತ್ರಿಗಳು ಜನಪರ ಬಜೆಟ್ ಅನ್ನು ಕೊಟ್ಟಿದ್ದು, ಸರ್ವರಿಗೂ ಸಮಪಾಲು-ಸಮಬಾಳು ಎನ್ನು ವಂತಹ ಉತ್ತಮ ಯೋಜನೆಗಳನ್ನು ರೂಪಿಸಿದ್ದಾರೆ ಎಂದೂ ತಿಳಿಸಿದ್ದಾರೆ.

Translate »