ವಿಧಾನಸಭೆಯಲ್ಲಿ ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆ ಮಂಡನೆ
ಮೈಸೂರು

ವಿಧಾನಸಭೆಯಲ್ಲಿ ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆ ಮಂಡನೆ

March 11, 2020

ಕೌನ್ಸೆಲಿಂಗ್ ಕಡ್ಡಾಯ, ಅವಧಿಯ ನಂತರದ ವರ್ಗಕ್ಕೆ ಅವಕಾಶ
ಬೆಂಗಳೂರು, ಮಾ.10- ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಲಭ್ಯತೆಯನ್ನು ಖಾತರಿಪಡಿಸಲು ವಿಧಾನಸಭೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ, 2020 ಅನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಂಡಿಸಿದರು.

ಈ ವಿಧೇಯಕ ವರ್ಗಾವಣೆಗೆ ಕೋರಿ ಅರ್ಜಿ ಸಲ್ಲಿಸುವ ಶಿಕ್ಷಕರ ಅರ್ಹತೆಗಳನ್ನು ಸ್ಪಷ್ಟಪಡಿಸಿದೆ. ಒಂದು ಶಾಲೆಯಲ್ಲಿ ಕನಿಷ್ಠ ಮೂರು ವರ್ಷಗಳ ಸೇವೆ ಸಲ್ಲಿಸಿದ ಶಿಕ್ಷಕರು ಮಾತ್ರ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಬಹುದು. ರೊಟೇಷನ್ ಪದ್ಧತಿ ಅನುಸರಿಸಲು ವಲಯವಾರು ವರ್ಗಾವಣೆ ಗಳನ್ನು ಜಾರಿಗೊಳಿಸಲಾಗಿದೆ. 50 ವರ್ಷ ದಾಟಿದ ಶಿಕ್ಷಕಿಯರು, 55 ವರ್ಷ ದಾಟಿ ಶಿಕ್ಷಕರಿಗೆ ವಲಯವಾರು ವರ್ಗಾವಣೆಗಳಿಂದ ವಿನಾಯ್ತಿ ನೀಡಲಾಗುವುದು ಎಂದು ಮಸೂದೆ ಉಲ್ಲೇಖಿಸಿದೆ.

ಮಾನ್ಯುಯಲ್ ಕೌನ್ಸೆಲಿಂಗ್ ನಿಷೇಧ: ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಮ್ಯನ್ಯುಯಲ್ ಕೌನ್ಸೆ ಲಿಂಗ್ ಅನ್ನು ಸಂಪೂರ್ಣ ನಿಷೇಧಿಸಿದ್ದು, ಕೇವಲ ಗಣಕೀಕೃತ ಕೌನ್ಸಲಿಂಗ್ ಮೂಲಕ ಮಾತ್ರ ವರ್ಗಾ ವಣೆ ಪ್ರಕ್ರಿಯೆ ನಡೆಸಬೇಕು. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆಯುವ ಶಿಕ್ಷರ ಸಮರ್ಪಕ ಮರುಹಂಚಿಕೆ, ವಲಯವಾರು ಮತ್ತು ಕೋರಿಕೆಯ ವರ್ಗಾವಣೆಯಂತಹ ಸಾರ್ವತ್ರಿಕ ವರ್ಗಾವಣೆ ಯಲ್ಲಿ ಕಡ್ಡಾಯವಾಗಿ ಗಣಕೀಕೃತ ಕೌನ್ಸಲಿಂಗ್ ನಡೆಸಬೇಕು ಎಂದು ಮಸೂದೆ ಸ್ಪಷ್ಟಪಡಿಸಿದೆ.

ಆದರೆ, ಈ ಮಸೂದೆ ಸಾರ್ವತ್ರಿಕ ಕೌನ್ಸೆಲಿಂಗ್ ಮುಗಿದ ನಂತರವೂ ರಾಜ್ಯ ಸರ್ಕಾರದ ನಿರ್ದೇ ಶನದ ಮೇರೆಗೆ ವಿಶೇಷ ಸನ್ನಿವೇಶಗಳಲ್ಲಿ ವರ್ಗಾ ವಣೆ ಮಾಡಲು ಅವಕಾಶ ಕಲ್ಪಿಸಿದೆ. ಜೊತೆಗೆ, ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಶಿಕ್ಷಕರು ಒಂದು ಸ್ಥಳವನ್ನು ಆಯ್ಕೆ ಮಾಡದಿದ್ದಲ್ಲಿ, ಯಾವುದೇ ಶಾಲೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಅನುಪಾತ ಸರಿಯಿಲ್ಲದಿದ್ದಲ್ಲಿ ಅಥವಾ ಸರ್ಕಾರದ ಇತರ ಕಾರಣಗಳಿದ್ದಲ್ಲಿ, ಕನಿಷ್ಠ ಸೇವಾವಧಿ ಪೂರ್ಣಗೊಳಿ ಸಿದ ಯಾವುದೇ ಶಿಕ್ಷಕರನ್ನು ಅಗತ್ಯವಿರುವ ಸ್ಥಳಕ್ಕೆ ವರ್ಗ ಮಾಡಬಹುದು ಎಂದು ಮಸೂದೆ ತಿಳಿಸಿದೆ.

ಸಮರ್ಪಕ ಮರು ಹಂಚಿಕೆ ಮತ್ತು ವಲಯ ವಾರು ವರ್ಗಾವಣೆಗಳಲ್ಲಿ ಯಾವುದೇ ಶಿಕ್ಷಕರನ್ನು ವರ್ಗ ಮಾಡುವುದಿದ್ದಲ್ಲಿ, ಅವರ ಕನಿಷ್ಠ ಸೇವೆ ಯನ್ನು ಪರಿಗಣಿಸುವಾಗ, ಹಿಂದಿನ ಶಾಲೆಯಲ್ಲಿ ಸಲ್ಲಿಸಿದ ಸೇವೆಯನ್ನು ಕೂಡ ಪರಿಗಣಿಸಬಹುದು ಎಂದು ಮಸೂದೆ ತಿಳಿಸಿದೆ. ಪ್ರತಿ ಎರಡು ವರ್ಷಗಳಿ ಗೊಮ್ಮೆ ಸರ್ಕಾರ ಶಿಷ್ಯ-ಶಿಕ್ಷಕ ಅನುಪಾತದ ಆಧಾರದ ಮೇಲೆ ಶಿಕ್ಷಕರನ್ನು ಮರುಹಂಚಿಕೆ ಮಾಡಬಹುದು. ನಂತರ ಯಾವುದೇ ಶಾಲೆಯಲ್ಲಿ ಹೆಚ್ಚುವರಿ ಹುದ್ದೆಗಳಿದ್ದಲ್ಲಿ, ಅವರನ್ನು ಅಗತ್ಯವಿರುವ ಶಾಲೆಗಳಿಗೆ ಕೌನ್ಸಲಿಂಗ್ ಮೂಲಕ ಮರು ನೇಮಕಾತಿ ಮಾಡಬಹುದು ಎಂದು ಮಸೂದೆ ವಿವರಿಸಿದೆ.

ಕರ್ನಾಟಕ ಸಿವಿಲ್ ಸೇವೆಗಳ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು 1957ರ ಅಡಿಯಲ್ಲಿ ದಂಡನೆಗೆ ಗುರಿಯಾಗಿರುವ ಮತ್ತು ಕಾನೂನು ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಶಿಕ್ಷಕನನ್ನು, ಕನಿಷ್ಠ ಸೇವಾವಧಿ ಪೂರೈಸಿರದಿದ್ದಲ್ಲಿ ಸಿ ವಲಯದ ಯಾವುದೇ ಖಾಲಿ ಜಾಗಕ್ಕೆ ವರ್ಗ ಮಾಡ ಬಹುದು ಎಂದು ಮಸೂದೆ ಸ್ಪಷ್ಟಪಡಿಸಿದೆ.

ಕಲ್ಯಾಣ ಕರ್ನಾಟಕ ಪ್ರದೇಶದ ಯಾವುದೇ ಆರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಆ ಭಾಗದ ಹೊರಗಿನ ಪ್ರದೇಶಗಳಿಗೆ ವರ್ಗಾವಣೆ ಕೋರಲು, ಕನಿಷ್ಠ 10 ವರ್ಷಗಳ ಸೇವೆ ಪೂರೈಸಿರಬೇಕು ಮತ್ತು ಇತರ ಅರ್ಹತಾ ಷರತ್ತುಗಳನ್ನು ಒಳಗೊಂಡಿರಬೇಕು ಎಂದು ಮಸೂದೆ ತಿಳಿಸಿದೆ.

Translate »