ಆಟೋ ಚಕ್ರ ಉರುಳುತ್ತಿಲ್ಲ, ಬದುಕಿನ ಬಂಡಿ ಸಾಗುತ್ತಿಲ್ಲ ಲಾಕ್‍ಡೌನ್‍ಗೆ ಕಂಗಾಲಾದ ಆಟೋ ಚಾಲಕರು
ಮೈಸೂರು

ಆಟೋ ಚಕ್ರ ಉರುಳುತ್ತಿಲ್ಲ, ಬದುಕಿನ ಬಂಡಿ ಸಾಗುತ್ತಿಲ್ಲ ಲಾಕ್‍ಡೌನ್‍ಗೆ ಕಂಗಾಲಾದ ಆಟೋ ಚಾಲಕರು

April 10, 2020

ಮೈಸೂರು, ಏ.9(ಪಿಎಂ)- ಕೊರೊನಾ ನಿರ್ನಾಮಕ್ಕೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇದರ ದುಷ್ಪರಿಣಾಮಕ್ಕೆ ತುತ್ತಾಗಿ ಕಂಗಾಲಾದವರ ಪೈಕಿ ಆಟೋ ಚಾಲಕರ ಸಮುದಾಯವೂ ಒಂದು. ಆಟೋ ಚಕ್ರ ಉರುಳಿದರಷ್ಟೇ ನಮ್ಮ ಬದುಕಿನ ಚಕ್ರ ಮುನ್ನಡೆಯಲಿದೆ ಎನ್ನುವ ಈ ವರ್ಗದ ವ್ಯಥೆ ಹೇಳತೀರದಾಗಿದೆ.

ಇಡೀ ದೇಶವೇ ಲಾಕ್‍ಡೌನ್ ಆದ ಹಿನ್ನೆಲೆ ಯಲ್ಲಿ ಇಡೀ ದೇಶದಲ್ಲಿನ ಆಟೋ ಚಾಲಕರು ಮನೆಯಲ್ಲಿ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಈ ಲಾಕ್‍ಡೌನ್ ಸದ್ಯಕ್ಕೆ ಮುಗಿಯು ವಂತಿಲ್ಲ. ಭವಿಷ್ಯದ ಕಥೆಯೇನು? ಎಂದು ಆಟೊ ಚಾಲಕರು ಚಿಂತೆಗೀಡಾಗಿದ್ದಾರೆ.

ಬದಲಾದ ಸನ್ನಿವೇಶದಲ್ಲಿ ಓಲಾ, ಊಬರ್ ಎಂಬ ಆನ್‍ಲೈನ್ ಸೇವೆಗಳು ಆಟೋ ಸಾರಿಗೆಗೆ ಕಾಲಿಟ್ಟು ಆಟೋ ಚಾಲಕ ಸಮುದಾಯದ ನಡುವೆಯೇ ಪೈಪೋಟಿ ತಂದಿಟ್ಟಿತ್ತು. ಇದೀಗ ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಯಾವುದೇ ಬಗೆಯ ಆಟೋರಿಕ್ಷಾ ರಸ್ತೆಗಿಳಿಯದಂತಾಗಿದೆ. ಒಟ್ಟಾರೆ ಇಡೀ ಆಟೋ ಚಾಲಕ ಸಮುದಾಯ ಸಂಕಷ್ಟ ಎದುರಿಸುವಂತಾಗಿದೆ.

ಈ ಸಂಬಂಧ ಮೈಸೂರು ನಗರದ ಹಲವು ಆಟೋ ಚಾಲಕರು `ಮೈಸೂರು ಮಿತ್ರ’ನೊಂದಿಗೆ ತಮ್ಮ ಅಳಲು ತೋಡಿ ಕೊಂಡಿದ್ದು, ಇಂತಹ ಕಠಿಣ ಸನ್ನಿವೇಶ ನಮ್ಮ ಬದುಕನ್ನೇ ದುಸ್ತರ ಮಾಡಿದೆ. ಭವಿಷ್ಯದ ದಾರಿಯೇ ಕಾಣದಾಗಿದೆ. ಸಂಸಾರದ ಬಂಡಿ ಸಾಗಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ತಮ್ಮ ನೋವು ಹಂಚಿಕೊಂಡಿದ್ದಾರೆ.

`15 ವರ್ಷಗಳಿಂದ ಆಟೋ ಚಾಲಕ ನಾಗಿ ದುಡಿಯುತ್ತಿದ್ದೇನೆ. ಲಾಕ್‍ಡೌನ್ ಆದ ಬಳಿಕ ದುಡಿಮೆ ಇಲ್ಲವಾಗಿ ಜೀವನ ಸಾಗಿಸುವುದು ಕಷ್ಟವಾಗಿದೆ. ಅಂದು ಸಂಪಾದಿಸಿ ಆ ದಿನದ ಜೀವನದ ಅವಶ್ಯ ಕತೆ ಪೂರೈಸಿಕೊಳ್ಳುವ ನಮ್ಮಂತವರಿಗೆ ಈ ರೀತಿಯಾದರೆ ಭವಿಷ್ಯದ ಭರವ ಸೆಯೇ ಕಳೆದು ಹೋಗುತ್ತದೆ. ನನಗೆ 39 ವರ್ಷ ವಯಸ್ಸು. ಮದುವೆಯಾಗಿದೆ. ಹೆಂಡತಿ ಮತ್ತು 5ನೇ ತರಗತಿಯ ಓದುವ ಮಗ, ವಯಸ್ಸಾದ ತಾಯಿ ಮನೆಯಲ್ಲಿದ್ದಾರೆ. ಇವರನ್ನೆಲ್ಲಾ ನೋಡಿಕೊಳ್ಳುವುದು ಹೇಗೆಂಬ ಆತಂಕದಲ್ಲಿ ಕಾಲ ದೂಡುತ್ತಿ ದ್ದೇನೆ’ ಎಂದು ಗೋಕುಲಂ ನಿವಾಸಿ ಕೆ. ನಾರಾಯಣ್ ನೊಂದು ನುಡಿದರು.

ದೊಡ್ಡಮಾರನಗೌಡಹಳ್ಳಿ ನಿವಾಸಿ, ಗೂಡ್ಸ್ ಆಟೋ ಚಾಲಕ ಸ್ವಾಮಿ ಮಾತ ನಾಡಿ, ಮನೆಯಲ್ಲಿ ಏನೂ ಇಲ್ಲದಂತಹ ಸಂಕಷ್ಟ ಎದುರಾಗಿದೆ. ಏ.14ರ ಬಳಿಕ ವಾದರೂ ದುಡಿಮೆಗೆ ಅವಕಾಶ ಸಿಕ್ಕುತ್ತ ದೆಯೇ? ಇದೇ ಪರಿಸ್ಥಿತಿ ಮುಂದುವರೆ ದರೆ ಜೀವನ ಹೇಗೆ? ಎಂಬ ಚಿಂತೆ ಎದು ರಾಗಿದೆ ಎಂದರು. ಮತ್ತೊಬ್ಬ ಆಟೋ ಚಾಲಕ ಶಿವಪ್ರಸಾದ್ ರಾಜು ಮಾತನಾಡಿ, ಆಟೋ ಚಾಲಕರ ಪರಿಸ್ಥಿತಿ ಏನೆಂದು ಯಾರೂ ಕೇಳುತ್ತಿಲ್ಲ. ಅನ್ನಭಾಗ್ಯದ ಅಕ್ಕಿ ಕೊಡುತ್ತಿರುವುದರಿಂದ ಊಟಕ್ಕೊಂದು ದಾರಿಯಾಗಿದೆ. ಉಳಿದಂತೆ ಮನೆ ಬಾಡಿಗೆ, ವಿದ್ಯುತ್ ಶುಲ್ಕ ಪಾವತಿ ಸೇರಿದಂತೆ ಮನೆಯ ವೆಚ್ಚದ ನಿರ್ವಹಣೆ ಹೇಗೆಂದು ಕಾಣದಾಗಿದೆ. ಸದ್ಯ ಮನೆ ಮಾಲೀಕರು ಬಾಡಿಗೆ ಕೊಡಿ ಎಂದು ಒತ್ತಡ ಹೇರು ತ್ತಿಲ್ಲ. ಆದರೆ ಮುಂದೆಯಾದರೂ ಒಟ್ಟು ಸೇರಿಸಿ ಕೊಡಲೇಬೇಕಲ್ಲವೇ? ಒಟ್ಟಿಗೆ ಹಣ ಹೊಂದಿಸಿ ಕೊಡುವುದು ನಮ್ಮಂತ ವರಿಗೆ ಬಹಳ ಕಷ್ಟ ಎಂದು ಅಸಹಾಯ ಕತೆ ವ್ಯಕ್ತಪಡಿಸಿದರು.

ಷರತ್ತು ವಿಧಿಸಿ ತುರ್ತು ಸೇವೆ ನೀಡಲು ಅವಕಾಶ ಕೊಡಲಿ
ನಮ್ಮ ಆಟೋ ನಿಲ್ದಾಣದಲ್ಲಿ 8 ಚಾಲಕರಿದ್ದು, ತೀವ್ರ ಸಂಕಷ್ಟದಲ್ಲಿ ದ್ದಾರೆ. ತುರ್ತು ಹಾಗೂ ಅಗತ್ಯ ಸೇವೆಗಳಿಗೆ ಬಾಡಿಗೆಗೆ ತೆರಳಲು ನಮಗೆ ಅವಕಾಶ ನೀಡಿದರೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಿಕೊಂಡು ಪ್ರಯಾ ಣಿಕರಿಗೆ ಸೇವೆ ಒದಗಿಸಲು ಸಿದ್ಧರಿ ದ್ದೇವೆ. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ.
-ಕೃಷ್ಣ, ಮೈಸೂರು ತ್ಯಾಗರಾಜ ರಸ್ತೆಯ ಆಟೋ ನಿಲ್ದಾಣದ ಚಾಲಕ

Translate »