ಖಾದ್ಯ ತಯಾರಿಸಿ ಹಂಚಿ ಸಂಭ್ರಮಿಸಿದ ಕಾಶ್ಮೀರಿ ಯುವಜನ: 40 ಸೆಕೆಂಡ್‍ನಲ್ಲಿ ಅರ್ಧ ಕೆಜಿ ಕಲ್ಲಂಗಡಿ ತಿಂದ ಬಾರಾಮುಲ್ಲಾದ ತಮ್‍ಜೀದ್ ಪ್ರಥಮ ಸ್ಥಾನ
ಮೈಸೂರು

ಖಾದ್ಯ ತಯಾರಿಸಿ ಹಂಚಿ ಸಂಭ್ರಮಿಸಿದ ಕಾಶ್ಮೀರಿ ಯುವಜನ: 40 ಸೆಕೆಂಡ್‍ನಲ್ಲಿ ಅರ್ಧ ಕೆಜಿ ಕಲ್ಲಂಗಡಿ ತಿಂದ ಬಾರಾಮುಲ್ಲಾದ ತಮ್‍ಜೀದ್ ಪ್ರಥಮ ಸ್ಥಾನ

March 11, 2020

ಮೈಸೂರು, ಮಾ.10(ಎಂಕೆ)- ಕಲ್ಲಂಗಡಿ, ಬಾಳೆ ಹಣ್ಣನ್ನು ಪೈಪೋಟಿ ಮೇರೆಗೆ ವೇಗವಾಗಿ ತಿಂದು, ಹಾಡಿ, ಕುಣಿದು ಕುಪ್ಪಳಿಸಿದ ಕಾಶ್ಮೀರಿ ಯುವ ಚೇತನರು, ಅದೇ ವೇಳೆ, ಬಗೆ ಬಗೆಯ ಕಾಶ್ಮೀರಿ ವಿಶೇಷ ಖ್ಯಾದ್ಯಗಳನ್ನು ತಯಾರಿಸಿ ಸಂಭ್ರಮಿಸಿದರು.

‘ಕಾಶ್ಮೀರಿ ಯುವಜನ ವಿನಿಮಯ’ ವಿಶೇಷ ಕಾರ್ಯಕ್ರಮದ ಹಿನ್ನೆಲೆ ಮಂಗಳವಾರ ನೆಹರು ಯುವಕೇಂದ್ರ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿ ಸಿದ ಕಾಶ್ಮೀರಿ ಯುವಕ-ಯುವತಿಯರು ಮತ್ತು ವಿಜಯನಗರ 3ನೇ ಹಂತದ ಚಾಮುಂಡೇಶ್ವರಿ ಮತ್ತು ಅನ್ನಪೂರ್ಣೇಶ್ವರಿ ಸ್ವ-ಸಹಾಯ ಸಂಘದ ಸದಸ್ಯರು ಸಂತಸದ ಅಲೆಯಲ್ಲಿ ತೇಲಿದರು.

ಕಲ್ಲಂಗಡಿ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಕೇವಲ 40 ಸೆಕೆಂಡುಗಳಲ್ಲಿ ಅರ್ಧ ಕೆಜಿಗೂ ಹೆಚ್ಚು ಹಣ್ಣು ತಿಂದ ಬಾರಾಮುಲ್ಲಾ ಜಿಲ್ಲೆಯ ತಮ್‍ಜೀದ್ ಪ್ರಥಮ ಸ್ಥಾನ ಪಡೆದರೆ, ಕುಪ್ವಾರದ ರಯಾನ್ ದ್ವಿತೀಯ ಮತ್ತು ಅನಂತ ನಾಗ್ ಜಿಲ್ಲೆಯ ಆಸಿಫ್ ತೃತೀಯ ಸ್ಥಾನ ಪಡೆದು ಕೊಂಡರು. ಮಹಿಳೆಯರ ವಿಭಾಗದಲ್ಲಿ ಶ್ರೀನಗರದ ಮರಿಯಾ ಪ್ರಥಮ, ಮೈಸೂರಿನ ಪುಷ್ಪಾ ದ್ವಿತೀಯ ಮತ್ತು ಶ್ರೀನಗರದ ಕೌರಸ್ ರಷೀದ್ ತೃತೀಯ ಸ್ಥಾನ ಪಡೆದರು.

ಬಾಳೆ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಬಾರಾಮುಲ್ಲಾದ ಫಾಹಿನ್ ಪ್ರಥಮ, ಪುಲ್ವಾಮದ ಕಾಶಿಫ್ ದ್ವಿತೀಯ ಮತ್ತು ಅನಂತ ನಾಗ್‍ನ ಫರ್ವೇಜ್ ತೃತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಶ್ರೀನಗರದ ತಂಜೀಲಾ ಪ್ರಥಮ, ಮೈಸೂರಿನ ಚಂದನ ದ್ವಿತೀಯ ಹಾಗೂ ಶ್ರೀನಗರದ ಸಲ್ಮಾ ತೃತೀಯ ಸ್ಥಾನ ಪಡೆದುಕೊಂಡರು.

ನೀರು ತುಂಬಿದ ಬಕೆಟ್‍ನಲ್ಲಿ ತೇಲುವ ಲೋಟ ದೊಳಕ್ಕೆ ನಾಣ್ಯ ಎಸೆಯುವ ಸ್ಪರ್ಧೆಯಲ್ಲಿ ಶ್ರೀನಗರದ ತಂಜೀಲಾ ಮತ್ತು ಮೈಸೂರಿನ ಅಂಬಿಕಾ ಪ್ರಥಮ ಸ್ಥಾನ ಹಂಚಿಕೊಂಡರು. ಹಾಗೆಯೇ ರಾಗಿಹಿಟ್ಟಿ ನೊಳಗೆ ಚಿಲ್ಲರೆ ಕಾಯಿನ್ ಹುಡುಕುವ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಕುಪ್ವಾರದ ಯಾಕಿಬ್ ಪ್ರಥಮ, ಪುಲ್ವಾಮದ ಬಿಲಾಲ್ ದ್ವಿತೀಯ, ಬದ್ಗಾಮ್ ನ ಉಮರ್ ಅಮೀದ್ ತೃತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಶ್ರೀನಗರದ ಬಾಜಿಲ್ ಲಾಲ್ ಪ್ರಥಮ, ತವೀಶ್ ದ್ವಿತೀಯ ಮತ್ತು ಮೈಸೂರಿನ ಅನಿತಾ ತೃತೀಯ ಸ್ಥಾನ ಗೆದ್ದುಕೊಂಡರು.

ಕಾಶ್ಮೀರಿ ವಿಶೇಷ ಅಡುಗೆ: ಬಳಿಕ ವಿಶೇಷ ಕಾಶ್ಮೀರಿ ಖಾದ್ಯಗಳಾದ ಶಾಯಿ ಪನ್ನೀರ್, ಕಾಶ್ಮೀರಿ ಪಲಾವ್, ನೂರ್ ಬೀನ್ಸ್, ಕಾಶ್ಮೀರಿ ಯಬ್ನಿ, ಶಾಯಿ ರಜ್ನ, ಮೊಸರು ಬಜ್ಜಿ, ನಾನ್ ಚಾಯ್, ಗ್ರೀನ್ ಸಲಾಡ್ ಮತ್ತು ಬೆಂಗಳೂರ್ ರೋಟಿ ತಯಾರಿಸಿದ ಕಾಶ್ಮೀರದ ಯುವಜನ, ಬಳಿಕ ಖಾದ್ಯಗಳನ್ನು ಸವಿದು ಖುಷಿಪಟ್ಟರು.

ಹಾಡು, ನೃತ್ಯ: ವಿಜಯನಗರ 3ನೇ ಹಂತದ ವಿವಿಧ ಸ್ವ-ಸಹಾಯ ಸದಸ್ಯರೊಡನೆ ಸೇರಿ ಜಾನಪದ, ಭಾವಗೀತೆ ಮತ್ತು ಕನ್ನಡ, ಹಿಂದಿ ಚಿತ್ರಗೀತೆಗಳನ್ನು ಹಾಡಿ, ಕುಣಿದು ಕುಪ್ಪಳಿಸಿದರು.
ಜಿಲ್ಲಾ ಯುವ ಸಮನ್ವಯಾಧಿಕಾರಿ ಸಿದ್ದ ರಾಮಪ್ಪ, ನಿವೃತ್ತ ಅಧಿಕಾರಿ ಎಸ್.ಯು. ಜಮಾದಾರ್, ನೆಹರು ಯುವ ಕೇಂದ್ರದ ಖಜಾಂಚಿ ಚಿಂದಗಿರಿಗೌಡ, ಪ್ರೊ.ಮನೋನ್ಮಣಿ, ಕ್ರೆಡಿಟ್ ಐ ಸಂಸ್ಥೆಯ ಎಂ.ಪಿ. ವರ್ಷ, ಅನಿತ, ಮಂಜುಳ ರಮೇಶ್ ಮತ್ತಿತರರಿದ್ದರು.

Translate »