ಗಡ್ಡ ಬಿಟ್ರೆ ರವೀಂದ್ರನಾಥ್ ಟ್ಯಾಗೋರ್ ಆಗಲ್ಲ ಪ್ರಧಾನಿ ಮೋದಿ ವಿರುದ್ಧ ಎಚ್.ಕೆ.ಪಾಟೀಲ್ ವಾಗ್ದಾಳಿ
ಮೈಸೂರು

ಗಡ್ಡ ಬಿಟ್ರೆ ರವೀಂದ್ರನಾಥ್ ಟ್ಯಾಗೋರ್ ಆಗಲ್ಲ ಪ್ರಧಾನಿ ಮೋದಿ ವಿರುದ್ಧ ಎಚ್.ಕೆ.ಪಾಟೀಲ್ ವಾಗ್ದಾಳಿ

February 26, 2021

ಗದಗ, ಫೆ.25- ಪ್ರಧಾನಿ ಗಡ್ಡ ಹಾಗೂ ವೇಷಭೂಷಣದ ಬಗ್ಗೆ ಕಾಂಗ್ರೆಸ್‍ನ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಟೀಕಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಬೆಲೆ ಏರಿಕೆ ಹಾಗೂ ನೂತನ ಕೃಷಿ ಕಾಯ್ದೆ ವಿರುದ್ಧ ನಗರದಲ್ಲಿ ಇಂದು ಟ್ರ್ಯಾಕ್ಟರ್ ರ್ಯಾಲಿ ನಂತರ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ದರು. ಮೋದಿ ಅವರೇ, ಗಡ್ಡ ಬಿಟ್ರೆ, ನೀವು ರವೀಂದ್ರನಾಥ ಟ್ಯಾಗೋರ್ ಆಗಲ್ಲ. ಸೈನ್ಯದ ಸಮವಸ್ತ್ರ ಹಾಕಿದರೆ ನೀವು ಸುಭಾಷ್ ಚಂದ್ರ ಬೋಸ್ ಆಗುವುದಿಲ್ಲ. ಕೈ ಎತ್ತಿ ತೋರಿಸಿದರೆ ಬಿ.ಆರ್.ಅಂಬೇಡ್ಕರ್ ಆಗುವುದಿಲ್ಲ. ಹೆಗಲ ಮೇಲೆ ಶಾಲು ಹಾಕಿದರೆ ಸರ್ದಾರ್ ವಲ್ಲಭಭಾಯ್ ಪಟೇಲ್ ಆಗುವುದಿಲ್ಲ. ನಿಮ್ಮ ನಡೆ, ನುಡಿ ಹಾಗೂ ನೀಡಿದ ಭವರಸೆಗಳನ್ನು ಈಡೇರಿಸಿದಾಗ ಜನ ನಿಮ್ಮನ್ನು ನಂಬುತ್ತಾರೆ ಎಂದು ಕಿಡಿಕಾರಿದರು.

ನೀವು ವಚನ ಭ್ರಷ್ಟರಾಗಿದ್ದೀರಿ. ಇದೇ ರೀತಿ ಸುಳ್ಳು ಹೇಳುತ್ತ ದೇಶದ ಜನರಿಗೆ ಎಷ್ಟು ದಿನ ಮೋಸ ಮಾಡುತ್ತೀರಿ. ನೀವು ಖುರ್ಚಿ ಖಾಲಿ ಮಾಡುವ ಕಾಲ ಬರುತ್ತದೆ. ಲಾಕ್‍ಡೌನ್‍ನಿಂದ ಬೆಲೆ ಏರಿಕೆ ನಿಮ್ಮ ಸರ್ಕಾರಕ್ಕೆ ಮಾತ್ರ ಆಗಿದ್ಯಾ? ಲಾಕ್‍ಡೌನ್‍ನಿಂದ ಜನಸಾಮಾನ್ಯರಿಗೆ ತೊಂದರೆ ಆಗಿಲ್ವಾ? ಜನ ಸಾಮಾನ್ಯರಿಗೊಂದು ನ್ಯಾಯ, ಸರ್ಕಾರದ ಆದಾಯಕ್ಕೊಂದು ನ್ಯಾಯನಾ? ಕೊರೊನಾ ಸಂದಿಗ್ಧ ಸಂದರ್ಭದಲ್ಲಿ ಜನರನ್ನ ಯಾಕೆ ಸುಲಿಗೆ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಾದರೂ ಸುಲಿಗೆ ಮಾಡುವುದನ್ನು ಬಿಡಿ, ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ದಿನಬಳಕೆ ವಸ್ತುಗಳ ಬೆಲೆ ಇಳಿಕೆ ಮಾಡಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್.ಕೆ.ಪಾಟೀಲ್ ಗುಡುಗಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್ ಪಾಟೀಲ್, ಮಾಜಿ ಶಾಸಕರುಗಳಾದ ಬಿ.ಆರ್ ಯಾವಗಲ್, ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

 

Translate »