- ವದಂತಿ, ಭಯ ಹುಟ್ಟಿಸುವವರ ವಿರುದ್ದ ಕ್ರಮ
- ಜಿಲ್ಲೆಯಲ್ಲಿ 1702 ಮಂದಿ ಕ್ವಾರಂಟೇನ್ ನಲ್ಲಿದ್ದು, 766 ಮಂದಿ ಪೂರ್ಣಗೊಳಿಸಿದ್ದಾರೆ
ಮೈಸೂರು,ಮಾ.29( MTY) – ಒಂದೇ ಸ್ಥಳದಲ್ಲಿ ಆರು ಮಂದಿಗೆ ನೊವೆಲ್ ಕೊರೊನಾ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಕೇಂದ್ರದ ಕಂಟೇನ್ಮೆಂಟ್ ಪ್ಲಾನ್ ನಿಯಮಾನುಸಾರ ನಂಜನಗೂಡನ್ನು ಕ್ಲಸ್ಟರ್ ಕೇಸ್ ಆಗಿ ಪರಿಗಣಿಸಿ, ತೀವ್ರ ಕಟ್ಟೆಚ್ಚರವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿಯಲ್ಲಿ ಕೊರೊನಾ ವೈರಸ್ ಇರುವುದು ಸಾಬೀತಾಗಿದೆ. ಒಂದೇ ಸ್ಥಳದಲ್ಲಿ ಹೆಚ್ಚಿನ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದರೆ, ಆ ಪ್ರದೇಶವನ್ನು ಕೇಂದ್ರದ ಕಂಟೇನ್ಮೆಂಟ್ ಪ್ಲಾನ್ ಗೈಡ್ ಲೈನ್ ಪ್ರಕಾರ ಕ್ಲಸ್ಟರ್ ಕೇಸ್ ಆಗಿ ಪರಿಗಣಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಂಜನಗೂಡನ್ನು ಕ್ಲಸ್ಟರ್ ಕೇಸ್ ಎಂದು ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹಾಲು,ತರಕಾರಿ, ಔಷಧಿ ಸೇರಿದಂತೆ ಅಗತ್ಯ ಸೇವೆಗಳ ವಾಹನ ಹೊರತುಪಡಿಸಿ ಬೇರಾವ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ನಂಜನಗೂಡಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಅಗತ್ಯ ಸೇವೆ ಹಾಗೂ ತುರ್ತು ಸೇವೆ ವಾಹನಗಳು ಸಿಂಗಲ್ ವಿಂಡೋ ವ್ಯವಸ್ಥೆಯಲ್ಲೇ ಭದ್ರತೆ ಇರುವ ಒಂದೇ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಸಾರ್ವಜನಿಕರು ಓಡಾಟ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
ಸೋಂಕು ಹರಡಿದ್ದು ಪತ್ತೆಗೆ ಕ್ರಮ: ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಮೊದಲ ಸೋಂಕಿತ ವ್ಯಕ್ತಿಗೆ ಕೊರೊನಾ ಹೇಗೆ ಬಂತು ಎನ್ನುವುದನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ರಾಜ್ಯದ ತಂಡವೂ ಸಹಕಾರ ನೀಡುತ್ತಿದೆ. ಮೊದಲ ಸೋಂಕಿತನಿಂದ 5 ಮಂದಿಗೆ ಸೋಕು ತಗುಲಿರುವುದು ದೃಡಪಟ್ಟಿದೆ. ಇದರಿಂದ ಪಟ್ಟಣದ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಕಾರ್ಖಾನೆಯ ಒಂದು ಸಾವಿರಕ್ಕೂ ಹೆಚ್ಚು ಮಂದಿ ಹೋಮ್ ಕ್ವಾರಂಟೇನ್ ನಲ್ಲಿಡಲಾಗಿದೆ. ಮನೆಯಲ್ಲಿಟ್ಟಿರುವ ಮಾತ್ರಕ್ಕೆ ಕೊರೊನಾ ಸೋಂಕಿದೆ ಎಂಬ ಅರ್ಥವಲ್ಲ. ಒಂದು ವೇಳೆ ಅವರಲ್ಲಿ ಸೋಂಕು ಇದ್ದರೆ ಬೇರೆಯವರಿಗೆ ಹರಡದಂತೆ ಕ್ವಾರಂಟೇನ್ ನಲ್ಲಿಡಲಾಗುತ್ತದೆ ಎಂದು ತಿಳಿಸಿದರು.
ವದಂತಿ, ಭಯ ಹುಟ್ಟಿಸುವವರ ವಿರುದ್ಧ ಕ್ರಮ : ವ್ಯಾಟ್ಸಪ್, ಫೇಸ್‌ಬುಕ್ ನಲ್ಲಿ ಕೆಲವರು ವಿಡಿಯೋ ತುಣುಕು ಪೋಸ್ಟ್ ಮಾಡಿ, ನಮ್ಮ ಮನೆ ಪಕ್ಕ, ನಮ್ಮ ಬಡಾವಣೆಯಲ್ಲಿ ಅಥವಾ ಯಾವುದಾದರೂ ಅಡ್ರೆಸ್ ಹಾಕಿ ಕೊರೊನಾ ಸೋಂಕಿತರನ್ನು ಕರೆದೊಯ್ದರು ಎಂದು ಜನರಲ್ಲಿ ಭಯ ಮೂಡಿಸುವ ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಸಾಮಾಜಿಕ ಜಾಲತಾಣಗಳ ಮೇಲೆ ಸೈಬರ್ ಪೊಲೀಸರು ಕಣ್ಣಿಟ್ಟಿದ್ದಾರೆ ಎಂದು ಎಚ್ಚರಿಸಿದರು.
ಕ್ವಾರಂಟೇನ್ ಗೆ ವ್ಯವಸ್ಥೆ : ಸರ್ಕಾರದ ಹೊಸ ನಿಯಮಾನುಸಾರ ಸೋಂಕಿತರನ್ನು ಕ್ವಾರಂಟೇನ್ ವ್ಯವಸ್ಥೆ ಮಾಡಲಾಗುವುದು. ಮನೆಯಲ್ಲಿದ್ದರೆ ನಿಮಯ ಉಲ್ಲಂಘಿಸಿ ಓಡಾಡಿದರೆ ಇತರರಿಗೂ ಸೋಂಕು ಹರಡುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವತಿಯಿಂದಲೇ ಕ್ವಾರಂಟೇನ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಬೇರೆ ಬೇರೆ ಆರೋಗ್ಯ ಸಮಸ್ಯೆ ಇದ್ದವರನ್ನು ಆಸ್ಪತ್ರೆಗಳಲ್ಲೂ, ಆರೋಗ್ಯವಂತರನ್ನು ವಿದ್ಯಾರ್ಥಿನಿಲಯಗಳು , ಸಮುದಾಯ ಭವನಗಳಲ್ಲಿ ಕ್ವಾರಂಟೇನ್ ಮಾಡಲಾಗುವುದು ಎಂದರು.
ಮೈಸೂರು ಜಿಲ್ಲೆಯಲ್ಲಿ ಇದುವರೆಗೂ 2486 ಮಂದಿ ಮೇಲೆ ತೀವ್ರ ನಿಗಾ ಇಡಲಾಗಿತ್ತು. ಅವರಲ್ಲಿ 766 ಮಂದಿ ಕ್ವಾರಂಟೇನ್ ಪೂರ್ಣಗೊಳಿಸಿದ್ದಾರೆ. ಇನ್ನೂ 1702 ಮಂದಿ ಹೋಮ್ ಕ್ವಾರಂಟೇನ್ ನಲ್ಲಿದ್ದಾರೆ. 8 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿಸಿದರು.