ಕೋವಿಡ್-19: ಕೆ.ಆರ್.ಆಸ್ಪತ್ರೆ ಓಪಿಡಿ ಸ್ಥಗಿತ
ಮೈಸೂರು

ಕೋವಿಡ್-19: ಕೆ.ಆರ್.ಆಸ್ಪತ್ರೆ ಓಪಿಡಿ ಸ್ಥಗಿತ

April 10, 2020

1050 ಹಾಸಿಗೆ ಸಾಮಥ್ರ್ಯದ ದೊಡ್ಡಾಸ್ಪತ್ರೆಯಲ್ಲೀಗ ಕೇವಲ 50 ಒಳ ರೋಗಿಗಳಿದ್ದಾರೆ

  • ಸದಾ ರೋಗಿಗಳಿಂದ ಕಿಕ್ಕಿರಿಯುತ್ತಿದ್ದ ಆಸ್ಪತ್ರೆ ಈಗ ಮರುಭೂಮಿಯಂತಿದೆ
  • ಎಲ್ಲಾ ಓಟಿ, ಸಿಓಟಿ, ಎಮರ್ಜೆನ್ಸಿ ವಾರ್ಡ್, ಅಪಘಾತ ತುರ್ತು ಚಿಕಿತ್ಸಾ ವಿಭಾಗ ಸಂಪೂರ್ಣ ಬಂದ್
  • ಮಾ.25ರ ನಂತರ ಒಂದೇ ಒಂದು ಎಂಎಲ್‍ಸಿ ಕೇಸ್ ಬಂದಿಲ್ಲ, ಒಂದೂ ಮರಣೋತ್ತರ ಪರೀಕ್ಷೆ ನಡೆದಿಲ್ಲ

ಮೈಸೂರು, ಏ.9-ಹಳೇ ಮೈಸೂರು ಭಾಗದಲ್ಲೇ ಅತೀ ದೊಡ್ಡ ಆಸ್ಪತ್ರೆ ಎಂದು ಕರೆಯಲ್ಪಡುವ ಮೈಸೂರಿನ ಕೆಆರ್ (ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್) ಆಸ್ಪತ್ರೆಯು ಶತಮಾನ ಕಾಲದ ಅತೀ ಪ್ರಮುಖ ಆರೋಗ್ಯ ಕೇಂದ್ರ.

ರಾಜಮಹಾರಾಜರು ಬಡವರಿಗೆ ಉಚಿತ ವಾಗಿ ಚಿಕಿತ್ಸೆ ನೀಡಿ, ಅವರ ಆರೋಗ್ಯ ರಕ್ಷಣೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಯಿಂದ ನಿರ್ಮಿಸಿದ 1050 ಹಾಸಿಗೆಯುಳ್ಳ ಆಸ್ಪತ್ರೆ ಈಗ ಸೇವೆ ಸ್ಥಗಿತಗೊಳಿಸಿರುವು ದರಿಂದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಲ್ಲಿ ರೋಗಿಗಳಿಲ್ಲದೆ ಬಿಕೋ ಎನ್ನುವ ಪರಿಸ್ಥಿತಿ ಒದಗಿದೆ.

ಕೋವಿಡ್-19 ಸೋಂಕು: ಇಡೀ ಜಗತ್ತನ್ನೇ ತತ್ತರಿಸುವಂತೆ ಮಾಡಿರುವ ಕೋವಿಡ್-19 (ಕೊರೊನಾ ವೈರಸ್) ಮಾರಣಾಂತಿಕ ಸೋಂಕಿನಿಂದಾಗಿ ದೇಶದಾದ್ಯಂತ ಲಾಕ್ ಡೌನ್ ನಿರ್ಬಂಧ ಪ್ರಕಟಿಸಿರುವ ಕಾರಣ ಹಾಗೂ ಮೈಸೂರಲ್ಲಿ ಮೊದಲು ಕಂಡು ಬಂದಿದ್ದ ಇಬ್ಬರು ಸೋಂಕಿತರನ್ನು ಕ್ವಾರಂಟೈನ್ ನಲ್ಲಿರಿಸಿದ್ದರಿಂದ ಸಾರ್ವಜನಿಕರು ಹಾಗೂ ರೋಗಿಗಳಿಗೆ ಕೊರೊನಾ ಸೋಂಕು ಹರಡ ದಂತೆ ತಡೆಯಲು ಕೆಆರ್ ಆಸ್ಪತ್ರೆಯ ಹೊರ ರೋಗಿ ವಿಭಾಗವನ್ನು ಸ್ಥಗಿತಗೊಳಿಸಲಾಗಿತ್ತು.

ಶಸ್ತ್ರ ಚಿಕಿತ್ಸೆಗಳೂ ಬಂದ್: ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಹೊರ ರೋಗಿ ಗಳ ತಪಾಸಣಾ ವಿಭಾಗ ಸ್ಥಗಿತಗೊಳಿಸಿ ರುವ ಕಾರಣ ಅತ್ಯಂತ ತುರ್ತು ಚಿಕಿತ್ಸೆ ಹೊರತು ಪಡಿಸಿ, ಸಣ್ಣ-ಪುಟ್ಟ ಕಾಯಿಲೆಗಳಿಗಾಗಿ ಕೆಆರ್ ಆಸ್ಪತ್ರೆಗೆ ಬರಬೇಡಿ ಎಂದು ವೈದ್ಯಾಧಿಕಾರಿ ಗಳೇ ಮನವಿ ಮಾಡಿ, ಪ್ರವೇಶ ದ್ವಾರದಲ್ಲಿ ಸೂಚನಾ ಫಲಕಗಳನ್ನೂ ಹಾಕಿದ್ದಾರೆ.

ಕೇವಲ ಹೊರ ರೋಗಿ ವಿಭಾಗವಲ್ಲದೆ, ಎಲ್ಲಾ ಆಪರೇಷನ್ ಥಿಯೇಟರ್ (ಓಟಿ) ಗಳನ್ನೂ ಷಟ್‍ಡೌನ್ ಮಾಡಲಾಗಿದೆ. ಕೋವಿಡ್ ಪಾಸಿಟಿವ್ ವ್ಯಕ್ತಿಗಳನ್ನು ಚಿಕಿತ್ಸೆ ಮಾಡುತ್ತಿದ್ದ ರಿಂದ ಸೋಂಕು ಹರಡಬಹುದೆಂಬ ಕಾರಣಕ್ಕೆ ಮುಂಜಾಗ್ರತೆಗಾಗಿ ಕೆಆರ್ ಆಸ್ಪತ್ರೆಯ ಎಲ್ಲಾ ಮೇಜರ್ ಓಟಿ, ಮೈನರ್ ಓಟಿ, ಸಿಓಟಿ, ಅಪ ಘಾತ ತುರ್ತು ಚಿಕಿತ್ಸಾ ವಿಭಾಗ, ತುರ್ತು ಚಿಕಿತ್ಸಾ ವಾರ್ಡ್‍ಗಳನ್ನು ಬಂದ್ ಮಾಡಲಾಗಿದೆ.

ಕೇವಲ 50 ಒಳ ರೋಗಿಗಳು: 1050 ಹಾಸಿಗೆ ಸಾಮಥ್ರ್ಯದ ಅತೀ ದೊಡ್ಡ ಆಸ್ಪತ್ರೆಯಲ್ಲಿ ಪ್ರಸ್ತುತ ಕೇವಲ 50 ಮಂದಿ ಒಳ ರೋಗಿ ಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರೂ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾ ಗುವುದಕ್ಕಿಂತ ಮುಂಚೆ ದಾಖಲಾಗಿದ್ದವರು. ತದನಂತರ ಯಾವೊಬ್ಬ ರೋಗಿಯನ್ನೂ ಕೆಆರ್ ಆಸ್ಪತ್ರೆಗೆ ದಾಖಲು ಮಾಡಿಕೊಂಡಿಲ್ಲ.

ಕೋವಿಡ್ ಆಸ್ಪತ್ರೆಗೆ ನಿಯೋಜನೆ: ಕೆಆರ್ ಆಸ್ಪತ್ರೆಯ ವೈದ್ಯರು, ಪಿಜಿ ಡಾಕ್ಟರ್ ಗಳು, ದಾದಿಯರು, ಲ್ಯಾಬ್ ಟೆಕ್ನೀಷಿಯನ್ ಗಳು, ವೈದ್ಯೇತರ ಸಿಬ್ಬಂದಿಯನ್ನು ಕೆಆರ್‍ಎಸ್ ರಸ್ತೆಯ ಕೋವಿಡ್ ಆಸ್ಪತ್ರೆಗೆ ನಿಯೋಜನೆ ಮಾಡಿರುವುದರಿಂದ ದೊಡ್ಡಾಸ್ಪತ್ರೆಯ ಆರೋಗ್ಯ ಸೇವೆ ಬಹುತೇಕ ಸ್ಥಗಿತಗೊಂಡಿದೆ.

ಮರಣೋತ್ತರ ಪರೀಕ್ಷೆ ಇಲ್ಲ: ಲಾಕ್‍ಡೌನ್ ಆದ ನಂತರ ಜನ ಹಾಗೂ ವಾಹನ ಸಂಚಾರ ಸಂಪೂರ್ಣ ಬಂದ್ ಆದ ಪರಿಣಾಮ ರಸ್ತೆ ಅಪಘಾತಗಳು, ಆತ್ಮಹತ್ಯೆಗೆ ಯತ್ನ ಅಥವಾ ಆತ್ಮಹತ್ಯೆ ಇನ್ನಿತರ ಅಪರಾಧ ಪ್ರಕರಣ ಗಳು ಸಂಭವಿಸದ ಕಾರಣ ಎಂಎಲ್‍ಸಿ (ವೈದ್ಯ ಕಾನೂನು ಪ್ರಕರಣ) ಕೇಸ್‍ಗಳೇ ಕೆಆರ್ ಆಸ್ಪತ್ರೆಗೆ ಬರಲಿಲ್ಲ. ಸಾವುಗಳೂ ಸಂಭವಿಸ ದಿರುವುದರಿಂದ ಮೈಸೂರು ಮೆಡಿಕಲ್ ಕಾಲೇಜು ಆವರಣದಲ್ಲಿರುವ ಶವಾಗಾರ ದಲ್ಲೂ ಮರಣೋತ್ತರ ಪರೀಕ್ಷೆ ನಡೆಯುತ್ತಿಲ್ಲ.

ಸದಾ ರೋಗಿಗಳು ಅವರ ಅಟೆಂಡರ್ ಗಳು, ವೈದ್ಯರು, ನರ್ಸ್‍ಗಳು, ವಾರ್ಡ್ ಬಾಯ್‍ಗಳು ಸ್ವಚ್ಛತಾ ಸಿಬ್ಬಂದಿ ಹಾಗೂ ಸೆಕ್ಯೂರಿಟಿ ಗಾರ್ಡ್‍ಗಳಿಂದ ಕಾಲಿಡಲೂ ಜಾಗವಿಲ್ಲದಂತಿದ್ದ ಕೆಆರ್ ಆಸ್ಪತ್ರೆ ಈಗ ಕೋವಿಡ್-19 ಸೋಂಕಿನಿಂದಾಗಿ ಜನರಿ ಲ್ಲದೇ ಬಿಕೋ ಎನ್ನುತ್ತಿದೆ.

ದಾನಿಗಳಿಂದ ಊಟ: ಲಾಕ್‍ಡೌನ್‍ನಿಂದ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಕೆಲಸ ಮಾಡುತ್ತಿರುವ ಅತ್ಯಲ್ಪ ಸಿಬ್ಬಂದಿಗೆ ಲಯನ್ಸ್ ಸಂಸ್ಥೆ, ಗ್ರೀನ್ ಡಾಟ್ ಸಂಸ್ಥೆಯ ಪಿ.ಮಹದೇವು, ಟ್ರಾವೆಲ್ ಸಂಸ್ಥೆಯ ಮಹ ದೇವು ಸೇರಿದಂತೆ ಇನ್ನಿತರ ದಾನಿಗಳು ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಊಟ-ತಿಂಡಿಗಳನ್ನು ವಿತರಿಸುತ್ತಿರುವುದರಿಂದ ಅವರು ತಮ್ಮ ಹಸಿವು ನೀಗಿಸಿಕೊಳ್ಳುತ್ತಿದ್ದಾರೆ.

ಎಸ್.ಟಿ. ರವಿಕುಮಾರ್

Translate »