ಚುನಾವಣಾ ರಾಜಕಾರಣದಿಂದ ನಿವೃತ್ತಿಗೆ ತನ್ವೀರ್ ಸೇಠ್ ನಿರ್ಧಾರ
ಮೈಸೂರು

ಚುನಾವಣಾ ರಾಜಕಾರಣದಿಂದ ನಿವೃತ್ತಿಗೆ ತನ್ವೀರ್ ಸೇಠ್ ನಿರ್ಧಾರ

February 28, 2023

ಮೈಸೂರು, ಫೆ.27-ಮೈಸೂರಿನ ನರ ಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಸತತ ವಾಗಿ ಐದು ಬಾರಿ ಗೆಲುವು ಸಾಧಿಸಿ ಸೋಲಿ ಲ್ಲದ ಸರದಾರನಾಗಿರುವ ಶಾಸಕ ತನ್ವೀರ್ ಸೇಠ್ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ.

ತಾವು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಬಗ್ಗೆ ಕಳೆದ ಡಿಸೆಂಬರ್ ನಲ್ಲಿ, ಬೆಳಗಾವಿ ಅಧಿವೇಶನದ ವೇಳೆ ಎಐಸಿಸಿ ಮತ್ತು ಕೆಪಿಸಿಸಿ ನಾಯಕರಿಗೆ ಲಿಖಿತವಾ ಗಿಯೇ ತಿಳಿಸಿರುವ ತನ್ವೀರ್, ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆಯಲು ಅವಕಾಶ ಕಲ್ಪಿಸುವಂತೆ ಕೋರಿಕೊಂಡಿ ದ್ದಾರೆ. ಜೊತೆಗೆ ತಾವು ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ, ಜೀವನದ ಕೊನೆವರೆಗೂ ಕಾಂಗ್ರೆಸ್‍ನಲ್ಲೇ ಇರುವುದಾಗಿ ವರಿಷ್ಠರಿಗೆ ಭರವಸೆ ನೀಡಿದ್ದಾರೆ. ಚುನಾವಣಾ ರಾಜ ಕಾರಣದಿಂದ ಹಿಂದೆ ಸರಿಯುವ ತನ್ವೀರ್ ಸೇಠ್ ನಿರ್ಧಾರದ ಹಿನ್ನೆಲೆಯಲ್ಲಿ ರಾಜ್ಯದ ಉಸ್ತುವಾರಿ ಹೊಣೆ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು, ತಮ್ಮ ನಿರ್ಧಾರ ಕೈಬಿಡುವಂತೆ ತನ್ವೀರ್ ಸೇಠ್‍ಗೆ ಸಲಹೆ ನೀಡಿದ್ದಾರೆ. ಆದರೆ ತನ್ವೀರ್, ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆದ ನಂತರ ತಾವು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಶಾಸಕನಾಗಿ ಕ್ಷೇತ್ರದ ಜನರಿಗೆ ನನ್ನ ಮನಃತೃಪ್ತಿಯಾಗುವಂತೆ ಕೆಲಸ ಮಾಡಲು ಆರೋಗ್ಯ ಸಹಕರಿಸುತ್ತಿಲ್ಲ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ದೃಢವಾಗಿಯೇ ತಿಳಿಸಿದ್ದಾರೆ.

ಕಳೆದ ಮೂರು ದಿನದ ಹಿಂದೆ ರಾಯ್‍ಪುರದಲ್ಲಿ ನಡೆದ ಕಾಂಗ್ರೆಸ್ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಲು ತನ್ವೀರ್ ಸೇಠ್ ತೆರಳಿದ್ದಾಗ ಹಲವಾರು ಕಾಂಗ್ರೆಸ್ ರಾಷ್ಟ್ರೀಯ ಮುಖಂಡರು ತನ್ವೀರ್ ಅವರನ್ನು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಬಾರದು ಎಂದು ಒತ್ತಡ ಹೇರಿದ್ದಾರೆ. ಜೊತೆಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ಹಾಕಿದರಾದರೂ, ತಮ್ಮ ನಿರ್ಧಾರವನ್ನು ಬದಲಿಸದ ತನ್ವೀರ್ ಸೇಠ್, ಕೊನೆಗೆ ವರಿಷ್ಠರ ಒತ್ತಡದಿಂದ ಪಾರಾಗುವ ನಿಟ್ಟಿನಲ್ಲಿ, ಆರೋಗ್ಯ ದೃಷ್ಟಿಯಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಆದರೆ ಪಕ್ಷದ ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‍ನ ರಾಷ್ಟ್ರ ಮತ್ತು ರಾಜ್ಯ ಮುಖಂಡರು ನರಸಿಂಹರಾಜ ಕ್ಷೇತ್ರದಲ್ಲಿ 6ನೇ ಬಾರಿಗೆ ಸ್ಪರ್ಧಿಸಲೇಬೇಕೆಂದು ಒತ್ತಡ ಹೇರುತ್ತಿದ್ದರೂ ಕೂಡ ಸ್ಪರ್ಧೆಗಿಳಿಯಲು ತನ್ವೀರ್ ಇದುವರೆಗೆ ಒಪ್ಪಿಗೆ ನೀಡಿಲ್ಲ. ನರಸಿಂಹರಾಜ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಕ್ಷೇತ್ರದಿಂದ ಸ್ಪರ್ಧೆಗಿಳಿದರೆ, ಸುಲಭವಾಗಿ ಗೆಲ್ಲಬಹುದು. ನಾನೂ ಕೂಡ ಅವರ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ವರಿಷ್ಠರ ಮುಂದೆ ತನ್ವೀರ್ ಹೇಳಿದ್ದಾರೆ. ಕೊನೇ ಹಂತದಲ್ಲೂ ತನ್ವೀರ್ ಸೇಠ್ ನಿರ್ಧಾರ ಬದಲಾಗದಿದ್ದರೆ ಮಾಜಿ ಮೇಯರ್ ಅಯೂಬ್ ಖಾನ್ ಅವರನ್ನು ಎನ್.ಆರ್. ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Translate »