ಚಾಮುಂಡಿಬೆಟ್ಟದಲ್ಲಿ ಕೊರೊನಾ ಹರಡುವ ಆತಂಕ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಕೊರೊನಾ ಹರಡುವ ಆತಂಕ

October 12, 2020

ಮೈಸೂರು,ಅ.11(ಎಂಟಿವೈ)- ಮೈಸೂರಲ್ಲಿ ದಿನ ದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾ ಗುತ್ತಿರುವ ಬೆನ್ನಲ್ಲೇ ಚಾಮುಂಡಿಬೆಟ್ಟಕ್ಕೆ ಶುಕ್ರವಾರದಂದು ನಾಡದೇವಿಯ ದರ್ಶನ ಪಡೆಯಲು ಅಪಾರ ಸಂಖ್ಯೆ ಯಲ್ಲಿ ಆಗಮಿಸುತ್ತಿರುವ ಭಕ್ತರು ಶ್ರದ್ಧಾ ಭಕ್ತಿ ನಡುವೆಯೇ ಕೊರೊನಾ ಸೋಂಕು ಹರಡಲು ಕಾರಣವಾಗಬಹು ದೆಂಬ ಆತಂಕ ಬೆಟ್ಟದ ನಿವಾಸಿಗಳಲ್ಲಿ ಮೂಡಿದ್ದು, ದಸರಾ ಮಾದರಿಯಲ್ಲಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕೊರೊನಾ ಸೋಂಕು ಹರಡುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಮಂದಿ, ಜಂಬೂಸವಾರಿ ವೀಕ್ಷ ಣೆಗೆ 300 ಜನರಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಯಾದರೂ, ಶುಕ್ರವಾರದ ದಿನ ಬೆಳಗ್ಗಿನಿಂದ ಸಂಜೆವರೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಟ್ಟಕ್ಕೆ ಆಗಮಿಸುತ್ತಿದ್ದು, ಸೋಂಕು ಹರಡುವ ಭೀತಿ ಸೃಷ್ಟಿಸುತ್ತಿದ್ದಾರೆ. ದಸರಾ ಮಹೋತ್ಸವದ ಉದ್ಘಾ ಟನಾ ಕಾರ್ಯಕ್ರಮದಲ್ಲಿ ಹೆಚ್ಚಿನ ಜನಸಂದಣಿ ಉಂಟಾಗ ದಂತೆ ಕಡಿವಾಣ ಹಾಕಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಇದರಿಂದಾಗಿ ಬೆಟ್ಟದಲ್ಲಿ ಅ.17ರಂದು ಬೆಳಗ್ಗೆ ನಡೆಯಲಿರುವ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 200 ಮಂದಿಗಷ್ಟೇ ಅವಕಾಶ ನೀಡಿದೆ. ಆದರೆ ಇತರೆ ದಿನಗಳಲ್ಲಿ ಬೆಟ್ಟಕ್ಕೆ ದಿನಕ್ಕೆ 2-3 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಆಗಮಿಸುತ್ತಿದ್ದು, ಕೋವಿಡ್ ಮಾರ್ಗಸೂಚಿ ಗಾಳಿಗೆ ತೂರಿ ಸೋಂಕು ಹರಡುವಿಕೆ ವೇದಿಕೆ ಸೃಷ್ಟಿಸುತ್ತಿದ್ದಾರೆಂಬ ಭಯ ಜನರಲ್ಲಿ ಕಾಡತೊಡಗಿದೆ.

ಶನಿವಾರ, ಭಾನುವಾರ ಬೆಟ್ಟ ಬಂದ್: ಕೊರೊನಾ ಸೋಂಕು ಹರಡುವ ಸರಪಳಿ ಕಡಿವಾಣಕ್ಕಾಗಿ ಶನಿವಾರ, ಭಾನುವಾರ, ಸರ್ಕಾರಿ ರಜೆ ಹಾಗೂ ಹಬ್ಬದ ದಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ರಜೆ ದಿನಗಳಂದು ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಬರುವ ನಿರೀಕ್ಷೆಯಿದ್ದ ಹಿನ್ನೆಲೆಯಲ್ಲಿ ಬೆಟ್ಟದ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಸೋಮವಾರದಿಂದ ಶುಕ್ರವಾರದವರೆಗೆ ಭಕ್ತರು ಬೆಟ್ಟಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ವಾರಾಂತ್ಯದಲ್ಲಿ ಬೆಟ್ಟಕ್ಕೆ ಬರಲು ಸಾಧ್ಯವಾಗದ ಕಾರಣ ಇದೀಗ ಶುಕ್ರವಾರವೇ ಭಕ್ತರು ಮುಗಿ ಬೀಳುತ್ತಿದ್ದಾರೆ. ಇದು ಬೆಟ್ಟದ ನಿವಾಸಿಗಳು ಮಾತ್ರವಲ್ಲದೆ ದೇವಾಲಯದ ಆಡಳಿತ ಮಂಡಳಿ ಹಾಗೂ ದೇವಾಲಯದ ಸಿಬ್ಬಂದಿಗಳನ್ನು ಆತಂಕಕ್ಕೀಡು ಮಾಡಿದೆ.

ಹೊರ ಜಿಲ್ಲೆಯಿಂದಲೇ ಹೆಚ್ಚು ಮಂದಿ: ಮಾರ್ಚ್ ತಿಂಗಳಿಂದ ದೇವಿ ದರ್ಶನಕ್ಕೆ ಆಗಮಿಸದೇ ಮನೆಯಲ್ಲಿಯೇ ಇದ್ದ ಭಕ್ತರು ಶುಕ್ರವಾರದ ದಿನದಂದು ಚಾಮುಂಡಿಬೆಟ್ಟಕ್ಕೆ ಬಂದು ದರ್ಶನ ಪಡೆಯಲು ಮುಗಿಬೀಳುತ್ತಿದ್ದಾರೆ. ಶಕ್ತಿ ದೇವಿಯ ಆರಾಧನೆಯ ದಿನವಾದ ಶುಕ್ರವಾರ ದರ್ಶನ ಪಡೆದರೆ ಒಳಿತಾಗಲಿದೆ ಎಂಬ ಭಾವನೆ ಭಕ್ತರಲ್ಲಿರು ವುದರಿಂದ ಬೆಟ್ಟಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಈ ವರ್ಷ ಅಧಿಕ ಮಾಸವಾಗಿರುವುದರಿಂದ ಹಾಗೂ ದಸರಾ ಸಮೀಪಿಸುತ್ತಿರುವುದರಿಂದ ಚಾಮುಂಡಿ ಬೆಟ್ಟದ ದೇವಾಲಯದಲ್ಲಿ ಜರುಗುವ ವಿಶೇಷ ಪೂಜಾ ಕೈಂಕರ್ಯದ ವೇಳೆ ದರ್ಶನ ಪಡೆದರೆ ಶುಭವಾಗಲಿದೆ ಎಂಬ ನಂಬಿಕೆ ಇಟ್ಟುಕೊಂಡು ಭಕ್ತರು ಕೊರೊನಾ ಆತಂಕದ ನಡುವೆ ಬೆಟ್ಟಕ್ಕೆ ಗುಂಪು ಗುಂಪಾಗಿ ಬರುತ್ತಿದ್ದಾರೆ.

ಭಕ್ತಿಯಲ್ಲಿ ಮುಳುಗಿದ ಕೋವಿಡ್ ಭಯ: ಮೈಸೂರಿಗೆ ಅಪ್ಪಳಿಸಿರುವ ಕೊರೊನಾ ಎರಡನೇ ಹಂತದ ಅಲೆ ಜಿಲ್ಲೆಯ ಜನರನ್ನು ಅಕ್ಷರಶಃ ತಲ್ಲಣಗೊಳಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಮುದಾಯದ ಹಂತಕ್ಕೆ ಸೋಂಕು ಹರಡಿರುವುದರಿಂದ ಸಮಸ್ಯೆ ಬಿಗಡಾಯಿಸುತ್ತಿದೆ. ಸೋಂಕು ತಡೆಗೆ ಕಟ್ಟುನಿಟ್ಟಿನ ಹಲವು ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ ಮಂಗಳವಾರ ಹಾಗೂ ಶುಕ್ರವಾರ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಅಧಿಕಾರಿಗಳನ್ನು ಕಂಗೆಡಿಸಿದೆ. ಭಕ್ತರು ಭಕ್ತಿಯ ಅಲೆಯಲ್ಲಿ ತೇಲುತ್ತಾ ಕೋವಿಡ್ ನಿಯಮವನ್ನು ಗಾಳಿಗೆ ತೂರುತ್ತಿರುವುದು ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಜಾಗೃತಿಗೆ ಮನ್ನಣೆ ಸಿಗುತ್ತಿಲ್ಲ: ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರಲ್ಲಿ ಕೊರೊನಾ ಹರಡುವಿಕೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಜಾಗೃತಿ ಮೂಡಿಸಲು ಧ್ವನಿವರ್ಧಕದಲ್ಲಿ ಸಂದೇಶ ಬಿತ್ತರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಯಾದರೂ ಭಕ್ತರು ಮಾತ್ರ ಯಾವ ಸಂದೇಶವನ್ನು ಪಾಲಿಸದೆ ಬೇಜವಾಬ್ದಾರಿ ಧೋರಣೆ ತಾಳುತ್ತಿದ್ದಾರೆ. ಬೆಟ್ಟದಲ್ಲಿರುವ ಬಸ್ ನಿಲ್ದಾಣ ಹಾಗೂ ವಾಹನ ನಿಲುಗಡೆ ಸ್ಥಳ, ದೇವಾಲಯದ ಸುತ್ತಮುತ್ತ ಭಕ್ತರಲ್ಲಿ ಕೊರೊನಾ ಸಂಬಂಧ ಜಾಗೃತಿ ಮೂಡಿಸಲು ಧ್ವನಿವರ್ಧಕದ ಮೂಲಕ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ, ದೈಹಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿ ಹೇಳಲಾಗುತ್ತಿದ್ದರೂ ಭಕ್ತರು ಮಾತ್ರ ದೈವಿ ಭಕ್ತಿಯಿಂದ ದೈಹಿಕ ಅಂತರಕ್ಕೆ ತಿಲಾಂಜಲಿ ನೀಡಿ ಗುಂಪುಗೂಡುತ್ತಿದ್ದಾರೆ. ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ ನೂರಾರು ಮಂದಿ ಸೇರುತ್ತಿರುವುದರಿಂದ ಸೋಂಕು ತೀಕ್ಷ್ಣ ಸ್ವರೂಪದಲ್ಲಿ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಬರುತ್ತಿರುವ ಭಕ್ತರಿಂದಲೇ ಆತಂಕ ಮನೆ ಮಾಡುತ್ತಿದೆ. ದೇವಾಲಯಕ್ಕೆ ಪ್ರವೇಶ ಪಡೆಯಲು ಸರದಿ ಸಾಲಿನಲ್ಲಿ ಹೋಗುವ ವೇಳೆಯೂ ದೈಹಿಕ ಅಂತರ ಕಾಪಾಡದೆ ಇರುವುದು ದೇವಾಲಯದ ಆಡಳಿತ ಮಂಡಳಿಗೆ ಸವಾಲಾಗಿ ಪರಿಣಮಿಸಿದೆ. ದೇವಿಯ ದರ್ಶನ ಪಡೆಯಲು ಬರುವ ಭಕ್ತರ ವಿಚಾರ ಭಾವನಾತ್ಮಕ ಸಂಗತಿಯಾಗಿರುವ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ ಸೂಕ್ಷ್ಮವಾಗಿ ಭಕ್ತರಿಗೆ ತಿಳಿ ಹೇಳುವ ಪ್ರಯತ್ನ ಮಾಡುತ್ತಿದೆ. ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವುದು ಸವಾಲಿನ ಸಂಗತಿಯಾಗಿದೆ. ಇದರಿಂದ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗದೇ, ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ಭಕ್ತರು ಕಿವಿಗೊಡದೆ ಇರುವುದು ಕೊರೊನಾ ಆತಂಕ ಇಮ್ಮಡಿಗೊಳ್ಳುವಂತೆ ಮಾಡಿದೆ.

 

 

Translate »