ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಜೀವಂತ ಸಮಾಧಿ ಮಾಡಿದ ಇಬ್ಬರ ಬಂಧನ
ಮೈಸೂರು

ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಜೀವಂತ ಸಮಾಧಿ ಮಾಡಿದ ಇಬ್ಬರ ಬಂಧನ

December 1, 2021

ಹನಗೋಡು, ನ. 30(ಮಹೇಶ್)- ವ್ಯಕ್ತಿಯೊಬ್ಬನ ಮೇಲೆ ಆತನ ಇಬ್ಬರು ಸ್ನೇಹಿತರು ಹಲ್ಲೆ ನಡೆಸಿ, ಜೀವಂತ ಸಮಾಧಿ ಮಾಡಿದ ಘಟನೆ ಹುಣಸೂರು ತಾಲೂಕು ಹನಗೋಡಿನ ಬಿಬಿಸಿ ಕಾಲೋನಿಯಿಂದ ವರದಿಯಾಗಿದೆ.

ಅಲ್ಲಿನ ನಿವಾಸಿ ಕೃಷ್ಣ(33) ಎಂಬಾತನೇ ಸ್ನೇಹಿತರಿಂದಲೇ ಜೀವಂತ ಸಮಾಧಿ ಯಾದವನಾಗಿದ್ದು, ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸರು ಇಬ್ಬರನ್ನು ಬಂಧಿಸಿ, ಹೂತಿದ್ದ ಶವವನ್ನು ಹೊರ ತೆಗೆದಿದ್ದಾರೆ.

ವಿವರ: ಗ್ರಾಮದ ಕೃಷ್ಣನಿಗೆ ಕಳೆದ ಮೂರು ದಿನಗಳ ಹಿಂದೆ ಕರೆ ಮಾಡಿದ ಆತನ ಸ್ನೇಹಿತರಾದ ಗೋಪಾಲ ಮತ್ತು ಅಶೋಕ ಹೊಸೂರಿನ ಮಾರಮ್ಮನ ದೇವಸ್ಥಾನದ ಬಳಿ ಬಾ ಎಂದು ಕರೆದಿದ್ದಾರೆ. ಆತ ಅಲ್ಲಿಗೆ ಹೋದಾಗ ಮೂವರೂ ಮದ್ಯಪಾನ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು, ಅಶೋಕ ಮತ್ತು ಗೋಪಾಲ ಸೇರಿ ಕೃಷ್ಣನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಪಕ್ಕದಲ್ಲೇ ನಿಂತಿದ್ದ ಜೆಸಿಬಿಯಿಂದ ಗುಂಡಿ ತೋಡಿ, ಜೀವಂತವಾಗಿಯೇ ಆತನನ್ನು ಅದರಲ್ಲಿ ಹೂತುಹಾಕಿ ಜಾಗ ಖಾಲಿ ಮಾಡಿದ್ದಾರೆ.

ಮರುದಿನ ಬೆಳಗ್ಗೆಯಾದರೂ ಗಂಡ ಮನೆಗೆ ಬಾರದೇ ಇದ್ದುದರಿಂದ ಕೃಷ್ಣನ ಹೆಂಡತಿ ಮಲ್ಲಿಗೆ ಮತ್ತು ಗ್ರಾಪಂ ಸದಸ್ಯರಾಗಿರುವ ಚಿಕ್ಕಪ್ಪ ರಾಮಕೃಷ್ಣ ಅವರುಗಳು ಅಶೋಕ ಮತ್ತು ಗೋಪಾಲ ನನ್ನು ವಿಚಾರಿಸಿದಾಗ ರಾತ್ರಿಯೇ ಆತ ಮನೆಗೆ ಹೋಗುತ್ತೇನೆಂದು ಹೋಗಿದ್ದಾನೆ ಎಂದು ಉತ್ತರಿಸಿದ್ದಾರೆ. ಇವರಿಬ್ಬರ ಮೇಲೆ ಅನುಮಾನಗೊಂಡು ಗ್ರಾಮದಲ್ಲಿ ಪಂಚಾಯ್ತಿ ಸೇರಿ ವಿಚಾರಣೆ ಮಾಡಿ ದರೂ ಕೂಡ ನಮಗೇನೂ ಗೊತ್ತಿಲ್ಲ ಎಂದೇ ಹೇಳಿದ ಇವರು, ನಂತರ ಗ್ರಾಮದಿಂದ ಪರಾರಿಯಾಗಿದ್ದಾರೆ.

ಇದರಿಂದ ಅನುಮಾನಗೊಂಡು ಹುಣಸೂರು ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಲಾಗಿ, ಇನ್ಸ್‍ಪೆಕ್ಟರ್ ಚಿಕ್ಕಸ್ವಾಮಿ ನೇತೃತ್ವದ ತಂಡ ಮಂಡ್ಯ ಬಳಿ ತಲೆಮರೆಸಿಕೊಂಡಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಗೊಳಪಡಿಸಿ ದಾಗ ಹತ್ಯೆ ವಿಚಾರ ಬೆಳಕಿಗೆ ಬಂದಿದೆ. ಆರೋಪಿಗಳು ತೋರಿಸಿದ ಸ್ಥಳದಲ್ಲಿ ಗುಂಡಿ ಅಗೆದು ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಕೊಲೆಗೆ ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ ಎಂದು ಇನ್ಸ್‍ಪೆಕ್ಟರ್ ಚಿಕ್ಕಸ್ವಾಮಿ ತಿಳಿಸಿದ್ದಾರೆ.

Translate »