ಸಮುದಾಯದತ್ತ ಕೊರೊನಾ ಸೋಂಕು: ಬಲವಾದ ಶಂಕೆ ಮೂಡಿಸಿದೆ ಸೋಂಕಿತರ ಟ್ರಾವೆಲ್ ಹಿಸ್ಟರಿ
ಮೈಸೂರು

ಸಮುದಾಯದತ್ತ ಕೊರೊನಾ ಸೋಂಕು: ಬಲವಾದ ಶಂಕೆ ಮೂಡಿಸಿದೆ ಸೋಂಕಿತರ ಟ್ರಾವೆಲ್ ಹಿಸ್ಟರಿ

June 24, 2020

ಮೈಸೂರು, ಜೂ. 23 (ಆರ್‍ಕೆ)- ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಮಹಾಮಾರಿ ಸೋಂಕು ಸಾಂಸ್ಕೃತಿಕ ನಗರಿ ಮೈಸೂ ರಿಗರನ್ನು ಭಯಭೀತ ರನ್ನಾಗಿ ಮಾಡಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ನೋಡಿದರೆ, ಕೊರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿದೆಯೇ ಎಂಬ ಶಂಕೆ ಮೂಡುತ್ತಿರುವುದು ಮೈಸೂರು ಜನತೆ ಬೆಚ್ಚಿ ಬೀಳಲು ಕಾರಣವಾಗಿದೆ. ಕೋವಿಡ್-19 ಲಾಕ್‍ಡೌನ್ ನಿರ್ಬಂಧ ತೆರವು ಗೊಂಡು ಎಲ್ಲಾ ವಾಣಿಜ್ಯ ವಹಿವಾಟು, ರಸ್ತೆ, ರೈಲು ಮತ್ತು ವಾಯು ಮಾರ್ಗ ಮುಕ್ತಗೊಂಡಿರುವ ಕಾರಣ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆತಂಕ ಮನೆ ಮಾಡಿದೆ.

ಮೂವರು ಸೋಂಕಿತರು ಮೈಸೂರಿನ ವಿವಿಧ ಭಾಗಗಳಲ್ಲಿ ಓಡಾಡಿರುವುದರಿಂದ ಕೋವಿಡ್-19 ಸೋಂಕು ಇತರರಿಗೂ ಹರಡಿರಬಹುದೆಂಬ ಭೀತಿ ಉಂಟಾಗಿದೆ. ನಂಜನಗೂಡಿನ ರಾಷ್ಟ್ರಪತಿ ರಸ್ತೆ, 5ನೇ ಕ್ರಾಸಿನ ಸೋಂಕಿತ ವ್ಯಕ್ತಿ ಜೂನ್ 12 ರಂದು ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಸಾರಿಗೆ ಬಸ್‍ನಲ್ಲಿ ಮೈಸೂರಿಗೆ ಬಂದು ಅದೇ ದಿನ ನಂಜನಗೂಡಿಗೆ ಮತ್ತೊಂದು ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ.

ಮತ್ತೋರ್ವ ಮೈಸೂರಿನ ರಮ್ಮನಹಳ್ಳಿಯ ಹಣ್ಣಿನ ವ್ಯಾಪಾರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತ ತನ್ನ ವಾಹನದಲ್ಲಿ ರಾಮಕೃಷ್ಣನಗರದ ಸಾಯಿಬಾಬಾ ದೇವಸ್ಥಾನದ ರಸ್ತೆ, ಕುವೆಂಪುನಗರ ಕಾಂಪ್ಲೆಕ್ಸ್, ಹೂಟಗಳ್ಳಿಗಳಲ್ಲಿ ಸಂಚರಿಸಿ ಮಾವಿನ ಹಣ್ಣು, ಬಾಳೆ ಹಣ್ಣು ಮಾರಾಟ ಮಾಡಿದ್ದಾನೆ.

ಆ ವ್ಯಕ್ತಿಯಿಂದ ಹಲವು ಮಂದಿ ಹಣ್ಣು ಖರೀದಿ ಸಿದ್ದು, ಅವರ ಪತ್ತೆಗೆ ಆರೋಗ್ಯ ಇಲಾಖೆ ಅಧಿಕಾರಿ ಗಳು ಶೋಧ ನಡೆಸುತ್ತಿದ್ದಾರೆ. ಅದೇ ವ್ಯಕ್ತಿಯು ಜೂನ್ 8,10 ಮತ್ತು 12 ರಂದು ರಮ್ಮನಹಳ್ಳಿಯ ಕ್ಲಿನಿಕ್‍ವೊಂದಕ್ಕೆ ಹಾಗೂ ಜೂನ್ 13ರಂದು ಕೆ.ಆರ್. ಮೊಹಲ್ಲಾದ ಖಾಸಗಿ ಆಸ್ಪತ್ರೆಗೂ ಭೇಟಿ ನೀಡಿದ್ದ ಬಗ್ಗೆ ಟ್ರಾವೆಲ್ ಹಿಸ್ಟರಿ ದೊರೆತಿದೆ. ಇನ್ನೊಂದೆಡೆ ಸೋಂಕು ದೃಢಪಟ್ಟಿರುವ ದಟ್ಟಗಳ್ಳಿಯ ಉಪನ್ಯಾಸಕಿ ಜೂನ್ 16 ರಂದು ಕೆ.ಆರ್. ಮಾರುಕಟ್ಟೆ ಹೊರಭಾಗ ದಲ್ಲಿ ತರಕಾರಿ ಖರೀದಿಸಿದ್ದಾರೆ. ನಂತರ ಅಗ್ರಹಾರದ ಅಂಗಡಿಯೊಂದರಲ್ಲಿ ದಿನಸಿ ಖರೀದಿಸಿದ್ದು, ಜೂನ್ 17 ರಂದು ದಟ್ಟಗಳ್ಳಿಯ ಕೆಇಬಿ ಸರ್ಕಲ್ ಸಮೀಪದ ಅಂಗಡಿಯಲ್ಲಿ ಮಟನ್ ಖರೀದಿಸಿ ಜೂನ್ 20 ರಂದು ಆಟೋವೊಂದರಲ್ಲಿ ಮಾವನ ಜೊತೆ ಕುವೆಂಪುನಗರ ಕಾಂಪ್ಲೆಕ್ಸ್ ಬಳಿ ಕ್ಲಿನಿಕ್‍ವೊಂದಕ್ಕೆ ಭೇಟಿ ನೀಡಿದ್ದರು ಎಂಬ ಮಾಹಿತಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಲಭ್ಯವಾಗಿದೆ.

ಕೊರೊನಾ ಸೋಂಕಿತರು ತಮಗೆ ಸೋಂಕು ದೃಢ ಪಡುವಷ್ಟರಲ್ಲಿ ಹಲವೆಡೆ ಓಡಾಡಿರುವುದರಿಂದ ಮಹಾಮಾರಿ ರೋಗ ಸಮುದಾಯಕ್ಕೆ ಹರಡಿರ ಬಹುದು ಅಥವಾ ಹಲವು ಮಂದಿ ಸಂಪರ್ಕಕ್ಕೆ ಬಂದಿರಬಹುದೆಂಬ ಶಂಕೆ ಮೂಡಿದೆ. ಸೋಂಕಿತ ರನ್ನು ಸಂಪರ್ಕಿಸಿದವರನ್ನು ಪತ್ತೆ ಮಾಡಲು ಟ್ರಾಕಿಂಗ್ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು ನಿಯ ಮಾನುಸಾರ ಸಂಪರ್ಕಿತರನ್ನು ಹೋಂ ಕ್ವಾರಂಟೈನ್ ನಲ್ಲಿರಿಸಿ ಸ್ವಾಬಿಂಗ್ ಮಾಡಲು ಮುಂದಾಗಿದ್ದಾರೆ.

Translate »