ಚಾಮುಂಡಿಬೆಟ್ಟದ ದೇವಿಕೆರೆ ಅಭಿವೃದ್ಧಿ ಕಾಮಗಾರಿಗೆ ಮೈಸೂರು ರಾಜವಂಶಸ್ಥರ ತಡೆ
ಮೈಸೂರು

ಚಾಮುಂಡಿಬೆಟ್ಟದ ದೇವಿಕೆರೆ ಅಭಿವೃದ್ಧಿ ಕಾಮಗಾರಿಗೆ ಮೈಸೂರು ರಾಜವಂಶಸ್ಥರ ತಡೆ

January 11, 2023

ಮೈಸೂರು,ಜ.10(ಎಂಟಿವೈ)- ಚಾಮುಂಡಿಬೆಟ್ಟದ ದೇವಿಕೆರೆ ಅಭಿವೃದ್ಧಿ ಕಾಮಗಾರಿಗೆ ಮೈಸೂರು ರಾಜಮನೆತನ ತಡೆಯೊಡ್ಡಿದೆ. ದೇವಿಕೆರೆಯೂ ಸೇರಿದಂತೆ ಸುತ್ತಮುತ್ತಲ ಆಸ್ತಿ ರಾಜವಂಶಸ್ಥರಿಗೆ ಸೇರಿದ್ದಾಗಿದ್ದು, ಅನುಮತಿ ಪಡೆಯದೇ ಕೆರೆ ಅಭಿವೃದ್ಧಿ ಮಾಡಬಾರದು ಎಂದು ತಮ್ಮ ವಕೀಲರ ಮೂಲಕ ತಡೆಹಿಡಿಯಲಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ 7.50 ಕೋಟಿ ರೂ. ವೆಚ್ಚದಲ್ಲಿ ದೇವಿಕೆರೆ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದ್ದು, ಕೆರೆಯಲ್ಲಿರುವ ನೀರನ್ನು ಪೂರ್ಣ ಪ್ರಮಾಣದಲ್ಲಿ ಹೊರಹಾಕಿ ಹೂಳೆತ್ತಲಾಗುತ್ತಿತ್ತು. ಕಳೆದ 7-8 ದಶಕದಿಂದಲೂ ಕೊಳಚೆ ನೀರಿನೊಂದಿಗೆ ಕೆರೆಗೆ ಸೇರಿದ್ದ ಹೂಳನ್ನು ಮೇಲೆತ್ತಲಾಗುತ್ತಿದ್ದು, ಆ ಮೂಲಕ ಕೆರೆಗೆ ಕಾಯಕಲ್ಪ ನೀಡಲು ನೀರಾವರಿ ಇಲಾಖೆ ಮುಂದಾಗಿತ್ತು.

ದೇವಿಕೆರೆ ಅಭಿವೃದ್ಧಿ ಕಾಮಗಾರಿ ಕುರಿತಂತೆ `ಮೈಸೂರು ಮಿತ್ರ’ನ ಜ.10ರ ಸಂಚಿಕೆಯ ಮುಖಪುಟದಲ್ಲಿ `ಚಾಮುಂಡಿ ಬೆಟ್ಟದ ದೇವಿಕೆರೆ ಪುನರ್‍ಜೀವನಗೊಳಿಸುವ ಕಾರ್ಯ ಆರಂಭ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.

ಕೆರೆ ಅಭಿವೃದ್ಧಿ ಕಾಮಗಾರಿ ಮಾಹಿತಿ ಅರಿತ ರಾಜವಂಶಸ್ಥ ರಾದ ಪ್ರಮೋದಾದೇವಿ ಒಡೆಯರ್ ಅವರು ತಮ್ಮ ವಕೀಲರ, ಚಾಮುಂಡಿಬೆಟ್ಟದ ದೇವಿಕೆರೆ ಬಳಿ ಕಳುಹಿಸಿ, ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ವಕೀಲರು ಸ್ಥಳಕ್ಕೆ ಬಂದು ಅರಮನೆ ಆಕ್ಷೇಪ ತಿಳಿಸುತ್ತಿದ್ದಂತೆ ಅಭಿವೃದ್ಧಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ರಾಜವಂಶಸ್ಥರ ಆಕ್ಷೇಪಕ್ಕೆ ಕಾರಣ: ಚಾಮುಂಡಿಬೆಟ್ಟದ ದೇವಿಕೆರೆ ಸೇರಿದಂತೆ ಸುತ್ತಮುತ್ತಲ ಆಸ್ತಿ ರಾಜಮನೆತನಕ್ಕೆ ಸೇರಿದ್ದಾಗಿದೆ ಎಂದು ರಾಜಮನೆತನ ಹಕ್ಕೊತ್ತಾಯ ಮಾಡುತ್ತಾ ಬಂದಿದೆ. ಹಾಗಾಗಿ ದೇವಿಕೆರೆ ಅಭಿವೃದ್ಧಿಗೂ ಅನುಮತಿ ಪಡೆ ಯದೇ ಇರುವುದು ರಾಜವಂಶಸ್ಥರ ಆಕ್ಷೇಪಕ್ಕೆ ಕಾರಣವಾಗಿದೆ. ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಲ್ಲಿ ದೇವಿಕೆರೆಯೂ ಪ್ರಧಾನ ಪಾತ್ರವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆರೆ ಅಭಿವೃದ್ಧಿಗೂ ಮುನ್ನ ತಮ್ಮ ಗಮನಕ್ಕೆ ತರದಿರುವುದು ಹಾಗೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾಮಗಾರಿ ಆರಂಭಿಸಿರುವುದು ರಾಜಮನೆತನ ದವರನ್ನು ಕೆರಳಿಸಿದೆ. ಹಾಗಾಗಿ ವಕೀಲರ ಮೂಲಕ ಕಾಮಗಾರಿಗೆ ತಡೆ ಯೊಡ್ಡಲಾಗಿದೆ ಎಂದು ಹೇಳಲಾಗುತ್ತಿದೆ. ಚಾಮುಂಡಿಬೆಟ್ಟದ ನಿವಾಸಿಗಳಿಗೆ ರಾಜಮನೆತನದವರ ಮೇಲೆ ಅಪಾರ ಗೌರವವಿದ್ದು, ದೇವಿಕೆರೆ ಅಭಿವೃದ್ಧಿ ಹಾಗೂ ಬೆಟ್ಟಕ್ಕೆ ಕುಡಿಯುವ ನೀರು ಸರಬರಾಜು ವಿಚಾರದಲ್ಲಿ ಸಹಕಾರ ನೀಡುವಂತೆ ರಾಜವಂಶಸ್ಥರನ್ನು ಕೋರಲು ಬೆಟ್ಟದ ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಪೈಪ್‍ಲೈನ್‍ಗೂ ಅನುಮತಿ ಕೋರಿ ಮನವಿ: ಚಾಮುಂಡಿಬೆಟ್ಟ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿದ್ದು, ನಿತ್ಯವೂ ಅಪಾರ ಪ್ರಮಾಣದಲ್ಲಿ ಭಕ್ತರು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, ಭಕ್ತರು, ಪ್ರವಾಸಿಗರಲ್ಲದೆ ಬೆಟ್ಟದ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರು ಸರಬರಾಜು ಸಾಧ್ಯವಾಗಿಲ್ಲ. ಈ ಹಿಂದೆ ಇದ್ದ ಕುಡಿಯುವ ನೀರು ಪೈಪ್‍ಲೈನ್ ಚಿಕ್ಕದಾಗಿದ್ದು, ಜನಸಂಖ್ಯೆ ಹಾಗೂ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಬೆಟ್ಟಕ್ಕೆ ಕುಡಿಯುವ ನೀರು ಸರಬರಾಜು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ 6 ವರ್ಷದ ಹಿಂದೆ 6 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಆರಂಭಿಸಲಾಗಿದ್ದು, ಬೆಟ್ಟದ ತಪ್ಪಲಿನಿಂದ ನಂದಿವರೆಗೂ ಹೊಸದಾಗಿ ಪೈಪ್‍ಲೈನ್ ಅಳವಡಿಸಲಾಗಿದೆ. ಆದರೆ, ಮುಂದೆ ಈ ಕಾಮಗಾರಿ ಮುಂದುವರೆಸಲು ರಾಜವಂಶಸ್ಥರಿಗೆ ಸೇರಿದ ರಾಜೇಂದ್ರ ವಿಲಾಸ ಅರಮನೆಗೆ (ಬೇಸಿಗೆ ಅರಮನೆ) ಸೇರಿದ ಜಾಗದ ಮೂಲಕವೇ ಹಾದು ಹೋಗಬೇಕಾಗಿದೆ. ಹಳೆಯ ಪೈಪ್‍ಲೈನ್ ಕೂಡ ಬೇಸಿಗೆ ಅರಮನೆಯ ಆವರಣದಲ್ಲೇ ಹಾದು ಹೋಗಿದೆ. ಹೊಸ ಪೈಪ್‍ಲೈನ್ ಕಾಮಗಾರಿಗೆ ಅನುಮತಿ ನೀಡಿ, ಬೆಟ್ಟದ ನಿವಾಸಿಗಳ ನೀರಿನ ಬವಣೆ ನೀಗಿಸಲು ಸಹಕರಿಸುವಂತೆಯೂ ರಾಜವಂಶಸ್ಥರಲ್ಲಿ ಮನವಿ ಮಾಡಲು ಬೆಟ್ಟದ ನಿವಾಸಿಗಳು ಉದ್ದೇಶಿಸಿದ್ದಾರೆ.

Translate »