ಹುಣಸೂರು, ಆ.27(ಎಂಟಿವೈ, ಪ್ರಸಾದ್, ಕೆಕೆ)- ನಾಗರ ಹೊಳೆ ಅಭಯಾರಣ್ಯದಲ್ಲಿ ಹುಲಿ ಮತ್ತು ಜಿಂಕೆ ಬೇಟೆಗೆ ಸಂಬಂಧಿಸಿದಂತೆ ಕೆಲವೇ ಗಂಟೆಗಳಲ್ಲಿ ಬೇಟೆಗಾರರನ್ನು ಪತ್ತೆ ಹಚ್ಚುವ ಮೂಲಕ ಬಂಡೀಪುರದ ಅರಣ್ಯ ಇಲಾಖೆ ಪತ್ತೆದಾರಿ ಶ್ವಾನ ‘ರಾಣ’ ಸಾಹಸ ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನಾಗರಹೊಳೆ ಅಭಯಾರಣ್ಯದ ಕಲ್ಲಹಳ್ಳ ವಲಯದ ತಟ್ಟೆಕೆರೆ ಹಾಡಿ ಸಮೀಪದ ಅರಣ್ಯ ಪ್ರದೇಶದಲ್ಲಿ ಆ.25ರಂದು 6-7 ವರ್ಷದ ಹುಲಿ ಕಳೇಬರ ಪತ್ತೆಯಾಗಿತ್ತು. ಆದರೆ ಅದರ 4 ಕಾಲು ಗಳ ಪಂಜವನ್ನೇ ಕತ್ತರಿ ಸಿರುವುದು ಹಾಗೂ 2 ಕೋರೆ ಹಲ್ಲು ಕಿತ್ತಿರುವುದು ಕಂಡು ಬಂದಿತ್ತು. ಅರಣ್ಯ ಸಿಬ್ಬಂದಿ ಘಟನಾ ಸ್ಥಳದ ಸುತ್ತಲೂ ಪರಿಶೀಲನೆ ನಡೆಸಿದ್ದರು. ಇದು ಬೇಟೆಗಾರರ ಕೃತ್ಯವೆಂದು ತೀರ್ಮಾನಿಸಿ, ತಟ್ಟೆಕೆರೆ ಸೇರಿದಂತೆ ಸುತ್ತ ಮುತ್ತಲಿನ ಹಾಡಿ, ಗ್ರಾಮಗಳಲ್ಲೂ ಬೇಟೆಗಾರರ ಶೋಧನೆ ನಡೆಸಿದ್ದರು.
ಹಳೇ ಮೈಸೂರು ಭಾಗದಲ್ಲಿ ಹಲವಾರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಹುಲಿ ಬೇಟೆ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯಾಧಿಕಾರಿಗಳು ಬೇಟೆಗಾರರ ಪತ್ತೆಗಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ತೆದಾರಿ ಶ್ವಾನ ‘ರಾಣ’ ಮೊರೆ ಹೋದರು. ಬುಧವಾರ ರಾತ್ರಿಯೇ ಶ್ವಾನ `ರಾಣ’ನನ್ನು ಕರೆಸಲಾಗಿತ್ತು. ಘಟನಾ ಸ್ಥಳದಿಂದ ರಾಣಾ ಹ್ಯಾಂಡ್ಲರ್(ಪಾಲಕ) ಕಾಳ ಕಲ್ಕರ್ ಮಗೆ ಸೂಚನೆ ಮೇರೆಗೆ ವಾಸನೆ ಗ್ರಹಿಸಿ, ‘ರಾಣ’, ತಟ್ಟೆಕೆರೆ ಹಾಡಿಯ ಮೂಲಕ ಅರಣ್ಯಕ್ಕೆ ಹೊಂದಿಕೊಂಡಂತಿ ರುವ ಸಂತೋಷ್ ಎಂಬಾತನ ಮನೆ ಮುಂದೆ ನಿಂತಿತು. ಆ ಮನೆಯ ಬಾಗಿಲು ತೆರೆಯುತ್ತಿದ್ದಂತೆಯೇ ಒಳನುಗ್ಗಿದ ‘ರಾಣ’ ಗೋಣಿಚೀಲವೊಂದರಲ್ಲಿ ಕಟ್ಟಿಟ್ಟಿದ್ದ 1.5 ಕೆಜಿ ಜಿಂಕೆ ಮಾಂಸ ಪತ್ತೆ ಮಾಡಿದೆ.ಈ ವೇಳೆ ಮನೆಯಲ್ಲಿಯೇ ಇದ್ದ ಸಂತೊಷ್‍ನನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಆತನನ್ನು ಅರಣ್ಯ ಸಿಬ್ಬಂದಿ ವಿಚಾರಿಸುತ್ತಿರುವಂತೆಯೇ, ಮತ್ತೆ ವಾಸನೆ ಜಾಡು ಹಿಡಿದು, ಹೊಟ್ಟೇಂಗಡ ರಂಜು ಎಂಬಾತನ ಮನೆಗೂ ದಾಳಿ ನಡೆಸಿದ ‘ರಾಣ’ ಕೊಟ್ಟಿಗೆಯಲ್ಲಿ ಹುಲ್ಲಿನ ಹೊರೆಯಲ್ಲಿ ಇಟ್ಟಿದ್ದ ಹುಲಿಯ ನಾಲ್ಕು ಪಂಜಗಳೊಂದಿಗೆ 7 ಉಗುರು, ಜಿಂಕೆ ಕಾಲು, ಹುಲಿ ಕಾಲಿನ ಕೆಲವು ಭಾಗಗಳನ್ನು ಪತ್ತೆ ಹಚ್ಚಿದೆ. ಬಳಿಕ ಸಮೀಪದಲ್ಲಿದ್ದ ಕಾಂಡೇರ ಶಶಿ ಮತ್ತು ಕಾಂಡೇರ ಶರಣು ಮನೆಗೂ ‘ರಾಣ’ ಹೊಕ್ಕಿದೆ. ಆ ಮನೆಯನ್ನು ಶೋಧಿಸಿದ ಅರಣ್ಯ ಸಿಬ್ಬಂದಿ ಕೃತ್ಯಕ್ಕೆ ಬಳಸಿದ ಕಾಡತೂಸು, ತರೀಕಲ್ಲು, ಕಾಟ್ರೇಜ್ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಕಲ್ಲಹಳ್ಳ ವಲಯದಲ್ಲಿ ನಾಲ್ವರು ಬೇಟೆಗಾರರು ಹುಲಿ ಮತ್ತು ಜಿಂಕೆಯನ್ನು ಕೊಂದಿರುವುದು ಬಯಲಾಗಿದೆ. ಪತ್ತೆದಾರಿ ಶ್ವಾನ `ರಾಣ’ ನೀಡಿದ ಸುಳಿವಿನ ಮೇರೆಗೆ ಹುಲಿಯ ಕೋರೆ ಹಲ್ಲು, ಪಂಜ, ಜಿಂಕೆ ಮಾಂಸ, ಆಯುಧಗಳೊಂದಿಗೆ ಆರೋಪಿಗಳಲ್ಲಿ ಓರ್ವನನ್ನು ಬಂಧಿಸುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ತಲೆ ಮರೆಸಿಕೊಂಡ ಆರೋಪಿಗಳು: ಹುಲಿ ಮತ್ತು ಜಿಂಕೆ ಬೇಟೆಯಾಡಿದ ನಾಲ್ವರು ಆರೋಪಿಗಳಲ್ಲಿ ಸಂತೋಷ್ ಎಂಬಾತನನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಸಂಬಂಧಿಸಿದ ಸುಳಿವು ಇಲ್ಲದಂತೆ ನೋಡಿಕೊಂಡಿದ್ದ ಆರೋಪಿಗಳು ಶಿಕ್ಷೆಯಿಂದ ಪಾರಾಗಬಹುದೆಂಬ ಲೆಕ್ಕಾಚಾರದಿಂದ ಮನೆ ಸೇರಿದ್ದರು. ಆದರೆ ಆ.25ರ ರಾತ್ರಿಯೇ ತಟ್ಟೆಕೆರೆ ಹಾಡಿಯತ್ತ ಅರಣ್ಯ ಸಿಬ್ಬಂದಿ ಮುಖಮಾಡಿ, ಮಾಹಿತಿ ಕಲೆಹಾಕಲು ಪ್ರಯತ್ನಿಸಿದ್ದರು. ಯಾವುದೇ ಸುಳಿವು ದೊರೆಯಲಿಲ್ಲ. ಸಂತೋಷ್ ಮಾತ್ರ ಮನೆಯಲ್ಲೇ ಇದ್ದರೆ, ಇತರೆ ಆರೋಪಿಗಳಾದ ಹೊಟ್ಟೇಂಗಡ ರಂಜು, ಕಾಂಡೇರ ಶಶಿ, ಕಾಂಡೇರ ಶರಣು ಅಂದು ರಾತ್ರಿಯೇ ಕಾಲ್ಕಿತ್ತಿದ್ದರು. ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವ್ಯಾಪಕ ಶೋಧ ಮುಂದುವರೆದಿದ್ದು, ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿರಿಯ ಅಧಿಕಾರಿಗಳ ದೌಡು: ಹುಲಿ ಹತ್ಯೆ ಮಾಡಿ, ಪಂಜವನ್ನೇ ಕತ್ತರಿಸಿರುವ ಕೃತ್ಯ ಗಂಭೀರ ಪ್ರಕರಣವಾಗಿದ್ದರಿಂದ ಬುಧವಾರವೇ ಕೃತ್ಯ ನಡೆದ ಸ್ಥಳಕ್ಕೆ ರಾಜ್ಯ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರಾ, ಪ್ರಾಜೆಕ್ಟ್ ಟೈಗರ್ ಎಸಿಸಿಎಫ್ ಜಗತ್ ರಾಮ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕ ಮಹೇಶ್‍ಕುಮಾರ್ ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರಲ್ಲದೆ, ಅಲ್ಲಿಯೇ ಮೊಕ್ಕಾಂ ಹೂಡಿದ್ದರು.
ಗಂಭೀರವಾಗಿ ಪರಿಗಣಿಸಿದ್ದೇವೆ…
ಹುಲಿ, ಜಿಂಕೆ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕೃತ್ಯ ಬೆಳಕಿಗೆ ಬಂದ 24 ಗಂಟೆಯಲ್ಲೇ ಆರೋಪಿಗಳ ಸುಳಿವು ಪತ್ತೆಯಾಗಿದೆ. ಓರ್ವನನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇಂತಹ ಪ್ರಕರಣ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. – ಟಿ.ಹೀರಾಲಾಲ್, ಸಿಸಿಎಫ್ ಕೊಡಗು ಮತ್ತು ಮೈಸೂರು ವೃತ್ತ
ಹುಲಿಯ 11 ಉಗುರು, 2 ಕೋರೆ ಹಲ್ಲು ನಾಪತ್ತೆ…
ಹಲವು ವರ್ಷಗಳ ಬಳಿಕ ಹಳೆ ಮೈಸೂರು ಪ್ರಾಂತ್ಯದಲ್ಲಿ ನಡೆದ ಹುಲಿ ಹತ್ಯೆ ಪ್ರಕರಣ ಗಮನ ಸೆಳೆದಿತ್ತು. ಮೈಸೂರು- ಕೊಡಗು ಜಿಲ್ಲೆ ಗಡಿ ಭಾಗದ ಅರಣ್ಯ ಪ್ರದೇಶ ದಲ್ಲಿ ನಡೆದಿದ್ದ ಹುಲಿ ಹತ್ಯೆ ಪ್ರಕರಣ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿತ್ತು. ರಾಣ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪರಿಶ್ರಮದಿಂದ ಕೃತ್ಯ ನಡೆಸಿದ್ದವರ ಸುಳಿವು ಪತ್ತೆ ಯಾಗಿದೆ. ಬಂಧಿತ ಆರೋಪಿ ಹಾಗೂ ಪರಾರಿಯಾಗಿರುವ ಆರೋಪಿಗಳ ಮನೆಯಿಂದ ಒಟ್ಟು ಹುಲಿಯ 7 ಉಗುರು, ಪಂಜ, ಕಾಲಿನ ಕೆಲ ಭಾಗ ವಶಪಡಿಸಿಕೊಳ್ಳ ಲಾಗಿದೆ. ಆದರೆ ಇನ್ನೂ 11 ಉಗುರು, 2 ಕೋರೆ ಹಲ್ಲು ಪತ್ತೆಯಾಗಬೇಕಾಗಿದೆ. – ಮಹೇಶ್‍ಕುಮಾರ್, ನಿರ್ದೇಶಕ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ