ಬೆಂಗಳೂರು, ಮಾ.10- ಸಂವಿಧಾನದ ಮೇಲೆ ಚರ್ಚೆ ವೇಳೆ ವಿಧಾನಸಭೆಯಲ್ಲಿ ವೈದ್ಯ ಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ಕೆಟ್ಟ ಪದಗಳಲ್ಲಿ ವಾಗ್ಯುದ್ಧ ನಡೆದಿದೆ.
17 ಶಾಸಕರ ರಾಜೀನಾಮೆ ವಿಚಾರದಲ್ಲಿ ಈ ಹಿಂದಿನ ಸ್ಪೀಕರ್ ಪಕ್ಷಪಾತವಾಗಿ ನಡೆದು ಕೊಂಡರು ಎಂದು ಸದನದಲ್ಲಿ ಸಚಿವ ಡಾ. ಸುಧಾಕರ್ ಆರೋಪಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಮಾಜಿ ಸ್ಪೀಕರ್ ರಮೇಶ್ ಕುಮಾರ್, ತಾವು ಎಲ್ಲಿದ್ದೇವೆ ಎಂಬುದನ್ನು ಮರೆತು ಸುಧಾಕರ್ ವಿರುದ್ಧ ಅಶ್ಲೀಲ ಮತ್ತು ಕೆಟ್ಟ ಶಬ್ದ ಪ್ರಯೋಗ ಮಾಡಿದರು. ಈ ವೇಳೆ ವಾಕ್ಸಮರವೇ ನಡೆದು ಹೋಯಿತು.
ಬಿಜೆಪಿ ಶಾಸಕರು ಸಚಿವ ಸುಧಾಕರ್ ಅವರಿಗೆ ಸಾಥ್ ನೀಡಿದರು. ಅಷ್ಟೇ ಅಲ್ಲದೆ ಸದನದ ಒಳಗೆಯೇ ಇದ್ದ ನೂತನ ಸಚಿವರು ಸಹ ಅಬ್ಬರಿಸಿ ಘೋಷಣೆ ಕೂಗಿದ್ದು ವಿಶೇಷವಾಗಿತ್ತು. ಈ ನಡುವೆ ವಿಧಾನಸಭೆ ಕಲಾಪವನ್ನು ಕೆಲಕಾಲ ಮುಂದೂಡಿದಾಗ ವಲಸೆ ಹಕ್ಕಿಗಳ ಗುಂಪು ಸಿಎಂ ಯಡಿಯೂರಪ್ಪ ಸುತ್ತುವರಿದಿತ್ತು.
ಕಾಂಗ್ರೆಸ್‍ನಿಂದ ಬಿಜೆಪಿಗೆ ಬಂದು ಶಾಸಕರಾಗಿ, ಸಚಿವರಾಗಿರುವ ಎಸ್.ಟಿ.ಸೋಮಶೇಖರ್, ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್, ಆನಂದ್ ಸಿಂಗ್ ಅವರು ಸುಧಾಕರ್ ಅವರ ಬೆನ್ನಿಗೆ ನಿಲ್ಲಬೇಕು ಎಂದು ಮನವಿ ಮಾಡಿ ದರು. ಅಷ್ಟೇ ಅಲ್ಲ ರಮೇಶ್ ಕುಮಾರ್ ಬಾಸ್ಟರ್ಡ್ ಅಂತ ಪದ ಬಳಕೆ ಮಾಡಿದ್ದಾರೆ. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ರಮೇಶ್ ಕುಮಾರ್ ಸಸ್ಪೆಂಡ್‍ಗೆ ಒತ್ತಾಯಿಸಬೇಕು ಎಂದು ಹೇಳಿದರು. ಆಗ ಸಿಎಂ ಕೂಡ ಸಾಥ್ ನೀಡುವುದಾಗಿ ಹೇಳಿ ನಗುನಗುತ್ತಾ ರಮೇಶ್ ಜಾರಕಿಹೊಳಿ ಬೆನ್ನುತಟ್ಟಿದರು. ಸ್ಪೀಕರ್ ಕೆಲ ಕಾಲ ಆಗ ಸಭೆ ಮುಂದೂಡಿದರೂ ವಿಧಾನಸಭೆ ಸಭಾಂಗಣದಲ್ಲಿ ಇರುವ ಸಿಎಂ, ಸಚಿವರು, ಬಿಜೆಪಿ ಶಾಸಕರು ಇದ್ದು ಚರ್ಚೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.
ಈ ಬೆನ್ನಲ್ಲೇ ಸದನದಿಂದ ಹೊರ ನಡೆದ ರಮೇಶ್ ಕುಮಾರ್ ಅವರು ನೇರವಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಗೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದು. ಈ ವಿಚಾರ ಗೊತ್ತಾಗಿ ಕೂಡಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೌಡಾಯಿಸಿ, ರಮೇಶ್ ಕುಮಾರ್ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಬಿಜೆಪಿ ಸುಧಾಕರ್ ಪರ ನಿಂತಿದ್ದು, ಕಾಂಗ್ರೆಸ್ ರಮೇಶ್ ಕುಮಾರ ಪರ ನಿಂತಿದೆ. ಉಭಯ ಪಕ್ಷಗಳು ನಾಳೆ ಸದನದಲ್ಲಿ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿವೆ.
ಕಲಾಪದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸುಧಾಕರ್, ನನ್ನ ವಿರುದ್ಧ ಕಾಂಗ್ರೆಸ್ ನವರು ಹಕ್ಕುಚ್ಯುತಿ ಮಂಡನೆಗೆ ಮುಂದಾಗಿ ದ್ದಾರೆ. ನಾಳೆ ನಾವು ಎಲ್ಲ ಬಿಜೆಪಿ ಸದಸ್ಯರೂ ರಮೇಶ್ ಕುಮಾರ್ ಉಚ್ಛಾಟನೆಗೆ ನಿರ್ಧರಿಸಿದ್ದೇವೆ. ನಾಳೆ ಸದನದಲ್ಲಿ ರಮೇಶ್ ಕುಮಾರ್ ಉಚ್ಛಾ ಟನೆಗೆ ನಾವು ಒತ್ತಾಯಿಸುತ್ತೇವೆ ಎಂದರು.