ಶನಿವಾರ ಮಧ್ಯರಾತ್ರಿಯಿಂದಲೇ ಬಸ್ ದರ ಹೆಚ್ಚಳ ಜಾರಿ
ಮೈಸೂರು

ಶನಿವಾರ ಮಧ್ಯರಾತ್ರಿಯಿಂದಲೇ ಬಸ್ ದರ ಹೆಚ್ಚಳ ಜಾರಿ

September 11, 2018

ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ಹಿನ್ನೆಲೆ ಯಲ್ಲಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‍ಗೆ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದ ರಾಜ್ಯ ಸರ್ಕಾರ ಮತ್ತೊಂದೆಡೆ ಬರುವ ಭಾನುವಾರದಿಂದ ರಾಜ್ಯ ರಸ್ತೆ ಸಾರಿಗೆ ದರ ಹೆಚ್ಚಳ ಮಾಡುವ ನಿರ್ಧಾರ ಪ್ರಕಟಿಸಿದೆ.

ಬಂದ್‍ಗೆ ರಾಜ್ಯದ ಜನತೆ ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೆ, ಇದರ ಲಾಭ ಪಡೆದ ರಾಜ್ಯ ಸರ್ಕಾರ ಶೇ.18 ರಷ್ಟು ದರ ಹೆಚ್ಚಳ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಶನಿವಾರ ಮಧ್ಯರಾತ್ರಿಯಿಂದಲೇ ದರ ಹೆಚ್ಚಳ ಜಾರಿಗೆ ಬರಲಿದ್ದು, ನಗರ ಸಾರಿಗೆ ದರ 18 ರಿಂದ ಶೇ.50 ರಷ್ಟು ಹೆಚ್ಚಳವಾಗುವ ಸಂಭವವಿದೆ. ಸಾಮಾನ್ಯ ಸಾರಿಗೆಗೆ ಶೇ.18 ರಷ್ಟಾದರೂ, ಸುವಿಹಾರಿ ಬಸ್‍ಗಳ ಪ್ರಯಾಣಿಕರು ಮತ್ತಷ್ಟು ದುಬಾರಿ ದರ ತೆರಬೇಕಾಗುತ್ತದೆ. ಸಾರಿಗೆ ದರ ಹೆಚ್ಚಳವನ್ನು ಸಮರ್ಥಿಸಿಕೊಂಡಿರುವ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಕೇಂದ್ರ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಸತತವಾಗಿ ಹೆಚ್ಚಳ ಮಾಡುತ್ತಿರುವುದರಿಂದ ಪ್ರಯಾಣಿಕರ ಮೇಲೆ ಭಾರ ಹೇರಿಕೆ ಮಾಡುವುದು ಅನಿವಾರ್ಯ ಎಂದಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಮೂರು ತಿಂಗಳ ಅವಧಿಯಲ್ಲಿ ಡೀಸೆಲ್ ದರ ಹೆಚ್ಚಳದಿಂದ 180 ಕೋಟಿ ರೂ. ನಷ್ಟವುಂಟಾಗಿದೆ. ಪ್ರತಿ ದಿನ ಡೀಸೆಲ್ ದರ ಹೆಚ್ಚಳವಾಗುತ್ತಿರುವುದರಿಂದ ಸಾರಿಗೆ ಸಂಸ್ಥೆಗಳ ನಿಗಮದ ಮೇಲೆ ಭಾರೀ ಹೊರೆ ಬೀಳುತ್ತಿದೆ.

ಹೊರೆ ತಗ್ಗಿಸುವ ಉದ್ದೇಶದಿಂದ ಅಷ್ಟೇ ಪ್ರಯಾಣ ದರ ಹೆಚ್ಚಳ ಮಾಡಲಾಗುತ್ತಿದೆಯೇ ಹೊರತು ಬೇರೆ ಕಾರಣದಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ದರ ಹೆಚ್ಚಳಕ್ಕೆ ನಾಲ್ಕು ನಿಗಮಗಳು ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಸರ್ಕಾರ ಹೊಸದಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲೇ ಜನರ ಮೇಲೆ ಹೊರೆ ಬೇಡ ಎಂದು ಮುಖ್ಯಮಂತ್ರಿಯವರು ಸಲಹೆ ಮಾಡಿದ್ದರು.

ಡಾಲರ್ ಕುಸಿತದಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಲೇ ಇದೆ. ಈ ನಷ್ಟ ಭರಿಸಲು ನಮ್ಮಿಂದ ಸಾಧ್ಯವಾಗದ ಕಾರಣ ಸರ್ಕಾರದ ಅನುಮತಿ ಪಡೆದೇ ಬೆಲೆ ಹೆಚ್ಚಳ ಮಾಡಲಾಗುತ್ತಿದೆ. ಗೌರಿ-ಗಣೇಶ ಹಬ್ಬದ ನಂತರ ಬಸ್ ಪ್ರಯಾಣದರವನ್ನು ಶೇ.18ರಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದರು.

ಬಸ್ ದರ ಏರಿಕೆ ಸಂಬಂಧ ಮೂರು ತಿಂಗಳ ಹಿಂದೆಯೇ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ದರ ಏರಿಕೆ ಮಾಡಿದರೆ ಜನಸಾಮಾನ್ಯರಿಗೆ ಹೊರೆಯಾಗುವುದು ಎಂಬ ಉದ್ದೇಶದಿಂದ ತಡೆಹಿಡಿಯಲಾಗಿತ್ತು. ತೈಲ ಬೆಲೆ ದಿನೇ ದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದರು.

ಪ್ರಸ್ತುತ ಪೆಟ್ರೋಲ್ ಲೀ.ಗೆ 84 ರೂ. ಹಾಗೂ ಡೀಸೆಲ್‍ಗೆ 73 ರೂ. ಆಗಿರುವುದರಿಂದ ಸಂಸ್ಥೆಗೆ ಆಗುತ್ತಿರುವ ನಷ್ಟ ತಪ್ಪಿಸಬೇಕಾದರೆ ಬಸ್ ದರ ಏರಿಕೆ ಮಾಡುವ ಅನಿವಾರ್ಯತೆ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಪ್ರತಿದಿನ ಬಿಎಂಟಿಸಿ ಬಸ್‍ನಲ್ಲಿ 45 ಲಕ್ಷ ಜನ ಪ್ರಯಾಣಿಸಿದರೆ, ಮೆಟ್ರೋದಲ್ಲಿ 4 ಲಕ್ಷ ಜನ ಪ್ರಯಾಣ ಮಾಡುತ್ತಾರೆ. ಮಹಾನಗರದ ಜನರು ಸಂಚಾರಕ್ಕೆ ಸಾರ್ವಜನಿಕ ಸಂಪರ್ಕ ಸಾರಿಗೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ ಎಂದರು.

Translate »