ಮೈಸೂರು, ಆ.19(ಪಿಎಂ)- ಮೊದಲೇ ಕೊರೊನಾ ಲಾಕ್‍ಡೌನ್‍ನಿಂದ ಕಂಗೆಟ್ಟಿದ್ದ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಬದುಕು ಈಗಲೂ ಸುಧಾರಣೆ ಕಂಡಿಲ್ಲ. ಲಾಕ್‍ಡೌನ್ ಮುಗಿದಿದ್ದರೂ ಸೋಂಕು ಭೀತಿಯಿಂದ ಪ್ರವಾಸೋದ್ಯಮ ಚುರುಕುಗೊಂಡಿಲ್ಲ. ಹೀಗಾಗಿ ಕೆಲಸವಿಲ್ಲದೆ, ವೇತನ ಕಡಿತ ದಿಂದ ಚಾಲಕರು ಕಂಗಾಲಾಗಿದ್ದಾರೆ.
ಟ್ರಾವೆಲ್ ಕಂಪನಿಗಳಲ್ಲಿ ಬಹುತೇಕರು ಸ್ವಂತ ಕಾರುಗಳನ್ನೇ ಓಡಿಸಿ ಜೀವನ ದೂಡು ತ್ತಿರುವವರು ಇದ್ದಾರೆ. ಆದರೆ ಈಗ ಕೈಯಲ್ಲಿ ಕೆಲಸವಿಲ್ಲ, ಇದ್ದರೂ ಕನಿಷ್ಠ ಜೀವನ ಸಾಗಿ ಸುವಷ್ಟೂ ವೇತನ ಸಿಗುತ್ತಿಲ್ಲ. ಈ ನಡುವೆ ವಾಹನ ಖರೀದಿ ಸಾಲದ ಮಾಸಿಕ ಕಂತು ಪಾವತಿಸಬೇಕೆಂಬ ಒತ್ತಡ. ಜೊತೆಗೆ ರಸ್ತೆ ತೆರಿಗೆ ಹಾಗೂ ವಿಮೆ ಪಾವತಿಸುವ ಬಗ್ಗೆಯೂ ಸ್ವಂತ ಟ್ಯಾಕ್ಸಿ ಇರುವ ಚಾಲಕರು ಚಿಂತೆಗೀ ಡಾಗಿದ್ದಾರೆ. ಇದರಿಂದ ಹಲವರು ತಮ್ಮ ವಾಹನವನ್ನೇ ಮಾರಲು ಮುಂದಾಗಿದ್ದಾರೆ.
ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಇದ್ದ ನಿರ್ಬಂಧ ತೆರವಾಗಿದೆ. ಆದರೂ ಸೋಂಕು ಭೀತಿಯಿಂದ ಜನ ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಿಲ್ಲ. ನಿರ್ಬಂಧಗಳ ಹಿನ್ನೆಲೆಯಲ್ಲಿ ಅಂತರ ರಾಜ್ಯ ಸಂಚಾರವೂ ಆರಂಭವಾಗಿಲ್ಲ. ಟ್ಯಾಕ್ಸಿ ಸೇವೆ ಯಾರೂ ಕೇಳುತ್ತಿಲ್ಲ. ಇದರಿಂದ ಸಾಲ ಮಾಡಿ ವಾಹನ ಖರೀದಿಸಿದ, ಸ್ವತಃ ಚಾಲಕರಾಗಿ ರುವವರ ಸ್ಥಿತಿ ಹೇಳತೀರದಾಗಿದೆ. ಚಾಲಕ ರಾಗಿ ಟ್ರಾವೆಲ್ ಕಂಪನಿಗಳಲ್ಲಿ ಕೆಲಸ ಮಾಡು ವವರ ಬವಣೆಯೂ ಅಯೋಮಯ.
ವಾಹನ ಮಾಲೀಕ-ಚಾಲಕರೂ ಆಗಿರು ವವರು, ಚಾಲಕರಾಗಿ ಟ್ರಾವೆಲ್ಸ್ ಕಂಪನಿ ಗಳಲ್ಲಿ ದುಡಿಯುವವರು `ಮೈಸೂರು ಮಿತ್ರ’ ನೊಂದಿಗೆ ಸಂಕಷ್ಟ ಹೇಳಿಕೊಂಡರು. ಇವರು ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಕ್ಷೇಮಾ ಭಿವೃದ್ಧಿ ಸಂಘದ ಸದಸ್ಯರಾಗಿದ್ದಾರೆ.
5 ಸಾವಿರ ರೂ. ಸರ್ಕಾರದ ಸಹಾಯ ಧನ ಶೇ.10ರಷ್ಟು ಮಂದಿಗೂ ಬಂದಿಲ್ಲ. ಆಧಾರ್ ಕಾರ್ಡ್ ಲಿಂಕ್ ಮಾಡಿ, ದಾಖ ಲಾತಿ ಪರಿಶೀಲನೆಯಲ್ಲಿದೆ ಎಂಬ ಸಂದೇಶ ಮಾತ್ರ ಮೊಬೈಲ್‍ಗೆ ಬರುತ್ತಿದೆ. ಇದರ ಹೊರ ತಾಗಿ ಯಾವುದೇ ಪ್ರಯೋಜನ ಆಗಿಲ್ಲ ಎಂದು ಚಾಲಕರು ಬೇಸರ ವ್ಯಕ್ತಪಡಿಸಿದರು.
ಟ್ರಾವೆಲ್ ಸಂಸ್ಥೆಯಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದೆ. ಲಾಕ್‍ಡೌನ್ ವೇಳೆ ಕೆಲಸದಿಂದ ತೆಗೆದರು. ಮೂರು ತಿಂಗಳಿಂದ ಕೆಲಸ ವಿಲ್ಲದೆ ಪರಿತಪಿಸುತ್ತಿರುವೆ. ತಂದೆ ಅಂಗ ವಿಕಲರು, ಜೊತೆಗೆ ಅನಾರೋಗ್ಯ. ಅವರ ಚಿಕಿತ್ಸೆಗೆ, ಔಷಧ ಖರೀದಿಗೆ ಹಣವಿಲ್ಲ. 3 ದಿನಗಳಿಂದ ನಾನೂ ಅನಾರೋಗ್ಯ ದಿಂದ ಬಳಲುತ್ತಿರುವೆ. ಮನೆ ಬಾಡಿಗೆ ಕಟ್ಟಿ 4 ತಿಂಗಳಾಯಿತು. ಸರ್ಕಾರ ಘೋಷಣೆ ಮಾಡಿದ 5 ಸಾವಿರ ರೂ. ಆರ್ಥಿಕ ನೆರವು ಬಂದಿಲ್ಲ. ನಮ್ಮ ಕಷ್ಟ ಕೇಳುವವರು ಯಾರೂ ಇಲ್ಲ ಎಂದು ಚಾಲಕ ಕಿಸನ್ ಅಳಲು ತೋಡಿಕೊಂಡರು.
ಇದೇ ಜನವರಿಯಲ್ಲಿ ವಾಹನ ಖರೀ ದಿಸಿದೆ. 2 ತಿಂಗಳು ಸಾಲದ ಕಂತು ಪಾವತಿ ಮಾಡಿದೆ. ಮಾರ್ಚ್‍ನಿಂದ ಲಾಕ್‍ಡೌನ್ ಜಾರಿಗೆ ಬಂದಿತು. ಆರ್‍ಬಿಐ ಸಾಲದ ಕಂತು ಪಾವತಿ ಅವಧಿಯನ್ನು ಆ.31 ರವರೆಗೆ ವಿಸ್ತರಿಸಿದ್ದರೂ ಖಾಸಗಿ ಹಣ ಕಾಸು ಸಂಸ್ಥೆಗಳು ಒತ್ತಡ ಹಾಕುತ್ತಿವೆ. ಹೇಗೋ ಹಣ ಹೊಂದಿಸಿ ತಿಂಗಳ ಕಂತು ಕಟ್ಟಿ ದ್ದೇನೆ. ಇಂತಹ ಕಷ್ಟದಲ್ಲಿ ವಾಹನ ಮಾರುವ ಸ್ಥಿತಿ ಬಂದಿದೆ. ಕಾರು ಮಾರೋಣವೆಂದರೆ ಅರ್ಧಕ್ಕರ್ಧ ಬೆಲೆಗೆ ಕೇಳುತ್ತಾರೆ. ಈಗ ವಾಹನ ಮತ್ತು ಚಾಲಕರಿಗೆ ಬೆಲೆಯೇ ಇಲ್ಲ ಎನ್ನುವಂತಾಗಿದೆ ಎಂದು ಸ್ವಂತ ಟ್ಯಾಕ್ಸಿಯ ಮಾಲೀಕ-ಚಾಲಕ ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.
ಕೆಲ ಟ್ರಾವಲ್ ಕಂಪನಿಗಳು ಹತ್ತಾರು ವರ್ಷ ಚಾಲಕರಿಂದ ದುಡಿಸಿಕೊಂಡು ಈಗ ವೇತನ ನೀಡಲು ಹಿಂದೆ ಮುಂದೆ ನೋಡು ತ್ತಿವೆ. ತಮ್ಮದೇ ವಾಹನದೊಂದಿಗೆ ಚಾಲಕ ರಾಗಿ ದುಡಿದವರಿಗೆ ಈಗ ಬೆಲೆಯೇ ಇಲ್ಲ. ಇಷ್ಟವಿದ್ದರೆ ಕೆಲಸ ಮಾಡಿ, ಇಲ್ಲವಾದರೆ ಹೋಗಿ ಎನ್ನುವಂತಹ ವಾತಾವರಣವಿದೆ. 35 ವರ್ಷದ ಟ್ರಾವೆಲ್ಸ್ ಕಂಪನಿ ಲಾಕ್ ಡೌನ್ ಬಳಿಕ 150 ಚಾಲಕರನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ಸಂಘದ ಉಪಾ ಧ್ಯಕ್ಷ ಆರ್.ಪ್ರಭಾಕರ್ ನೊಂದು ನುಡಿದರು.