ಭಾರತ್ ಬಂದ್ ದಿನವೇ ಪೆಟ್ರೋಲ್ 36 ಪೈಸೆ, ಡೀಸೆಲ್ 33 ಪೈಸೆ ಹೆಚ್ಚಳ
ಮೈಸೂರು

ಭಾರತ್ ಬಂದ್ ದಿನವೇ ಪೆಟ್ರೋಲ್ 36 ಪೈಸೆ, ಡೀಸೆಲ್ 33 ಪೈಸೆ ಹೆಚ್ಚಳ

September 11, 2018

ಮೈಸೂರು: ತೈಲ ಬೆಲೆ ಏರಿಕೆ ಖಂಡಿಸಿ, ಭಾರತ್ ಬಂದ್ ದಿನದಂದೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ.

ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ಯಶಸ್ವಿಯಾಗಿದೆ. ಆದರೆ ಬಂದ್ ನಡುವೆಯೇ ಪೆಟ್ರೋಲ್ ಬೆಲೆಯಲ್ಲಿ 36 ಪೈಸೆ ಹಾಗೂ ಡೀಸೆಲ್‍ನಲ್ಲಿ 33 ಪೈಸೆ ಹೆಚ್ಚಳವಾಗಿದೆ. ಭಾನುವಾರ ಮೈಸೂರಿ ನಲ್ಲಿ ಲೀಟರ್ ಪೆಟ್ರೋಲ್‍ಗೆ 82.75 ರೂ. ಇತ್ತು. ಇಂದು 83.11 ರೂ.ಗೆ ಏರಿಕೆಯಾಗಿದೆ. ಹಾಗೆಯೇ ನಿನ್ನೆ 74.62 ರೂ. ಇದ್ದ ಡೀಸೆಲ್ ಬೆಲೆ, ಇಂದು 74.95 ರೂ.ಗೆ ಹೆಚ್ಚಳವಾಗಿದೆ. ಕರ್ನಾಟಕ ಸೇರಿದಂತೆ ದೇಶದಾದ್ಯಂತ ತೈಲ ಬೆಲೆ ಏರಿಕೆಯನ್ನು ಖಂಡಿಸಿ, ಬಂದ್ ಆಚರಿಸಿ, ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಲಾಯಿತು.

ಆದರೆ ಬಂದ್ ಬಿಸಿಯ ನಡುವೆಯೇ ಬೆಲೆ ಏರಿಕೆ ಬರೆ ಬಿದ್ದಿದೆ. ಅಂತರರಾಷ್ಟ್ರೀಯ ತೈಲ ಮಾರು ಕಟ್ಟೆ ಆಧಾರಿತವಾಗಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಯವಾಗುತ್ತಿದೆ ಎಂಬುದು ಕೇಂದ್ರದ ವಾದ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿದ್ದರೂ ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡು ತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷಗಳು ಪ್ರತಿಪಾದಿಸುತ್ತಿವೆ. ಕಾರಣವೇನಿದ್ದರೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಕಂಗೆಟ್ಟಿದ್ದಾರೆ. ರಾಜಕೀಯ ಪಕ್ಷಗಳ ವಿಭಿನ್ನ ಪ್ರತಿಪಾದನೆ ಯಿಂದ ಮತ್ತಷ್ಟು ಗೊಂದಲಕ್ಕೆ ಸಿಲುಕಿದ್ದಾರೆ. ರಾಜಯಾರಾಗಿದ್ದರೂ ನಾವು ರಾಗಿ ಬೀಸುವುದು ತಪ್ಪುವುದಿಲ್ಲ ಎಂಬ ನಾಣ್ಣುಡಿಯಂತೆ ಯಾವುದೇ ಸರ್ಕಾರವಿದ್ದರೂ ಜನ ಸಾಮಾನ್ಯರಿಗೆ ಬರೆ ಹಾಕುವುದು ನಿಲ್ಲುವುದಿಲ್ಲ ಎಂಬಂತಾಗಿದೆ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿ ರಾಜಕೀಯ ಹಿತಾಸಕ್ತಿ ತೋರದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂಬುದು ನೊಂದ ಜನತೆಯ ಮಾತಾಗಿದೆ.

Translate »