ಮೈಸೂರು, ಆ.19 (ಆರ್‍ಕೆ) – ಮೈಸೂರು-ಮಡಿಕೇರಿ ಎಕ್ಸ್‍ಪ್ರೆಸ್ ವೇ ಯೋಜನೆಗಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಹೆಚ್‍ಎಐ)ವು ಭೂ ಸ್ವಾಧೀನ ಸಂಬಂಧ ಸರ್ವೆ ಕಾರ್ಯ ವನ್ನು ಆರಂಭಿಸಿದೆ.
ಭೂಸ್ವಾಧೀನ ಪರಿಹಾರ, ಸಮೀಕ್ಷಾ ವೆಚ್ಚ ಸೇರಿದಂತೆ ಮೈಸೂರು-ಮಡಿಕೇರಿ ಎಕ ನಾಮಿಕ್ ಕಾರಿಡಾರ್ ಎಕ್ಸ್‍ಪ್ರೆಸ್ ವೇ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ ಅನುದಾನದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 6 ಸಾವಿರ ಕೋಟಿ ರೂ. ಹಣವನ್ನು ವೆಚ್ಚ ಮಾಡುತ್ತಿದೆ. ಈ ಯೋಜನೆ ಪೂರ್ಣಗೊಂಡಲ್ಲಿ ಈ ರಸ್ತೆಯು ಮಡಿಕೇರಿಯಿಂದ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸದೇ ಮೈಸೂರು-ಬೆಂಗಳೂರು 10 ಪಥದ ರಸ್ತೆಗೆ ನೇರ ಸಂಪರ್ಕ ಕಲ್ಪಿಸುತ್ತದೆ.
ಮಡಿಕೇರಿಯಿಂದ ಬೆಂಗಳೂರು ನಗರಕ್ಕೆ ಯಾವುದೇ ಅಡೆ-ತಡೆಯಿಲ್ಲದೇ ವಾಹನ ಸಂಚಾರ ಸೌಲಭ್ಯ ಹೊಂದಲಿರುವ ಈ 6 ಪಥದ ರಸ್ತೆಯು, ಸುಂಟಿಕೊಪ್ಪ, ಕುಶಾಲ ನಗರ, ಬೈಲಕುಪ್ಪೆ, ಕೊಪ್ಪ, ಕಂಪಲಾಪುರ, ಪಿರಿಯಾಪಟ್ಟಣ, ಕಳ್ಬೆಟ್ಟ, ಗೋಣಿಕೊಪ್ಪ, ಹುಣಸೂರು ಪಟ್ಟಣಗಳಲ್ಲಿ ಬೈಪಾಸ್ ಮಾರ್ಗದಲ್ಲಿ ಸಾಗಲಿದೆ.
ಶ್ರೀರಂಗಪಟ್ಟಣ ಸಮೀಪದ ಬೊಮ್ಮೂರು ಅಗ್ರಹಾರ ಬಳಿ ಮೈಸೂರು-ಬೆಂಗಳೂರು ಹೆದ್ದಾರಿಗೆ ಸೇರುವ ಈ ರಸ್ತೆಗೆ ಮೊದಲ ಹಂತದ ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು, ಸ್ಥಳೀಯ ಕಂದಾಯ ಇಲಾಖೆ ಸಿಬ್ಬಂದಿ ನೆರವಿನಿಂದ ಈಗಾಗಲೇ ಶ್ರೀರಂಗಪಟ್ಟಣ, ಹುಣಸೂರು ತಾಲೂಕುಗಳಲ್ಲಿ ಸರ್ವೆ ಕೆಲಸ ಪೂರ್ಣಗೊಂಡಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ದೇವರಾಜ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನಲ್ಲಿ ಶೇ.50 ರಷ್ಟು ಜಂಟಿ ಸರ್ವೆ ಕಾರ್ಯ ನಡೆದಿದ್ದು, 2020ರ ಡಿಸೆಂಬರ್ ಅಂತ್ಯದ ವೇಳೆಗೆ ಮೈಸೂರು-ಮಡಿಕೇರಿ ನಡುವಿನ ಒಟ್ಟು 115 ಕಿ.ಮೀ ರಸ್ತೆಯ ಗಡಿ ನಿರ್ಧರಣೆಗಾಗಿ ಸರ್ವೆ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದೂ ತಿಳಿಸಿದರು.
ಹೆದ್ದಾರಿಗೆ ಗಡಿ ಗುರುತಿಸಿ ಕಲ್ಲುಗಳನ್ನು ಅಳವಡಿಸಲಾಗುತ್ತಿದೆ. ತೆಪ್ಪದಗಂಡಿ ಹ್ಯಾಂಗಿಂಗ್ ಬ್ರಿಡ್ಜ್ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಹೊಸ ಸೇತುವೆಯನ್ನು ನಿರ್ಮಿಸಬೇಕಾಗಿದೆ. ಸರ್ವೆ ಕಾರ್ಯ ಪೂರ್ಣಗೊಂಡ ಮೇಲೆ ರಸ್ತೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗು ವುದು. ನೋಟೀಸ್ ಜಾರಿ ಮಾಡಿ ಭೂ ಮಾಲೀಕರಿಂದ ಆಕ್ಷೇಪಣೆಗಳನ್ನು ಆಹ್ವಾ ನಿಸಬೇಕಾಗುತ್ತದೆ. ಪರಿಹಾರ ಹಣ ನಿಗದಿ ಪಡಿಸಿ, ಭೂ ಮಾಲೀಕರನ್ನು ಖಚಿತ ಪಡಿಸಿಕೊಂಡ ನಂತರ ಪರಿಹಾರವನ್ನು ನೀಡುವ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ದೇವರಾಜ್ ತಿಳಿಸಿದರು.