ಆಸ್ಟ್ರೇಲಿಯಾ ಮುಡಿಗೆ ಟಿ20 ವಿಶ್ವಕಪ್ ಕಿರೀಟ
News

ಆಸ್ಟ್ರೇಲಿಯಾ ಮುಡಿಗೆ ಟಿ20 ವಿಶ್ವಕಪ್ ಕಿರೀಟ

November 15, 2021

ದುಬೈ, ನ.14- ಐಸಿಸಿ ಟಿ20 ವಿಶ್ವಕಪ್‍ನ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಗೆಲುವು ದಾಖಲಿಸುವ ಮೂಲಕ ಆಸ್ಟ್ರೇಲಿಯಾ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕಳೆದ 29 ದಿನಗಳಿಂದ ಯುನೈಟೆಡ್ ಅರಬ್ ಎಮಿ ರೇಟ್‍ನಲ್ಲಿ ನಡೆಯುತ್ತಿದ್ದ 2021ನೇ ಸಾಲಿನ 6ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಗೆ ಭಾನುವಾರ ತೆರೆಬಿದ್ದಿದ್ದು, 5 ಬಾರಿಯ ಏಕದಿನ ವಿಶ್ವಕಪ್ ಚಾಂಪಿ ಯನ್ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಕಿರೀಟಕ್ಕೆ ಮುತ್ತಿಟ್ಟಿದೆ. ಇದರೊಂದಿಗೆ ನ್ಯೂಜಿ ಲೆಂಡ್ ವಿಶ್ವಕಪ್ ಕನಸು ಭಗ್ನಗೊಂಡಿದ್ದು, ನಾಯಕ ಕೇನ್ ವಿಲಿಯಮ್ಸನ್ ಹೋರಾಟವು ವ್ಯರ್ಥವೆನಿಸಿದೆ.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನು ವಾರ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 173ರನ್‍ಗಳ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಮಿಚೆಲ್ ಮಾರ್ಷ್ ಹಾಗೂ ಡೇವಿಡ್ ವಾರ್ನರ್ ಅಮೋಘ ಆಟದ ನೆರವಿನಿಂದ ಇನ್ನೂ 7 ಎಸೆತಗಳು ಬಾಕಿ ಉಳಿ ದಿರುವಂತೆಯೇ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಇನ್ನಿಂಗ್ಸ್ ಆರಂಭದಲ್ಲಿ ಆಸೀಸ್ ನಾಯಕ ಆರೋನ್ ಫಿಂಚ್ (5 ರನ್) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ 2ನೇ ವಿಕೆಟ್‍ಗೆ ಜೊತೆಯಾದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಕಿವೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದು ರಿಸಿದ ಈ ಜೋಡಿ 92ರನ್‍ಗಳ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾಯಿತು. 38 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ನಿಂದ 53 ರನ್ ಗಳಿಸಿದ್ದ ವಾರ್ನರ್, ಟ್ರೆಂಟ್ ಬೌಲ್ಟ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಮಾರ್ಷ್ ಜೊತೆಯಾದ ಮ್ಯಾಕ್ಸ್‍ವೆಲ್ ಉಪಯುಕ್ತ ಬ್ಯಾಟಿಂಗ್ ಮಾಡಿದರು. 3ನೇ ವಿಕೆಟ್‍ಗೆ ಈ ಜೋಡಿ 66 ರನ್‍ಗಳ ಕಾಣಿಕೆ ನೀಡಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಆಸ್ಟ್ರೇಲಿಯಾ 18.5 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತು. 50 ಎಸೆತಗಳನ್ನು ಎದುರಿಸಿದ ಮಿಚೆಲ್ ಮಾರ್ಷ್ 6 ಬೌಂಡರಿ, 4 ಸಿಕ್ಸರ್‍ನಿಂದ 77ರನ್ ಹಾಗೂ ಗ್ಲೆನ್ ಮ್ಯಾಕ್ಸ್‍ವೆಲ್ 28 ರನ್ ಗಳಿಸಿ ಅಜೇಯರಾಗಿ ಉಳಿದರು. ಬೌಲಿಂಗ್‍ನಲ್ಲಿ ನ್ಯೂಜಿಲೆಂಡ್ ಪರವಾಗಿ ಟ್ರೆಂಟ್ ಬೌಲ್ಟ್ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 28ರನ್ ಆಗುವಷ್ಟರಲ್ಲಿಯೇ ಡೆರಿಲ್ ಮಿಚೆಲ್ 11 ರನ್ ವಿಕೆಟ್ ಕಳೆದುಕೊಂಡಿತ್ತು. ನಂತರ ಮಾರ್ಟಿನ್ ಗಪ್ಟಿಲ್ ಜೊತೆಯಾದ ನಾಯಕ ಕೇನ್ ವಿಲಿಯಮ್ಸನ್ 48ರನ್‍ಗಳ ಜೊತೆಯಾಟದ ಕಾಣಿಕೆ ನೀಡಿದರು. ಆದರೆ, 35 ಎಸೆತಗಳನ್ನು ಎದುರಿಸಿದ ಗಪ್ಟಿಲ್ 28ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಗ್ಲೆನ್ ಫಿಲಿಪ್ಸ್ 18ರನ್ ಗಳಿಸಿ ಬೇಗನೇ ವಿಕೆಟ್ ಒಪ್ಪಿಸಿದರು. ನಾಯಕನಿಗೆ ತಕ್ಕ ಆಟವಾಡಿದ ಕೇನ್ ವಿಲಿಯಮ್ಸನ್ 48 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್‍ನಿಂದ 85ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ನ್ಯೂಜಿಲೆಂಡ್ ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡು 172ರನ್‍ಗಳ ಸವಾಲಿನ ಮೊತ್ತ ದಾಖಲಿಸಿತು.

ತಂಡದ ಪರವಾಗಿ ಜೇಮ್ಸ್ ನಿಶಾಮ್ ಅಜೇಯ 13, ಟಿಮ್ ಸೀಫರ್ಟ್ 8ರನ್ ಗಳಿಸಿದರು. ಬೌಲಿಂಗ್‍ನಲ್ಲಿ ಆಸೀಸ್ ಪರವಾಗಿ ಜೋಶ್ ಹೇಜಲ್‍ವುಡ್ 3, ಆಡಮ್ ಝಂಪಾ ಒಂದು ವಿಕೆಟ್ ಪಡೆದರು. ಉತ್ತಮ ಬ್ಯಾಟಿಂಗ್ ಮಾಡಿದ ಮಿಚೆಲ್ ಮಾರ್ಷ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಹಾಗೂ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಡೇವಿಡ್ ವಾರ್ನರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್: ಮುಂದಿನ ವರ್ಷ ಆಸ್ಟ್ರೇಲಿಯಾ ದಲ್ಲಿ ಐಸಿಸಿ ಪುರುಷರ ಟಿ-20 ವಿಶ್ವಕಪ್ ಟೂರ್ನಿ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿಳಿಸಿದೆ. ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿದ್ದು, ದೇಶದ ವಿವಿಧ ಕ್ರೀಡಾಂಗಣದಲ್ಲಿ 45 ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ಕ್ರಿಕೆಟ್‍ನ ಸುದೀರ್ಘ ಇತಿಹಾಸದಲ್ಲಿ, ಐಸಿಸಿ ಪುರುಷರ ಟಿ20 ವಿಶ್ವಕಪ್ ಅನ್ನು ಇದೇ ಮೊದಲು ಆಯೋಜಿಸಲಿದೆ. ಇದಕ್ಕೂ ಮುನ್ನ 2020ರಲ್ಲಿ ಮಹಿಳಾ ಪಂದ್ಯಾವಳಿ ಆಯೋಜಿಸಿತ್ತು. ಅಲ್ಲದೆ ಫೈನಲ್‍ನಲ್ಲಿ 86,174 ಅಭಿಮಾನಿಗಳು ಭಾಗವಹಿಸಿದ್ದರು.

Translate »