ಬಸವಣ್ಣನವರಂತೆ ಕನಕದಾಸರಿಂದ ಜಾತಿ ವ್ಯವಸ್ಥೆ ವಿರುದ್ಧ ಜನ ಜಾಗೃತಿ
ಮೈಸೂರು

ಬಸವಣ್ಣನವರಂತೆ ಕನಕದಾಸರಿಂದ ಜಾತಿ ವ್ಯವಸ್ಥೆ ವಿರುದ್ಧ ಜನ ಜಾಗೃತಿ

December 1, 2021

ಮೈಸೂರು,ನ.30- ಹನ್ನೆರಡನೇ ಶತಮಾನದ ಬಸವಣ್ಣನವರಂತೆ ಕನಕದಾಸರು ಜಾತಿ ವ್ಯವಸ್ಥೆಯ ವಿರುದ್ಧ ಜನ ಜಾಗೃತಿ ಮೂಡಿಸುವ ಮೂಲಕ ಸಮಾಜ ಸುಧಾರಣೆಗೆ ಅವಿರತ ಶ್ರಮಿಸಿದ್ದಾರೆ ಎಂದು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತ ಡಾ.ಬಿ.ಟಿ.ಬಾಣೇಗೌಡ ಹೇಳಿದರು.
ಕನ್ನಡ ಜಾನಪದ ಪರಿಷತ್ (ಕಜಾಪ) ವತಿಯಿಂದ ಮೈಸೂರಿನ ಲಕ್ಷ್ಮೀಪುರಂ ಜೆಎಸ್‍ಎಸ್ ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಶ್ರೀ ಭಕ್ತ ಕನಕದಾಸರ 534ನೇ ಜಯಂತ್ಯುತ್ಸವದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಕುಲವೆಂದು ಹೊಡೆದಾಡುವವರಿಗೆ ಕುಲದ ಮೂಲ ಪ್ರಶ್ನಿಸುವ ಮೂಲಕ ಸಮಾನತೆ ಸಾರ ತಿಳಿಸಿದ ಕನಕದಾಸರನ್ನು ಎಲ್ಲರೂ ಸ್ಮರಿಸಿಕೊಂಡು, ಗೌರವಿಸಬೇಕು ಎಂದು ತಿಳಿಸಿದರು.

ಕನ್ನಡ ನಾಡು-ನುಡಿ-ಸಂಸ್ಕೃತಿಯನ್ನು ಉಳಿಸಿ-ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಜಾನಪದ ಪ್ರಜ್ಞೆ ಮೂಡಿಸಬೇಕು. ಕಷ್ಟವನ್ನೇ ದೊಡ್ಡದು ಮಾಡಿ, ಅದರ ಬಗ್ಗೆಯೇ ಚಿಂತಿಸುತ್ತಾ ಕುಳಿತುಕೊಳ್ಳಬಾರದು. ಯಾವುದೇ ಪರಿಸ್ಥಿತಿಯನ್ನು ಲೆಕ್ಕಿಸದೆ ವಿದ್ಯಾಭ್ಯಾಸ ಮಾಡಿದರೆ ಮುಂದಿನ ಸಾಧನೆ ಸುಲಭವಾಗುತ್ತದೆ. ಹಾಗೆಯೇ ವೈಯಕ್ತಿಕ ಬೆಳವಣಿಗೆಯ ಜೊತೆಗೆ ಸಾಧ್ಯವಾದ ರೀತಿ ಸಾಮಾಜಿಕ ಸೇವೆ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಾನಪದ ಗಾಯಕರಾದ ಅಮ್ಮ ರಾಮಚಂದ್ರ ಹಾಗೂ ರಾಜೇಶ್ವರಿ ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದಿರುವ ಶಾಲೆಯ ವಿದ್ಯಾರ್ಥಿ ಮಹದೇವಸ್ವಾಮಿ ಅವರನ್ನು ಅಭಿನಂದಿಸಲಾಯಿತು. ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ರಾಮು, ಜೆಎಸ್‍ಎಸ್ ಮಹಾವಿದ್ಯಾಪೀಠ ಶಾಲಾ ಶಿಕ್ಷಣ ವಿಭಾಗದ ವಿಷಯ ಪರಿವೀಕ್ಷಕ ಚನ್ನಬಸಪ್ಪ, ಲಕ್ಷ್ಮೀಪುರಂ ಜೆಎಸ್‍ಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಸಿ.ದೇವರಾಜ್, ಕಜಾಪ ಚಾಮರಾಜ ಕ್ಷೇತ್ರದ ಅಧ್ಯಕ್ಷೆ ರಾಣಿಪ್ರಭ ಮತ್ತಿತರರು ಉಪಸ್ಥಿತರಿದ್ದರು. ನಂತರ ಗಾಯತ್ರಿ ಪಾಂಡೂಜಿ, ಕೃಷ್ಣೇಗೌಡ, ಲಕ್ಷ್ಮೀಕಾಂತ್, ಮರಿಸ್ವಾಮಿ, ಹಂಸ, ರಾಜೇಶ್ವರಿ, ಲಾಸ್ಯ ಮತ್ತಿತರರು ಶ್ರೀ ಕನಕದಾಸರ ಕೀರ್ತನೆ ಹಾಗೂ ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು.

Translate »