ಈಗ ವಿಶ್ವವಿದ್ಯಾನಿಲಯಗಳೆಂದರೆ ಹಾಸ್ಯಾಸ್ಪದ ಎನ್ನುವಂತಾಗಿದೆ
ಮೈಸೂರು

ಈಗ ವಿಶ್ವವಿದ್ಯಾನಿಲಯಗಳೆಂದರೆ ಹಾಸ್ಯಾಸ್ಪದ ಎನ್ನುವಂತಾಗಿದೆ

February 28, 2023

ಮೈಸೂರು,ಫೆ.27(ಪಿಎಂ)- ವಿಶ್ವವಿದ್ಯಾನಿಲಯಗಳು ಎಂದರೆ ಇಂದು ಹಾಸ್ಯಾಸ್ಪದ ಎನ್ನುವಂತಾಗಿದೆ. ಅವುಗಳಿಗೆ ಬೆಲೆಯೇ ಇಲ್ಲವೆನೋ ಎನ್ನುವಂತಹ ಸನ್ನಿವೇಶ ನಿರ್ಮಾಣ ವಾಗಿದೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ವಿಷಾದಿಸಿದರು.

ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ಹಾಗೂ ಅಭಿನಂದನಾ ಸಮಿತಿ, ಸಂಶೋಧನಾ ವಿದ್ಯಾರ್ಥಿಗಳ ಸಂಯುಕ್ತಾಶ್ರಯದಲ್ಲಿ ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಪ್ರೊ.ಬಿ.ಎನ್. ಯಶೋಧ ಮತ್ತು ಆಡಳಿತಾಧಿಕಾರಿ ಡಾ.ಜಿ.ಹೆಚ್.ನಾಗ ರಾಜ್ ಅವರಿಗೆ `ಸಾರ್ಥಕ ಸಾಧಕರಿಗೆ ಬೀಳ್ಕೊಡುಗೆ’ ಶೀರ್ಷಿಕೆಯಡಿ ಸೋಮವಾರ ಹಮ್ಮಿಕೊಂಡಿದ್ದ ಅಭಿ ನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಶ್ವವಿದ್ಯಾನಿಲಯಗಳಲ್ಲಿ ಬೋಧಕರು, ಬೋಧಕೇತರ ನೇಮಕಾತಿಯಲ್ಲಿ ಬಹಳಷ್ಟು ಅಧಿಕಾರ ದುರುಪಯೋಗ ವಾಗುತ್ತಿದೆ. ಆರ್ಥಿಕ ಸಂಪನ್ಮೂಲ ಕ್ರೂಢೀಕರಣವಿಲ್ಲದೆ ಸಂಗೀತ ವಿವಿಯಲ್ಲಿ ನೇಮಕಾತಿ ಆಗಿದ್ದವರನ್ನು ಕೈಬಿಟ್ಟರು. ವಿಶ್ವ ಮಟ್ಟದಲ್ಲಿ ಸ್ಪರ್ಧೆ ಮಾಡುವ ಒಂದು ವಿಶ್ವವಿದ್ಯಾನಿಲಯ ಕೂಡ ದೇಶದಲ್ಲಿ ಇಲ್ಲ. ಹಾಗಾಗಿ ಸರ್ಕಾರ ಸಾಕಷ್ಟು ಅವಲೋಕಿಸಿ ನಮ್ಮ ವಿವಿಗಳು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟ ಹೊಂದಬೇಕೆಂಬ ನಿಟ್ಟಿನಲ್ಲಿ ಅನೇಕ ಬದಲಾವಣೆ ತರಲು ಮುಂದಾಗಿದೆ ಎಂದು ತಿಳಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ ಮೈಸೂರು ವಿವಿ ರಾಜ್ಯದಲ್ಲಿ ಪ್ರಪ್ರಥಮವಾಗಿ ಆರಂಭಗೊಂಡಿತು. ಮೈಸೂರು ವಿವಿ ಅತ್ಯಂತ ಪ್ರತಿಷ್ಠೆ ಹೊಂದಿದೆ. ನಾನೂ ಇದೇ ವಿವಿ ವಿದ್ಯಾರ್ಥಿ. ಆದರೆ ವಿಶ್ವವಿದ್ಯಾನಿಲಯದ ಅಂದಿನ ಪ್ರತಿಷ್ಠೆ ಇಂದು ಉಳಿದಿದೆಯೇ? ಎಂಬ ಪ್ರಶ್ನೆ ಕಾಡುವಂತಾ ಗಿದೆ. ಇದೊಂದೇ ವಿವಿಯಲ್ಲ, ಬೇರೆಲ್ಲಾ ವಿವಿಗಳ ವಿಚಾರದಲ್ಲೂ ಇದೇ ಪ್ರಶ್ನೆ ಮುನ್ನೆಲೆಗೆ ಬರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ. ವಿವಿಗಳಲ್ಲಿ ಆಳವಾದ ಅಧ್ಯಯನ, ಸಂಶೋಧನೆ ನಡೆಯಬೇಕೆಂಬ ಆಶಯ ಹೊಂದಿದೆ. ಈ ಹಿನ್ನೆಲೆ ಯಲ್ಲಿ ಯುಜಿಸಿ ಪ್ರತಿ ಜಿಲ್ಲೆಗೊಂದು ವಿವಿ ಇರಬೇಕೆಂಬ ಮಾನದಂಡ ರೂಪಿಸಿದೆ. ಹಾಗಾಗಿ ರಾಜ್ಯದಲ್ಲಿ 7 ಹೊಸ ವಿವಿಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ನಾವು ಓದುವಾಗ ವಿವಿಗಳ ವ್ಯವಸ್ಥೆ ಉತ್ತಮವಾಗಿತ್ತು. ನೀತಿ ನಿಯಮಾವಳಿಗಳ ಪಾಲನೆ ಆಗುತ್ತಿತ್ತು. ಆದರೆ ಇಂದು ಸಿಂಡಿಕೇಟ್ ಸಭೆಗಳಲ್ಲಿ ಏನು ಚರ್ಚೆ ನಡೆಯು ತ್ತವೆ ಎಂದೇ ಗೊತ್ತಾಗದ ಸನ್ನಿವೇಶವಿದೆ ಎಂದರು.

ಇತಿಮಿತಿ ಇರಲಿ: ಚಳವಳಿ, ಪ್ರತಿಭಟನೆಗಳಲ್ಲಿ ಸಂಶೋ ಧನಾ ವಿದ್ಯಾರ್ಥಿಗಳು ಇತಿಮಿತಿ ಕಾಯ್ದುಕೊಳ್ಳಬೇಕು. ಅನಗತ್ಯವಾಗಿ ಆಡಳಿತದಲ್ಲಿ
ಮೂಗು ತೂರಿಸುವುದು ಸೂಕ್ತವಲ್ಲ. ಸಮಸ್ಯೆಗಳಿದ್ದರೆ ಸೂಕ್ತ ರೀತಿಯಲ್ಲಿ ಹೋರಾಟ ಮಾಡಬೇಕು ಅಥವಾ ಸಿಂಡಿಕೇಟ್ ಸದಸ್ಯರು, ಜನಪ್ರತಿನಿಧಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಕುಲಪತಿಗಳು, ಕುಲಸಚಿವರು ಕೆಲಸ ಮಾಡಲು ಬಿಡದೇ ಹೋರಾಟದ ಹೆಸರಿನಲ್ಲಿ ತೊಂದರೆ ನೀಡಬಾರದು. ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಉದ್ದೇಶ ಸಾರ್ಥಕಗೊಳಿಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕು ಸಲಹೆ ನೀಡಿದರು. ಜಗತ್ತಿನ ಯಾವುದೇ ರಾಷ್ಟ್ರವಾದರೂ ಬಲಿಷ್ಠವಾಗಿ ಬೆಳೆಯಲು ಯುವ ಜನರು, ವಿದ್ಯಾರ್ಥಿಗಳ ಪಾತ್ರ ಮುಖ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಪಾಲಿಸಿದರೆ ಮಾತ್ರ ಗುರಿ ಮುಟ್ಟಲು ಸಾಧ್ಯ. `ಶಿಸ್ತು ಇಲ್ಲದ ವಿದ್ಯಾರ್ಥಿಗಳು ದುಂಬಿಗಳಿ ದಂತೆ. ಯಾರಿಗೆ ಬೇಕಾದರೂ ಕಚ್ಚುತ್ತವೆ. ಹಾಗಾಗಿ ಶಿಸ್ತಿನ ಸಿಪಾಯಿಗಳಾಗಬೇಕು’ ಎಂದು ಡಾ.ಅಂಬೇಡ್ಕರ್ ಕರೆ ನೀಡಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಅತ್ಯಂತ ಶಿಸ್ತು-ಆಸಕ್ತಿಯಿಂದ ಅಧ್ಯಯನ ನಡೆಸಬೇಕು ಎಂದು ತಿಳಿ ಹೇಳಿದರು.
ಇದಕ್ಕೂ ಮುನ್ನ ವಯೋ ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಪ್ರೊ.ಬಿ.ಎನ್.ಯಶೋಧ ಮತ್ತು ಆಡಳಿತಾಧಿಕಾರಿ ಡಾ.ಜಿ.ಹೆಚ್.ನಾಗರಾಜ್ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ತಮ್ಮಿಬ್ಬರ ಸುದೀರ್ಘ ಸೇವೆಗಾಗಿ ನಿವೃತ್ತಿ ಸಮಯದಲ್ಲಿ ತಮಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಗಿದೆ. ಮುಂದೆಯೂ ಸಮಾಜಕ್ಕೆ ನಿಮ್ಮಿಂದ ಒಳ್ಳೆಯ ಸೇವೆ ದೊರೆಯಲಿ ಎಂದು ಇದೇ ವೇಳೆ ಶ್ರೀನಿವಾಸ ಪ್ರಸಾದ್ ಹಾರೈಸಿದರು. ಮಾಜಿ ಮೇಯರ್ ಪುರುಷೋತ್ತಮ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ನಿರ್ದೇಶಕ ಪ್ರೊ.ಶಿವರಾಜಪ್ಪ, ವಿವಿ ಸಂಜೆ ಕಾಲೇಜು ಪ್ರಾಂಶುಪಾಲ ಪ್ರೊ.ಎ.ಎಸ್.ಶ್ರೀಧರ್, ಎನ್‍ಎಸ್‍ಎಸ್ ಅಧಿಕಾರಿ ಡಾ.ನಿಂಗರಾಜು, ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಹೆಚ್.ಸಿ.ದೇವರಾಜೇ ಗೌಡ, ವೇದಿಕೆ ಅಧ್ಯಕ್ಷ ಆರ್.ವಾಸುದೇವ್ ಮತ್ತಿತರರು ಹಾಜರಿದ್ದರು.

Translate »