ತಕ್ಷಣ 2000 ಕೋಟಿ ರೂ. ಅನುದಾನಕ್ಕೆ ಪ್ರಧಾನಿಗೆ ಸಿಎಂ ಕುಮಾರಸ್ವಾಮಿ ಮನವಿ
ಮೈಸೂರು

ತಕ್ಷಣ 2000 ಕೋಟಿ ರೂ. ಅನುದಾನಕ್ಕೆ ಪ್ರಧಾನಿಗೆ ಸಿಎಂ ಕುಮಾರಸ್ವಾಮಿ ಮನವಿ

September 11, 2018

ಬೆಂಗಳೂರು:  ಅತಿ ವೃಷ್ಟಿ, ಅನಾವೃಷ್ಟಿಯಿಂದ ತತ್ತರಿಸಿರುವ ರಾಜ್ಯಕ್ಕೆ ತತ್‍ಕ್ಷಣವೇ 2000 ಕೋಟಿ ರೂ. ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ತಲೆದೋರಿರುವ ನೆರೆ ಮತ್ತು ಬರ ಪರಿಸ್ಥಿತಿ ಅಧ್ಯಯನ ಮಾಡಲು ಕೇಂದ್ರ ತಂಡ ಕಳುಹಿಸಿ, ತಕ್ಷಣವೇ ಅನುದಾನ ಬಿಡುಗಡೆ ಮಾಡಿ ಎಂದು ಕೋರಿದ್ದಾರೆ. ಸರ್ಕಾರದ ಕೋರಿಕೆಗೆ ತಕ್ಷಣವೇ ಸ್ಪಂದಿ ಸಿರುವ ಪ್ರಧಾನಿಯವರು, ರಾಜ್ಯಕ್ಕೆ ತಜ್ಞರ ತಂಡಗಳನ್ನು ಕಳುಹಿಸಿಕೊಡುವುದಾಗಿ ಹೇಳಿ ದರಾದರೂ, ಅನುದಾನದ ಬಗ್ಗೆ ಚಕಾರ ವೆತ್ತಿಲ್ಲ. ನವದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಸಂಪುಟದ ಸಹೋದ್ಯೋಗಿಗಳು ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಜೊತೆ ಗೂಡಿ, ಭೇಟಿ ಮಾಡಿ, ಸವಿವರವಾದ ಮಾಹಿತಿ ನೀಡಿದ್ದಾರೆ. ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆ ಯಿಂದ ಏಳು ಜಿಲ್ಲೆಗಳಲ್ಲಿ ಪ್ರವಾಹ ಉಂಟಾ ಗಿದೆ. ಅಲ್ಲದೆ
ಸಕಾಲಕ್ಕೆ ಮಳೆ ಬಾರದ ಕಾರಣ 16 ಜಿಲ್ಲಾ ವ್ಯಾಪ್ತಿಯ 86 ತಾಲೂಕುಗಳು ಬರಗಾಲಕ್ಕೆ ಸಿಲುಕಿವೆ ಎಂದು ಹೇಳಿದರು.

ಅತಿವೃಷ್ಟಿ, ಅನಾವೃಷ್ಟಿಯಿಂದ ಒಟ್ಟಾರೆ ಎಂಟು ಸಾವಿರ ಕೋಟಿ ನಷ್ಟವಾಗಿದ್ದು,ಕೇಂದ್ರ ಸರ್ಕಾರ ಕೂಡಲೇ ಪರಿಹಾರದ ರೂಪದಲ್ಲಿ 2000 ಕೋಟಿ ಹಣವನ್ನು ಬಿಡುಗಡೆ ಮಾಡಬೇಕೆಂದರು.

ನಮ್ಮ ಮನವಿಗೆ ಪ್ರಧಾನಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜ್ಯಕ್ಕೆ ಅಗತ್ಯವಿರುವ ಆರ್ಥಿಕ ನೆರವು ಹಾಗೂ ಕೂಡಲೇ ಎರಡು ಅಧ್ಯಯನ ತಂಡಗಳನ್ನು ಕಳುಹಿಸಿಕೊಡುವ ಆಶ್ವಾಸನೆ ನೀಡಿದ್ದು, ಕೇಂದ್ರದಿಂದ ನಮಗೆ ನೆರವು ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ 7 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಆಸ್ತಿಪಾಸ್ತಿ, ಮನೆಮಠ, ಬೆಳೆದು ನಿಂತ ಬೆಳೆ ಎಲ್ಲವನ್ನು ಕಳೆದುಕೊಂಡಿದ್ದಾರೆ. ಇದನ್ನು ಪ್ರಧಾನಿಯವರಿಗೆ ಮನವರಿಕೆ ಮಾಡಿದ್ದೇವೆ.
ಕರ್ನಾಟಕವು 2018ರ ನೈಋತ್ಯ ಮಾನ್ಸೂನ್ ಅವಧಿಯಲ್ಲಿ ಅತೀ ಹೆಚ್ಚು ಹಾಗೂ ಅತೀ ಕಡಿಮೆ ಮಳೆಗೆ ಸಾಕ್ಷಿಯಾಗಿದೆ. ಇದರಿಂದಾಗಿ ಕರಾವಳಿ ಹಾಗೂ ಮಲೆನಾಡಿನ 7 ಜಿಲ್ಲೆಗಳಲ್ಲಿ ಪ್ರವಾಹ ಹಾಗೂ ಭೂಕುಸಿತ ಉಂಟಾಗಿದ್ದು, ಒಳನಾಡಿನ 15 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿದೆ.

ಕೊಡಗು ಹಾಗೂ ನೆರೆಯ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮೇ ತಿಂಗಳಿನಿಂದ ಆಗಸ್ಟ್ ವರೆಗೆ ಸತತವಾಗಿ ಭಾರೀ ಮಳೆಯಾಗುತ್ತಿದ್ದು, ಆಗಸ್ಟ್ 2ನೇ ವಾರದಲ್ಲಿ ಕಳೆದ 118 ವರ್ಷಗಳಲ್ಲಿಯೇ ಅತೀ ಹೆಚ್ಚು ಮಳೆ ದಾಖಲಾಗಿದೆ.

ಇದರಿಂದಾಗಿ ಈ ಭಾಗದ ಜಲಾಶಯಗಳಿಗೆ ಹಿಂದೆಂದೂ ಹರಿಯದಷ್ಟು ನೀರು ಹರಿದಿದೆ. ತಿಂಗಳುಗಳ ಕಾಲ ಸತತ ಭಾರಿ ಮಳೆ ಸುರಿದಿದ್ದರಿಂದ ಕೊಡಗು ಮತ್ತು ನೆರೆಯ ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ ಭಾರೀ ಭೂಕುಸಿತ ಹಾಗೂ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಇದರಿಂದಾಗಿ ಮೇಲ್ಮೈ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಪರಿಸರ ಹಾಗೂ ಭೌಗೋಳಿಕ ಪರಿಸ್ಥಿತಿಯ ಮೇಲೆ ಇದು ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಭಾರೀ ಹಾನಿಯಾಗಿದ್ದು, ಭೂ ಕುಸಿತದಿಂದಾಗಿ ಕಾಫಿ ತೋಟಗಳು ಕೇವಲ ಮಣ್ಣಿನ ರಾಶಿಗಳಾಗಿ ಉಳಿದಿವೆ. ಕಾಫಿ ಉದ್ಯಮದ ಅಂದಾಜಿನ ಪ್ರಕಾರ 2018-19ರಲ್ಲಿ ಕಾಫಿ ಉತ್ಪಾದನೆ ಶೇ. 20 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಭಾರತದ ಶೇ. 90 ರಷ್ಟು ಕಾಫಿ ಉತ್ಪಾದನೆ ಕೊಡಗು ಮತ್ತು ಕೇರಳದಲ್ಲಿ ಆಗುತ್ತಿದೆ. ಕಾಫಿ ಬೆಳೆ ನಷ್ಟವೇ ಸುಮಾರು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 275, ರಾಷ್ಟ್ರೀಯ ಹೆದ್ದಾರಿ 75 ಹಾಗೂ ರಾಷ್ಟ್ರೀಯ ಹೆದ್ದಾರಿ 234, ರಾಜ್ಯ ಹೆದ್ದಾರಿಗಳು, ಕೊಡಗಿನ ಪ್ರಮುಖ ಜಿಲ್ಲಾ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳು ಹಾಗೂ ಅರಣ್ಯ ರಸ್ತೆಗಳಿಗೆ ಭಾರೀ ಹಾನಿಯುಂಟಾಗಿದೆ. ಘಾಟಿ ಪ್ರದೇಶದಲ್ಲಿ ಹಲವೆಡೆಗಳಲ್ಲಿ ಭೂ ಕುಸಿತವಾಗಿದ್ದು, ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಸಂಚಯವಾಗಿರುವ ಮಣ್ಣು, ಕೆಸರು ತೆರವುಗೊಳಿಸಲು ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕಾಗಿದೆ.

ಪ್ರಕೃತಿಯ ಮುನಿಸಿನಿಂದ ಸಾವಿರಾರು ಜನ ಮನೆ, ಜೀವನೋಪಾಯ ಕಳೆದುಕೊಂಡಿದ್ದಾರೆ. ಪ್ಲಾಂಟೇಷನ್ ಕಾರ್ಮಿಕರು ಹಾಗೂ ಸಣ್ಣ ಮತ್ತು ಮಧ್ಯಮ ಭೂ ಹಿಡುವಳಿದಾರರಿಗೆ ಇದರಿಂದ ಅತೀ ಹೆಚ್ಚು ತೊಂದರೆಯಾಗಿದೆ. 65 ಜನರು ಪ್ರವಾಹ, ಭೂಕುಸಿತ, ಮನೆ ಕುಸಿತ ಮತ್ತು ಸಿಡಿಲು ಮಳೆಗೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಜೀವ ಕಳೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವು ಯಶಸ್ವಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ 4300 ಜನರನ್ನು ರಕ್ಷಣೆ ಮಾಡಿದೆ.

55 ಪರಿಹಾರ ಕೇಂದ್ರಗಳಲ್ಲಿ ಸುಮಾರು 7300 ಜನರಿಗೆ ಆಶ್ರಯ ನೀಡಲಾಗಿದೆ. ಈ ಪರಿಹಾರ ಕೇಂದ್ರಗಳಲ್ಲಿ ಆಹಾರ, ವೈದ್ಯಕೀಯ ನೆರವು ಮತ್ತಿತರ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ 5 ಲಕ್ಷ ರೂಪಾಯಿ (ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1 ಲಕ್ಷ ರೂ. ಹೆಚ್ಚುವರಿ ಪರಿಹಾರ) ಪರಿಹಾರ ನೀಡಲಾಗಿದೆ.

ಪರಿಹಾರ ಕೇಂದ್ರದಲ್ಲಿರುವ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ಅಗತ್ಯ ವೆಚ್ಚಗಳಿಗಾಗಿ 3800 ರೂಪಾಯಿ ನಗದು ನೀಡಲಾಗಿದೆ. ಜೊತೆಗೆ 10 ಕೆಜಿ ಅಕ್ಕಿ, 1 ಕೆಜಿ ಎಣ್ಣೆ, ಸಕ್ಕರೆ, ಉಪ್ಪು, ಬೇಳೆಗಳನ್ನು ಹಳ್ಳಿಗಳಿಗೆ ಜೀಪುಗಳ ಮೂಲಕ ವಿತರಿಸಲಾಗಿದೆ. ಶುದ್ಧ ಕುಡಿಯುವ ನೀರನ್ನು ಸಹ ಒದಗಿಸಲಾಗಿದೆ.

ರಾಜ್ಯ ಸರ್ಕಾರವು ಪರಿಹಾರ ಮತ್ತು ಪುನರ್ವಸತಿಗಾಗಿ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 49 ಕೋಟಿ ರೂ. ಹಾಗೂ ರಾಜ್ಯದ ಅನುದಾನ 200 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದರು. ರಾಜ್ಯದಲ್ಲಿ ಸೆಪ್ಟೆಂಬರ್ 6ರವರೆಗೆ ಒಟ್ಟಾರೆಯಾಗಿ ಸರಾಸರಿ ವಾಡಿಕೆ ಮಳೆಯಾಗಿದ್ದರೂ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದ್ದರೆ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

30 ಜಿಲ್ಲೆಗಳಲ್ಲಿ 4 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು, 10 ಜಿಲ್ಲೆಗಳಲ್ಲಿ ವಾಡಿಕೆ ಮಳೆ ಹಾಗೂ 16 ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಂಡುಬಂದಿದೆ.176 ತಾಲೂಕುಗಳ ಪೈಕಿ 23 ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು, 64 ತಾಲೂಕುಗಳಲ್ಲಿ ವಾಡಿಕೆ ಮಳೆ ಹಾಗೂ 89 ತಾಲೂಕುಗಳಲ್ಲಿ ಮಳೆಯ ಕೊರತೆ ಕಂಡುಬಂದಿದೆ.

ಸೆಪ್ಟೆಂಬರ್ 2 ರ ವರೆಗೆ 104 ತಾಲೂಕುಗಳಲ್ಲಿ ಸತತ 3 ವಾರಗಳ ಕಾಲ ಒಣ ಹವೆ ಕಂಡುಬಂದಿದೆ. ಮಳೆ ಕೊರತೆ ಹಾಗೂ ಸತತ 3 ವಾರಗಳ ಒಣ ಹವೆ ಪರಿಸ್ಥಿತಿ ಈ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಅಂದಾಜಿಸಲು ಅರ್ಹತೆ ಪಡೆದುಕೊಂಡಿವೆ. ಬರ ಪರಿಸ್ಥಿತಿಯ ಪರಿಣಾಮವನ್ನು ಅಳೆಯಲು ವಿವಿಧ ಮಾನದಂಡಗಳಾದ ಬಿತ್ತನೆ ಪ್ರದೇಶ, ತೇವಾಂಶ ಪ್ರಮಾಣ ಮತ್ತು ಇತರ ಅಂಶಗಳ ಅಧ್ಯಯನ ನಡೆಸಲಾಗುತ್ತಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ ತೇವಾಂಶ ಕೊರತೆಯಿಂದಾಗಿ ಈ ಪ್ರದೇಶಗಳಲ್ಲಿ 15 ಲಕ್ಷ ಹೆಕ್ಟೇರ್‍ಗೂ ಅಧಿಕ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ತೊಂದರೆಯಾಗಿದೆ. ಈವರೆಗೆ ಸಂಭವಿಸಿದ ನಷ್ಟದ ಮೌಲ್ಯ 8000 ಕೋಟಿ ರೂ. ಗಳಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.ಇದಲ್ಲದೆ ಕುಡಿಯುವ ನೀರು, ಮೇವು, ಗ್ರಾಮೀಣ ಉದ್ಯೋಗ ಮತ್ತು ಸಾಮಾಜಿಕ-ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಿದ್ದು, ಆರ್ಥಿಕ ನಷ್ಟವನ್ನು ಅಂದಾಜಿಸಲಾಗುತ್ತಿದೆ.

ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಹೊರ ತಂದಿರುವ ಬರ ನಿರ್ವಹಣೆ ಕೈಪಿಡಿ- 2016ರಲ್ಲಿ ವಿವರಿಸಿರುವಂತೆ 176 ತಾಲೂಕುಗಳಲ್ಲಿ 86 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಇದಲ್ಲದೆ ಸಂಬಂಧಿಸಿದ ಇಲಾಖೆಗಳು ಬರದ ತೀವ್ರತೆಯನ್ನು ಹಾಗೂ ಬೆಳೆ ನಾಶದ ಪ್ರಮಾಣವನ್ನು ಖಾತರಿಪಡಿಸಲು ಸಮೀಕ್ಷೆ ನಡೆಸುತ್ತಿವೆ ಎಂದು ತಿಳಿಸಿದರು.

ನಿಯೋಗದಿಂದ ದೂರ ಉಳಿದ ಬಿಜೆಪಿ ನಾಯಕರು

ಬೆಂಗಳೂರು: ನೆರೆ, ಬರದಿಂದ ರಾಜ್ಯದಲ್ಲಿ ತಲೆದೋರಿ ರುವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು, ಪರಿಹಾರ ಕೋರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ರಾಜ್ಯ ನಿಯೋಗದಿಂದ ಬಿಜೆಪಿ ನಾಯಕರು ದೂರ ಉಳಿದಿ ದ್ದಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿಪಕ್ಷದ ನಾಯಕರಾದ ಬಿ.ಎಸ್. ಯಡಿಯೂರಪ್ಪ ಮತ್ತು ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ರಾಜ್ಯ ವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಿಗೆ ಆಹ್ವಾನ ನೀಡಿದ್ದೆವು.ಪ್ರಧಾನಮಂತ್ರಿ ಕಚೇರಿಗೆ ಎಲ್ಲರ ಹೆಸರನ್ನು ಕೊಟ್ಟಿದ್ದೆವು.

ಯಡಿಯೂರಪ್ಪ, ಕೋಟಾ ಶ್ರೀನಿವಾಸ್ ಪೂಜಾರಿ, ಸಂಸದರಾದ ಪ್ರತಾಪ ಸಿಂಹ, ಶೋಭಾ ಕರಂದ್ಲಾಜೆ, ನವೀನ್ ಕುಮಾರ್ ಕಟೀಲು, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್ ಹೆಗಡೆ ಹೆಸರಿತ್ತು.

ಸಭೆಯಲ್ಲಿ ಬಿಜೆಪಿ ನಾಯಕರಿಗೆ ಕುರ್ಚಿ ಹಾಕಿ ಹೆಸರನ್ನು ನಮೂದಿಸಲಾಗಿತ್ತು. ಆದರೂ ಬಿಜೆಪಿ ನಾಯಕರು ನಿಯೋಗದಲ್ಲಿ ಬಂದಿರಲಿಲ್ಲ. ಯಡಿಯೂರಪ್ಪ ಬೆಂಗಳೂರಿನಲ್ಲಿ ಬ್ಯುಸಿ ಇರುವುದರಿಂದ ಬರಲಿಲ್ಲವೇನೋ ಎಂದು ಮುಖ್ಯಮಂತ್ರಿಯವರು ಕುಟುಕಿದರು.

Translate »