ಆಧಾರ್ ಅದಾಲತ್ ಸದ್ಬಳಕೆಗೆ ತಹಶೀಲ್ದಾರ್ ಸಲಹೆ
ಚಾಮರಾಜನಗರ

ಆಧಾರ್ ಅದಾಲತ್ ಸದ್ಬಳಕೆಗೆ ತಹಶೀಲ್ದಾರ್ ಸಲಹೆ

September 18, 2018

ಗುಂಡ್ಲುಪೇಟೆ:  ಆಧಾರ್ ಅದಾಲತ್ ಕಾರ್ಯಕ್ರಮವನ್ನು ತಾಲೂಕಿನ ಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ಸಿ.ಭಾರತಿ ಸಲಹೆ ನೀಡಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ, ಬೆಂಗಳೂರಿನ ಇ-ಆಡಳಿತದಿಂದ ಹಮ್ಮಿಕೊಂಡಿರುವ ಆಧಾರ್ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಸೆ. 22ರವರೆಗೆ ಪ್ರತಿದಿನ ಬೆಳಿಗ್ಗೆ 10.30ರಿಂದ ಸಂಜೆ 5ರವರೆಗೆ ಆಧಾರ್ ಕಾರ್ಡ್‍ಗೆ ಸಂಬಂಧಿಸಿದ ಮಾಹಿತಿಯನ್ನು ಬಯೋಮೆಟ್ರಿಕ್ ಪದ್ಧತಿಯಲ್ಲಿ ಮಾಡಲಾಗುತ್ತಿದೆ. ತಾಲೂಕಿನ ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ವೈಎಪಿ ಸೇರಿದಂತೆ ಇತರೆ ಪಿಂಚಣೆಯನ್ನು ಪಡೆಯುತ್ತಿರುವ ಫಲಾನುಭವಿಗಳು ಆಧಾರ್ ಕಾರ್ಡ್ ಮಾಡಿಸಿ ಹಲವು ವರ್ಷಗಳು ಕಳೆದು ಹೋಗಿದೆ. ಈಗ ಹೊಸದಾಗಿ ಬಯೋಮೆಟ್ರಿಕ್ ಮುಖಾಂತರ ಅಪ್‍ಡೇಟ್ ಮಾಡಿಸಿಕೊಂಡರೆ ತಮ್ಮ ಪಿಂಚಣಿ ಹಾಗೂ ಇತರೆ ಕೆಲಸಗಳಿಗೆ ಅನುಕೂಲವಾಗುತ್ತದೆ. ಆಧಾರ್ ಕಾರ್ಡಿನ ತಿದ್ದುಪಡಿಯನ್ನು ಪಟ್ಟಣದ ವಾಸಿಗಳು ತಾಲೂಕು ಕಚೇರಿಯಲ್ಲಿ ಸುತ್ತÀ್ತಲಿನ ಗ್ರಾಮಸ್ಥರು ಸಮೀಪದ ಗ್ರಾಪಂ ಕಚೇರಿಯಲ್ಲಿ ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ವಿವಿಧೆಡೆ ಅದಾಲತ್ ಕಾರ್ಯಕ್ರಮ: ಆಧಾರ್ ಅದಾಲತ್ ಕಾರ್ಯಕ್ರಮವನ್ನು ಸೆ. 24ರಿಂದ 29ರವರೆಗೆ ಕೊಳ್ಳೇಗಾಲದಲ್ಲಿ ಮತ್ತು ಅ. 1 ರಿಂದ ಅ. 6ರವರೆಗೆ ಯಳಂದೂರಿನಲ್ಲಿ ಆಯೋಜಿಸಿದ್ದು, ಈ ಭಾಗದ ಜನತೆ ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಆಧಾರ್ ಸಂಯೋಜಕ ರಾಮ್‍ಪ್ರಸಾದ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ಮಹೇಶ್, ಜಿಲ್ಲಾ ಆಧಾರ್ ಸಂಯೋಜಕ ರಾಮ್‍ಪ್ರಸಾದ್, ಕಬ್ಬಳ್ಳಿ ಗ್ರಾಮ ಲೆಕ್ಕಾಧಿಕಾರಿ ಸಲ್ಮಾನ್, ಆಪರೇಟರ್ ಸುನೀಲ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

Translate »