ಮೈಸೂರಲ್ಲಿ ಮಳೆಯಿಂದ ಅವಾಂತರ
ಮೈಸೂರು

ಮೈಸೂರಲ್ಲಿ ಮಳೆಯಿಂದ ಅವಾಂತರ

November 15, 2021

ಮೈಸೂರು,ನ.14(ಎಸ್‍ಬಿಡಿ)- ಮೈಸೂರಲ್ಲಿ ಶನಿವಾರ ರಾತ್ರಿಯಿಡೀ ಸುರಿದ ಮಳೆಯಿಂದ ಮರವೊಂದು ಮುರಿದುಬಿದ್ದಿದ್ದು, ಹಲವಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಶನಿವಾರ ರಾತ್ರಿ ಆರಂಭವಾದ ಮಳೆ ಭಾನುವಾರ ಮುಂಜಾನೆವರೆಗೂ ಎಡೆಬಿಡದೆ ಸುರಿದ ಪರಿಣಾಮ ರಸ್ತೆಗಳೆಲ್ಲಾ ಜಲಾವೃತವಾಗಿ ರಾಜ ಕಾಲುವೆಗಳು ತುಂಬಿ ಹರಿಯುತ್ತಿದ್ದವು. ಅಲ್ಲದೆ ತಗ್ಗುಪ್ರದೇಶದ ಹಲವಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಕೆಲ ಬಡಾವಣೆಗಳ ಮನೆಗಳ ಸುತ್ತ ನೀರು ಆವರಿಸಿತ್ತು. ಅಲ್ಲದೆ ನಂಜನಗೂಡು, ಸುತ್ತೂರು ಹಾಗೂ ತಿ.ನರಸೀಪುರದಲ್ಲಿ ತಲಾ ಒಂದೊಂದು ಮನೆಯ ಗೋಡೆಗಳು ನೆಲಸಮಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.

ನೆಲಕ್ಕುರುಳಿದ ಮರ: ಮೈಸೂರಿನ ದಿವಾನ್ಸ್ ರಸ್ತೆ, ಪಶುಸಂಗೋ ಪನಾ ಇಲಾಖೆ ಕಚೇರಿ ಆವರಣದಲ್ಲಿದ್ದ
ಮರವೊಂದು ಉರುಳಿಬಿದ್ದು ಕಾಂಪೌಂಡ್ ಹಾಳಾಗಿದೆ. ಮರ ರಸ್ತೆಗೆ ಬಿದ್ದಿದ್ದರಿಂದ 2 ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು. ಪಾಲಿಕೆ ಅಭಯ ತಂಡದವರು ಮರವನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ಬೋಗಾದಿ ಜನ ತತ್ತರ: ರಾತ್ರಿಯಿಡೀ ಒಂದೇ ಸಮನೆ ಮಳೆ ಸುರಿದಿದ್ದರಿಂದ ಬೋಗಾದಿ ಕೆರೆಯ ನೀರಿನ ಪ್ರಮಾಣ ಹೆಚ್ಚಾಗಿ, ರಾಜಕಾಲುವೆ ತುಂಬಿ ಹರಿದ ಪರಿಣಾಮ ಬೋಗಾದಿ 2ನೇ ಹಂತ ಅಮೃತಾನಂದಮಯಿ ಕಾಲೇಜು ಸಮೀಪದ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಭಾನುವಾರ ಮುಂಜಾನೆ ವೇಳೆಗೆ ಮನೆಯೊಳಗೆ ಸುಮಾರು 2 ಅಡಿಯಷ್ಟು ನೀರು ತುಂಬಿದ್ದರಿಂದ ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದೆ. ಕೆಲವರು ಪಂಪಿಂಗ್ ಮೋಟರ್ ಮೂಲಕ ಮನೆಯಿಂದ ನೀರು ಹೊರಹಾಕಿದರು. ಈ ಭಾಗದ ಅನೇಕ ಮನೆಗಳು ಜಲಾವೃತವಾಗಿದ್ದು, ಭಾನವಾರ ಮಧ್ಯಾಹ್ನದ ವೇಳೆಗೆ ನೀರಿನ ಪ್ರಮಾಣ ತಗ್ಗಿದೆ.

ಸ್ಥಳೀಯ ಕಾರ್ಪೊರೇಟರ್ ನಿರ್ಮಲಾ ಹರೀಶ್ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಕಂದಾಯಾಧಿಕಾರಿ ಸೇರಿದಂತೆ ಪಾಲಿಕೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ, ಸಾರ್ವಜನಿಕರಿಗಾದ ನಷ್ಟದ ವಿವರವನ್ನು ನಮೂದಿಸಿಕೊಂಡು, ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಶನಿವಾರ ರಾತ್ರಿ ಸುರಿದಂತೆ ಮತ್ತೆ ಮಳೆಯಾದರೆ ಮತ್ತಷ್ಟು ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಕುಟುಂಬವೊಂದು ಮನೆಯಲ್ಲಿ ವಾಸಿಸಲಾಗದೆ ಇಂದು ಬೆಳಗ್ಗೆ ಸಂಬಂಧಿಕರ ಮನೆಗೆ ತೆರಳಿದೆ ಎಂದು ಸ್ಥಳೀಯರಾದ ನಂದಿನಿ ಹಾಲು ಮಾರಾಟಗಾರರ ಸಂಘದ ಅಧ್ಯಕ್ಷ ಕುಮಾರ್ ತಿಳಿಸಿದ್ದಾರೆ.

ಆಸ್ಪತ್ರೆಗೆ ನುಗ್ಗಿದ ನೀರು: ನಗರದ ಖಾಸಗಿ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರವಾಗಿತ್ತು. ನೆಲ ಮಾಳಿಗೆ ಜಲಾವೃತವಾಗಿದ್ದರಿಂದ ಅಲ್ಲಿದ್ದ ರಕ್ತ ಪರೀಕ್ಷೆ ಪ್ರಯೋಗಾಲಯದ ಉಪಕರಣಗಳನ್ನು ತಾತ್ಕಾಲಿಕವಾಗಿ ಕಟ್ಟಡದ ಮೇಲಂತಸ್ತಿಗೆ ಸ್ಥಳಾಂತರಿಸಲಾಗಿದೆ. ಪಂಪಿಂಗ್ ಮೋಟಾರ್ ಮೂಲಕ ನೀರನ್ನು ಹೊರಹಾಕಲಾಯಿತು. ಇದರಿಂದ ಕೆಲಕಾಲ ಲಿಫ್ಟ್ ಕಾರ್ಯ ನಿರ್ವಹಿಸದೆ ರೋಗಿಗಳು ಪರದಾಡಬೇಕಾಯಿತು.

ಇಲವಾಲದ ಬಡಾವಣೆ ಜಲಾವೃತ: ಇಲವಾಲ ಸಮೀಪದ ಮಾನಸ ಹೆರಿಟೇಜ್ ಬಡಾವಣೆ ಮನೆಗಳು ಜಲಾವೃತವಾಗಿವೆ. ಚರಂಡಿ, ರಾಜಕಾಲುವೆ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಮಳೆ ನೀರು ಹರಿಯದೆ ನಿಂತಲ್ಲೇ ನಿಂತಿದೆ. ಇಲ್ಲಿನ ಜನ ಓಡಾಡಲಾಗದೆ ಪರಿತಪಿಸುತ್ತಿದ್ದಾರೆ. ಬಡಾವಣೆ ಅಭಿವೃದ್ಧಿಕಾರರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇಲವಾಲ ಗ್ರಾಮ ಪಂಚಾಯ್ತಿ ಅಧಿಕಾರಿಗಳೂ ಗಮನಹರಿಸುತ್ತಿಲ್ಲ. ನೀರು ನಿಂತಿರುವುದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ರೋಗ ಹರಡುವ ಭೀತಿ ಸೃಷ್ಟಿಯಾಗಿದೆ. ಮಳೆ ಮುಂದುವರೆದರೆ ಮನೆಗಳಿಗೆ ಹಾನಿಯಾಗುವ ಆತಂಕ ಎದುರಾಗಿದೆ ಎಂಬುದು ನಿವಾಸಿಗಳ ಅಳಲಾಗಿದೆ.

ಉಕ್ಕುತ್ತಿರುವ ಮ್ಯಾನ್‍ಹೋಲ್: ಕುಕ್ಕರಹಳ್ಳಿ ಕೆರೆ ಸಮೀಪ ಬೋಗಾದಿ ರಸ್ತೆಯಲ್ಲಿರುವ ಮ್ಯಾನ್‍ಹೋಲ್‍ನಿಂದ ನೀರು ಉಕ್ಕಿ ಹರಿಯುತ್ತಿದೆ. ನಿರಂತರವಾಗಿ ಅಧಿಕ ಪ್ರಮಾಣದ ನೀರು ಉಕ್ಕುತ್ತಿರುವುದರಿಂದ ರಸ್ತೆಯೆಲ್ಲಾ ಜಲಮಯವಾಗಿದೆ. ಮಳೆಯಲ್ಲಿ ವಾಹನ ಸವಾರರು ಮ್ಯಾನ್‍ಹೋಲ್ ಗುರುತಿಸಲಾಗದೆ ಅಪಘಾತಕ್ಕೀಡಾಗಬಹುದು ಎಂಬ ಕಾರಣದಿಂದ ಪೊಲೀಸರು ಬ್ಯಾರಿಕೇಡ್ ಅಳವಡಿಸಿ, ಅಪಾಯದ ಸೂಚನೆ ನೀಡಿದ್ದಾರೆ. ಬೆಳಗ್ಗೆಯಿಂದ ನಿರಂತರವಾಗಿ ಮ್ಯಾನ್‍ಹೋಲ್‍ನಿಂದ ನೀರು ಉಕ್ಕುತ್ತಿದ್ದರೂ ದುರಸ್ತಿಗೆ ಕ್ರಮ ವಹಿಸದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ಮೈಸೂರು-ಹುಣಸೂರು ರಸ್ತೆಯಲ್ಲೂ ಅಪಾರ ಪ್ರಮಾಣದ ನೀರು ಹರಿದು, ವಾಲ್ಮೀಕಿ ರಸ್ತೆ ಜಂಕ್ಷನ್‍ನಲ್ಲಿ ಕೆರೆಯಂತಾಗಿತ್ತು.

ಮೈಸೂರಿನ ಆನಂದನಗರ ಸೇರಿದಂತೆ ಹಲವು ಬಡಾವಣೆಗಳಲ್ಲೂ ಇದೇ ದುಃಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದಾಗಲೆಲ್ಲಾ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುವುದು ಸಹಜ ಎಂಬಂತಾಗಿದೆ. ಮಳೆಯಿಂದ ಜನ ತ್ತತ್ತರಿಸುತ್ತಿದ್ದರೂ ಕೆರೆಗಳು, ರಾಜಕಾಲುವೆಗಳ ಅತಿಕ್ರಮಣ ತೆರವುಗೊಳಿಸಲು ಸ್ಥಳೀಯ ಸಂಸ್ಥೆಗಳು ಮುಂದಾಗಿಲ್ಲ. ಮಳೆ ನೀರು ಚರಂಡಿಯಲ್ಲಿ ತುಂಬಿರುವ ಹೂಳು ತೆಗೆಯುವ ಕಾರ್ಯವನ್ನು ಚುರುಕುಗೊಳಿಸಿಲ್ಲ. ಮನೆ ತಾರಸಿಯಿಂದ ಒಳಚರಂಡಿಗೆ ಸಂಪರ್ಕ ಕಲ್ಪಿಸಿರುವುದು ಹಾಗೂ ಇನ್ನಿತರ ಕಾರಣಗಳಿಂದ ಒತ್ತಡ ಹೆಚ್ಚಾಗಿ ಮ್ಯಾನ್‍ಹೋಲ್ ಮೂಲಕ ನೀರು ಉಕ್ಕಿ ರಸ್ತೆಯೆಲ್ಲಾ ಹಾಳಾಗುತ್ತಿದ್ದರೂ ನಗರ ಪಾಲಿಕೆ ನಿರ್ಲಕ್ಷಿಸಿದೆ. ಈಗಲಾದರೂ ಪರಿಣಾಮಕಾರಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮೈಸೂರಿನ ಹಲವು ಬಡಾವಣೆಗಳು ಜಲಾವೃತವಾಗುವುದು ಖಚಿತ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

Translate »