ಏಡ್ಸ್‍ಗೆ ಪರಿಣಾಮಕಾರಿ ಔಷಧ ಲಭಿಸುವ ಭರವಸೆ
ಮೈಸೂರು

ಏಡ್ಸ್‍ಗೆ ಪರಿಣಾಮಕಾರಿ ಔಷಧ ಲಭಿಸುವ ಭರವಸೆ

September 18, 2018

ಮೈಸೂರು:  ಅಮ್ಮ ಮನೆಯಲ್ಲಿ ಆಶ್ರಯ ಪಡೆದಿರುವ ನಾಲ್ವರು ಏಡ್ಸ್‍ಪೀಡಿತ ಮಕ್ಕಳನ್ನು ಭಾರತೀಯ ವೈದ್ಯ ಪದ್ಧತಿಯ ಚಿಕಿತ್ಸೆಗೆ ಒಳಪಡಿಸಿ ನಡೆಸಿದ ಪ್ರಯೋಗದ ಫಲವಾಗಿ ಮೊನ್ನೆ ನಡೆಸಿದ ಅವರ ರಕ್ತ ಪರೀಕ್ಷೆಯಲ್ಲಿ ಹೆಚ್‍ಐವಿ -ಏಡ್ಸ್ ನಾಟ್ ಡಿಟೆಕ್ಟೀವ್ ಎಂಬ ವರದಿ ಬಂದಿದ್ದು, ಏಡ್ಸ್‍ಗೆ ಔಷಧ ಲಭ್ಯವಾಗುವ ಭರವಸೆ ಮೂಡಿದೆ ಎಂದು ಶಾಸಕ, ಮಾಜಿ ಸಚಿವ ಎಸ್.ಎ.ರಾಮದಾಸ್ ಆಶಾಭಾವ ವ್ಯಕ್ತಪಡಿಸಿದರು.

ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 18,626 ಮಕ್ಕಳು ತಮ್ಮದಲ್ಲದ ತಪ್ಪಿಗೆ ಜನ್ಮದತ್ತವಾಗಿಯೇ ಏಡ್ಸ್ ಕಾಯಿಲೆಗೆ ತುತ್ತಾಗಿದ್ದಾರೆ. ಅನಂತ ಭಾರತ ಚಾರಿ ಟಬಲ್ ಟ್ರಸ್ಟ್ ಹಾಗೂ ಆಸರೆ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಅಮ್ಮ ಮನೆಯಲ್ಲಿ 21 ಏಡ್ಸ್‍ಪೀಡಿತ ಮಕ್ಕಳು ಆಶ್ರಯ ಪಡೆದಿದ್ದಾರೆ. ಅವರಲ್ಲಿ 14 ಮಕ್ಕಳನ್ನು ಭಾರತೀಯ ವೈದ್ಯ ಪದ್ಧತಿಯ ಚಿಕಿತ್ಸಾ ವಿಧಾನಗಳಿಗೆ ಒಳಪಡಿಸಿದ್ದ ಪರಿ ಣಾಮ ಅವರಲ್ಲಿ ಏಡ್ಸ್ ನಿಯಂತ್ರಣಕ್ಕೆ ಬಂದಿರುವ ಲಕ್ಷಣಗಳು ವರದಿಯಲ್ಲಿ ಉಲ್ಲೇಖವಾಗಿದೆ. ಆ ಪೈಕಿ ನಾಲ್ವರು ಮಕ್ಕಳ ರಕ್ತ ಪರೀಕ್ಷೆಯಲ್ಲಿ ಹೆಚ್‍ಐವಿ-ಏಡ್ಸ್ ನಾಟ್ ಡಿಟೆಕ್ಟೀವ್ ಎಂಬ ಫಲಿತಾಂಶ ಬಂದಿದೆ ಎಂದು ವಿವರಿಸಿದರು.

ಯೋಗಾಸನ, ಅಗ್ನಿಹೋತ್ರ, ಪ್ರಾರ್ಥನೆಯೊಂದಿಗೆ ಪೌಷ್ಟಿಕ ಆಹಾರ ಸೇರಿದಂತೆ ಭಾರತೀಯ ವೈದ್ಯ ಪದ್ಧತಿಯ ಪರಿಣಾಮ ಇಂತಹ ಆಶಾದಾಯಕ ಬೆಳವಣಿಗೆ ಹೊರಹೊಮ್ಮಿದ್ದು, ಇವರ ರಕ್ತದ ಮಾದರಿಗಳನ್ನು ಅಮೇರಿಕದ ಸಂಶೋಧನಾಲಯಕ್ಕೆ ಶೀಘ್ರದಲ್ಲಿ ರವಾನೆ ಮಾಡುತ್ತಿದ್ದು, ಅಲ್ಲಿನ ವರದಿಯಲ್ಲಿ ಏಡ್ಸ್ ಕಣಗಳು ಶೂನ್ಯವೆಂದು ಉಲ್ಲೇಖವಾದಲ್ಲಿ ವಿಶ್ವ ದಾಖಲೆಯ ನಿರ್ಮಾಣ ಆಗಲಿದೆ ಎಂದರು. ಇದೇ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಎಸ್.ಎ.ರಾಮದಾಸ್, ಮೈಸೂರಿನ ಬಿಜೆಪಿ ಮುಖಂಡರಿಂದ ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಆರೋಪ ಶುದ್ಧ ಸುಳ್ಳು. ಸುಮ್ಮನೇ ಹೀಗೆ ಆರೋಪ ಮಾಡಬಾರದು. ಆಧಾರ ಸಹಿತ ಮಾತನಾಡಲಿ ಎಂದು ತಿರುಗೇಟು ನೀಡಿದರು.

Translate »