ಮಡಿಕೇರಿ, ಜ.10- ಕೊಡಗಿನ ವಿವಿಧ ದೇವಾಲಯಗಳಲ್ಲಿ ನಡೆದಿದ್ದ ಗಂಟೆ ಕಳವು ಪ್ರಕರಣವನ್ನು ಭೇದಿಸಿರುವ ಕೊಡಗು ಪೊಲೀಸರ ವಿಶೇಷ ತಂಡ, ನಾಲ್ವರು ಅಂತರ ಜಿಲ್ಲಾ ಕಳ್ಳರನ್ನು ಬಂಧಿ ಸುವಲ್ಲಿ ಯಶಸ್ವಿಯಾಗಿದೆ.
ಮೈಸೂರು ಕೆಸರೆ ನಿವಾಸಿಗಳಾದ ಅಮ್ಜದ್ ಅಹಮದ್(37), ಸಮೀವುಲ್ಲಾ ಅಲಿಯಾಸ್ ಸಮಿ(22), ಜುಲ್ಫೀಕರ್ ಅಲಿಯಾಸ್ ಜುಲ್ಲು(36) ಮತ್ತು ಹೈದರ್(36) ಬಂಧಿತ ಆರೋಪಿಗಳು. ಇವರಿಂದ 10 ಲಕ್ಷ ರೂ. ಮೌಲ್ಯದ 750 ಕೆ.ಜಿ. ತೂಕದ ವಿವಿಧ ಮಾದರಿ ಲೋಹದ ಗಂಟೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆ ಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚೀರ ಎ. ಅಯ್ಯಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
8 ಪ್ರಕರಣಗಳು ದಾಖಲು: ಕಳೆದ 2022ನೇ ಸಾಲಿನ ಫೆಬ್ರವರಿ ತಿಂಗಳಿಂದ ಅಕ್ಟೋಬರ್‍ವರೆಗೆ ದೇವಾಲಯಗಳ ಗಂಟೆ ಕಳವು ಕುರಿತು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 8 ಪ್ರಕರಣ ಗಳು ದಾಖಲಾಗಿದ್ದವು. ಗೋಣಿಕೊಪ್ಪ ಮಾಯಮುಡಿ ಕಮಟೆ ಶ್ರೀ ಮಹದೇವ ದೇವಾಲಯ, ಪೊನ್ನಂಪೇಟೆ ನಿಟ್ಟೂರು ಕಾರ್ಮಾಡುವಿನ ಕಾಲ ಭೈರವೇಶ್ವರ ದೇವಾ ಲಯ, ಬಿಳೂರು ಕಲ್ಲುಗುಡಿ ಈಶ್ವರ ದೇವ ಸ್ಥಾನ, ಬೆಸಗೂರಿನ ಮಹಾದೇವ ದೇವ ಸ್ಥಾನ, ಶ್ರೀ ದುರ್ಗಿ ದೇವಸ್ಥಾನ, ಹಳ್ಳಿಗಟ್ಟಿನ ಭದ್ರಕಾಳಿ ದೇವಾಲಯ, ವಿರಾಜಪೇಟೆಯ ಕರಡ ಮಲೆತಿರಿಕೆ ಈಶ್ವರ ದೇವಸ್ಥಾನ, ಕೆದಮಳ್ಳೂರು ಶ್ರೀ ಮಹಾದೇವ ದೇವಸ್ಥಾನ, ನಾಪೋಕ್ಲು ಮಕ್ಕಿ ಶಾಸ್ತಾವು ದೇವಸ್ಥಾನಗಳಿಂದ ನೂರಾರು ಗಂಟೆಗಳನ್ನು ಕಳವು ಮಾಡಲಾಗಿತ್ತು. ಸಿ.ಸಿ. ಕ್ಯಾಮರಾಗಳಿಗೆ ಹಾನಿ ಮಾಡಿ ದೇವಾಲಯಗಳ ಆವರಣದಲ್ಲಿದ್ದ ವಿವಿಧ ಲೋಹಗಳ ಗಂಟೆಗಳನ್ನು ಕದ್ದಿದ್ದರು. ಇದು ಭಕ್ತರ ಭಾವನೆಗೆ ಧಕ್ಕೆ ತಂದಿತ್ತಲ್ಲದೇ, ಆರೋಪಿಗಳ ಬಂಧನಕ್ಕೆ ತೀವ್ರ ಒತ್ತಡವಿತ್ತು.
ವಿಶೇಷ ತಂಡ ರಚನೆ: ದೇವಾಲಯಗಳ ಗಂಟೆಗಳನ್ನೇ ಟಾರ್ಗೆಟ್ ಮಾಡಿ ಕಳವು ನಡೆಸುತ್ತಿದ್ದ ಆರೋಪಿಗಳ ಬಂಧನಕ್ಕೆ ಒಂದು ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಒಟ್ಟು 30 ಮಂದಿಯ ಈ ತಂಡ ಎಲ್ಲಾ ಮೂಲಗಳಿಂದ ಮಾಹಿತಿ ಕಲೆ ಹಾಕಿತ್ತಲ್ಲದೇ, ಘಟನೆ ನಡೆದ ಸ್ಥಳದಲ್ಲಿದ್ದ ಸಿ.ಸಿ. ಕ್ಯಾಮರಾ ಮತ್ತು ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸಿ ಆರೋಪಿಗಳ ಬೆನ್ನು ಹತ್ತಿತ್ತು.
3 ತಿಂಗಳ ಕ್ಯಾಂಪ್: ಟವರ್ ಲೊಕೇಶನ್, ಮೊಬೈಲ್ ಕರೆ ಮತ್ತಿತ್ತರ ಮಾಹಿತಿಗಳನ್ನು ಕಳೆದ 3 ತಿಂಗಳಿಂದ ಕಲೆ ಹಾಕಿದ್ದ ಪೊಲೀಸರ ವಿಶೇಷ ತಂಡ, ಇದಕ್ಕಾಗಿಯೇ ಮೈಸೂರಿನಲ್ಲಿ 3 ತಿಂಗಳಿಂದ ಕ್ಯಾಂಪ್ ಹೂಡಿತ್ತು. ಗಂಟೆ ಕಳವು ನಡೆದಿದ್ದ ಸ್ಥಳದಿಂದ ಮೈಸೂರುವರೆಗೆ ಅಳವಡಿಸಿದ್ದ ಎಲ್ಲಾ ಸಿ.ಸಿ. ಕ್ಯಾಮರಾಗಳ ಜಾಡು ಹಿಡಿದ ಪೊಲೀಸ್ ತಂಡ ಮಾಲು ಸಹಿತ ಆರೋಪಿಗಳನ್ನು ಬಂಧಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಲ್ಚೀರ ಅಯ್ಯಪ್ಪ ವಿವರಿಸಿದರು. ಆರೋಪಿಗಳು ಗಂಟೆಗಳನ್ನು ಕರಗಿಸಿ ಲೋಹವನ್ನು ಕೈಗಾರಿಕೆಗಳಿಗೆ ಮಾರಾಟ ಮಾಡುತ್ತಿದ್ದರು. ಗಂಟೆ ಕಳವು ನಡೆಸುವ ಮುನ್ನಾ ಆರೋಪಿಗಳು ಮಾಹಿತಿ ಕಲೆ ಹಾಕುತ್ತಿದ್ದರು. ತದನಂತರ ರಾತ್ರಿ ವೇಳೆ ಸಮಯ ಸಾಧಿಸಿ ದೇವಾಲ ಯದಲ್ಲಿ ಅಳವಡಿಸಿದ್ದ ಸಿ.ಸಿ. ಕ್ಯಾಮರಾಗಳಿಗೆ ಹಾನಿಪಡಿಸಿ ಗಂಟೆಗಳನ್ನು ಕಳವು ಮಾಡುತ್ತಿದ್ದರು. ಇದಕ್ಕಾಗಿ ಮೆಟಲ್ ಕಟ್ಟರ್ ಬಳಸುತ್ತಿದ್ದರು. ಬಳಿಕ ದೆಹಲಿ ನೋಂದಣಿ ಹೊಂದಿದ್ದ ಡಿಎಲ್.4ಸಿ-ಎಜಿ8070 ಹುಂಡೈ ಗೆಟ್ಸ್ ಕಾರಿನಲ್ಲಿ ಕಳವು ಮಾಡಿದ ಗಂಟೆಗಳನ್ನು ಸಾಗಿಸುತ್ತಿದ್ದರು ಎಂದು ಎಸ್.ಪಿ. ಅಯ್ಯಪ್ಪ ಮಾಹಿತಿ ನೀಡಿದರು.
ಅಂತರ ಜಿಲ್ಲಾ ಕಳ್ಳರು: ಬಂಧಿತ ಆರೋಪಿಗಳು ಪಿರಿಯಾಪಟ್ಟಣ, ಹಾಸನ, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಗಂಟೆಗಳನ್ನು ಕದ್ದಿರುವ ಮಾಹಿತಿ ವಿಚಾರಣೆಯಿಂದ ತಿಳಿದು ಬಂದಿದೆ. ಈ ಕುರಿತು ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದ್ದು, ಆಯಾ ಠಾಣಾ ವ್ಯಾಪ್ಯಿಯಲ್ಲಿ ನಡೆದಿರುವ ಗಂಟೆ ಕಳುವಿನ ಕುರಿತು ಮಾಹಿತಿ ಕೇಳಲಾಗಿದೆ. ಆರೋಪಿಗಳು ಒಂದೇ ಕುಟುಂಬದವರಾಗಿದ್ದು, ಕೊಡಗು ಜಿಲ್ಲೆಯೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ. ಪ್ರಕರಣದ ಕುರಿತು ಹೆಚ್ಚಿನ ತನಿಖೆಯೂ ಪ್ರಗತಿಯಲ್ಲಿದೆ. ಗಂಟೆ ಕಳವು ಕೃತ್ಯಕ್ಕೆ ಬಳಸಲಾಗಿದ್ದ ಕಾರಿನ ಬಗ್ಗೆಯೂ ಸಂಶಯವಿದೆ. ಈ ಹಿನ್ನೆಲೆಯಲ್ಲಿ ಅದರ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಅಯ್ಯಪ್ಪ ವಿವರಿಸಿದರು.
ನೂರಾರು ಕೆ.ಜಿ. ಗಂಟೆ: ಆರೋಪಿಗಳು ಜಿಲ್ಲೆಯ ವಿವಿಧ ದೇವಾಲಯಗಳಿಂದ ನೂರಾರು ಕೆ.ಜಿ. ತೂಕದ ಗಂಟೆಗಳನ್ನು ಕಳವು ಮಾಡಿದ್ದರು.
ಈ ಪೈಕಿ ಸಣ್ಣ ಗಾತ್ರದ ಗಂಟೆಯೊಂದಿಗೆ 80 ಕೆ.ಜಿ. ಹಾಗೂ 120 ಕೆ.ಜಿ. ತೂಕದ ಲೋಹದ ಗಂಟೆಗಳನ್ನು ಕಳವು ಮಾಡಿದ್ದರು. ಸುದ್ದಿಗೋಷ್ಟಿಗೆ ಕಳವು ಮಾಡಲಾಗಿದ್ದ 750 ಕೆ.ಜಿ. ತೂಕದ ಗಂಟೆಗಳನ್ನು ಮಿನಿ ಗೂಡ್ಸ್ ವಾಹನದಲ್ಲಿ ಪೊಲೀಸರು ತಂದಿದ್ದರು. ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟ ಪ್ರಕರಣಗಳ ಗಂಟೆಗಳನ್ನು ವಿಂಗಡಿಸಿ ಪ್ರತ್ಯೇಕ ಇಡಲಾಗಿತ್ತು. ಈ ಪೈಕಿ 80 ಮತ್ತು 120 ಕೆ.ಜಿ. ತೂಕದ ಗಂಟೆಗಳನ್ನು ವಾಹನದಿಂದ ಇಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.