ತಜ್ಞರ ಮುನ್ಸೂಚನೆ ಲೆಕ್ಕಿಸದ ಬಿಜೆಪಿ ಸರ್ಕಾರ ಜನರ ಬೀದಿ ಹೆಣ ಮಾಡುತ್ತಿದೆ
ಮೈಸೂರು

ತಜ್ಞರ ಮುನ್ಸೂಚನೆ ಲೆಕ್ಕಿಸದ ಬಿಜೆಪಿ ಸರ್ಕಾರ ಜನರ ಬೀದಿ ಹೆಣ ಮಾಡುತ್ತಿದೆ

April 24, 2021

ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ತಮ್ಮ ಪಕ್ಷದ ಶಾಸಕರಿಗೆ ಪರಿಸ್ಥಿತಿ ಅವಲೋಕನ
ಪತ್ರ

ತಜ್ಞರ ಸಲಹೆ ಪಾಲಿಸಿದ್ದರೆ ಜನರಿಗೆ ಇಂತಹ ದಯನೀಯ ಸ್ಥಿತಿ ಬರುತ್ತಿರಲಿಲ್ಲ

ಬೆಂಗಳೂರು, ಏ.23(ಕೆಎಂಶಿ)- ಕೋವಿಡ್ ಎರಡನೇ ಅಲೆ ಬಗ್ಗೆ ತಜ್ಞರು ಮುನ್ಸೂಚನೆ ನೀಡಿ ದ್ದರೂ, ಭ್ರಷ್ಟ, ಅದಕ್ಷ ಜನ ವಿರೋಧಿ ಬಿಜೆಪಿ ಸರ್ಕಾರ ಅದನ್ನು ಕಡೆಗಾಣಿಸಿ, ಜನರನ್ನು ಇಂತಹ ದಯಾನೀಯ ಸ್ಥಿತಿಗೆ ತಂದಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ತಮ್ಮ ಪಕ್ಷದ ಶಾಸಕರುಗಳಿಗೆ ಪತ್ರ ಬರೆದು, ಇಂತಹ ಸಮಯದಲ್ಲಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಎಂದು ಕರೆ ನೀಡುವುದರ ಜೊತೆಗೆ ಬಿಜೆಪಿಯ ಭ್ರಷ್ಟ ಆಡಳಿತದ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ತಜ್ಞರ ವರದಿಯನ್ನು ಗಂಭೀರ ವಾಗಿ ಪರಿಗಣಿಸಿ ಲ್ಯಾಬುಗಳು, ಆಸ್ಪತ್ರೆಗಳು, ಹಾಸಿಗೆಗಳು, ಆಕ್ಸಿಜನ್ ವ್ಯವಸ್ಥೆ, ಐ.ಸಿ.ಯು, ವೆಂಟಿಲೇಟರ್‍ಗಳು, ಕೋವಿಡ್ ನಿಯಂತ್ರಣಕ್ಕೆ ಬೇಕಾದ ಔಷಧಿಗಳು ಇತ್ಯಾದಿಯಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರೆ ಇವತ್ತಿನ ಈ ಅನಾಹುತವನ್ನು ತಪ್ಪಿಸಬಹುದಾಗಿತ್ತು.

ಈ ಸಿದ್ಧತೆಗಳನ್ನೇನೂ ಮಾಡಿಕೊಳ್ಳದ ಕಾರಣದಿಂದಾಗಿಯೇ ಜನರು ಅನಾಥರಂತೆ ರಸ್ತೆಗಳಲ್ಲಿ, ಆಸ್ಪತ್ರೆಯ ವರಾಂಡಗಳಲ್ಲಿ ಸಾವಿಗೀಡಾಗುತ್ತಿದ್ದಾರೆ. ಹಾಗಾಗಿ ಜನ ಕೊರೊನಾದಿಂದ ಮರಣ ಹೊಂದಿದರು ಎಂಬುದಕ್ಕಿಂತ ಬಿ.ಜೆ.ಪಿ. ಸರ್ಕಾರಗಳು ತಮ್ಮ ಅದಕ್ಷತೆ ಮತ್ತು ಉಡಾಫೆ ಸ್ವಭಾವದಿಂದಾಗಿ ಅಮಾಯಕ ಜನಗಳ ಕೊಲೆಗಳಿಗೆ ಕಾರಣರಾಗುತ್ತಿವೆ. ಮರಣ ಹೊಂದುತ್ತಿರುವ ಬಹುಪಾಲು ಜನರು ರಾಜಕೀಯ ನಿರ್ಲಕ್ಷ್ಯದಿಂದ ಆದ ಕೊಲೆಗಳು ಎನ್ನದೆ ಅನ್ಯ ದಾರಿ ಇಲ್ಲ. ಯಾವುದೇ ಮುನ್ಸೂಚನೆ ನೀಡದೆ ಅಂಗಡಿ -ಮುಂಗಟ್ಟುಗಳ ಬಾಗಿಲು ಮುಚ್ಚಿಸುವುದು ಮತ್ತು ಬಾಯಿಗೆ ಬಂದಂತೆ ಸಚಿವರುಗಳು, ಅಧಿಕಾರಿಗಳು ಮಾತನಾಡಿ ಜನರಲ್ಲಿ ಗೊಂದಲ ಹುಟ್ಟಿಸುವುದನ್ನೇ ಈಗಲೂ ಮಾಡುತ್ತಿದ್ದಾರೆ.

ಸಂಕಷ್ಟದಲ್ಲಿರುವ ಬಡಜನರು ಹಸಿವಿನಿಂದ ನರಳದಂತೆ ನೋಡಿ ಕೊಳ್ಳಲು, ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಪಕಗೊಳಿಸ ಬೇಕಾಗಿತ್ತು. ಅದರ ಬದಲಾಗಿ ಜನರಿಗೆ ನೀಡುವ ಪಡಿತರ ಅಕ್ಕಿಯನ್ನು 2 ಕೆ.ಜಿ.ಗೆ ಇಳಿಸಲಾಗಿದೆ. ಇಂದಿರಾ ಕ್ಯಾಂಟಿನ್‍ಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ. ರೈತರು ಬಳಸುವ ರಸಗೊಬ್ಬರ ದರಗಳನ್ನು ಕ್ವಿಂಟಾಲ್‍ಗೆ 1400 ರೂ.ಗಳಷ್ಟು ಹೆಚ್ಚು ಮಾಡಲಾಗಿದೆ. ಜನರನ್ನು ಶತ್ರುಗಳು ಎಂದು ಭಾವಿಸುವ ಸರ್ಕಾರಗಳು ಮಾತ್ರ ಈ ರೀತಿಯ ತೀರ್ಮಾನ ಗಳನ್ನು ತೆಗೆದುಕೊಳ್ಳಲು ಸಾಧ್ಯ. ಜನರು ಸಂಕಷ್ಟದಲ್ಲಿರುವಾಗ, ದುಡಿಮೆಯಿಲ್ಲದೆ ಕೈಯ್ಯಲ್ಲಿ ಹಣವಿಲ್ಲದಿರುವಾಗ ಸರ್ಕಾರ ಅವರ ಕಡೆಯ ಹನಿ ರಕ್ತವನ್ನೂ ಹೀರಲು ಹೊರಟಿದೆ. ಇಂತಹ ಜನದ್ರೋಹಿ ಆಡಳಿತವನ್ನು ನಾನು ಚರಿತ್ರೆಯಲ್ಲಿ ಎಲ್ಲೂ ಓದಿಲ್ಲ ಮತ್ತು ಕೇಳಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂ ಡರು, ಕಾರ್ಯಕರ್ತರು ಕಳೆದ ಬಾರಿ ಜನರ ಜೊತೆ ನಿಂತು ಅನ್ನ, ಆಹಾರದ ವ್ಯವಸ್ಥೆಯನ್ನು ಮಾಡಲು ಸಾಕಷ್ಟು ಶ್ರಮಿಸಿದ್ದೀರಿ. ಹಾಗೆಯೇ ರೈತರು ಬೆಳೆದ ತರಕಾರಿ, ಹಣ್ಣು ಇತರೆ ಉತ್ಪನ್ನಗಳನ್ನು ಖರೀದಿಸಿ, ಜನರಿಗೆ ತಲುಪಿಸುವ ಸ್ತುತ್ಯಾರ್ಹವಾದ ಕೆಲಸಗಳನ್ನು ಮಾಡಿದ್ದೀರಿ. ಇವೆಲ್ಲವನ್ನು ಜನತೆ ಕೃತಜ್ಞತೆಯಿಂದ ನೆನೆಯುತ್ತಿದ್ದಾರೆ.

ಕೋವಿಡ್‍ನ 2ನೇ ಅಲೆ ಸಂದರ್ಭದಲ್ಲೂ ಸಹ ತಾವುಗಳು ಜನರ ಜೊತೆ ನಿಂತು, ಆಸ್ಪತ್ರೆ, ಆಕ್ಸಿಜನ್, ಔಷಧಿಗಳು, ಆಂಬುಲೆನ್ಸ್‍ಗಳು, ಇನ್ನಿತರ ಚಿಕಿತ್ಸೆಗಳಿಗೆ ನೆರವಾಗಬೇಕೆಂದು ಹಾಗೂ ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನ ಆಹಾರದ ವ್ಯವಸ್ಥೆಯನ್ನು ಸಹ ಕಳೆದ ವರ್ಷದಂತೆಯೇ ಈ ವರ್ಷವೂ ಮಾಡುವ ಮೂಲಕ ಜನರ ಸಕಲ ಸಂಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಕಾರ್ಯ ಗಳನ್ನು ಮಾಡಬೇಕೆಂದು ಕೋರುತ್ತೇನೆ ಎಂದಿದ್ದಾರೆ.

Translate »