ಮಧ್ಯಾಹ್ನದವರೆಗೆ ಮೈಸೂರು ಹೃದಯ ಭಾಗ ಭಾಗಶಃ ಬಂದ್
ಮೈಸೂರು

ಮಧ್ಯಾಹ್ನದವರೆಗೆ ಮೈಸೂರು ಹೃದಯ ಭಾಗ ಭಾಗಶಃ ಬಂದ್

December 9, 2020

ಮೈಸೂರು, ಡಿ.8(ಪಿಎಂ)- ಕೇಂದ್ರ ಸರ್ಕಾರ ಜಾರಿಗೊಳಿಸಿ ರುವ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ರೈತ ವಿರೋಧಿ ಯಾಗಿವೆ ಎಂದು ಆರೋಪಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಮಂಗಳವಾರದ ಭಾರತ ಬಂದ್‍ಗೆ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತಲ್ಲದೆ, ಮೈಸೂರು ನಗರದ ಹೃದಯ ಭಾಗದಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಬಂದ್ ಭಾಗಶಃ ಯಶಸ್ವಿಯಾಗಿದೆ.

ನಗರದ ಕೇಂದ್ರ ಭಾಗವಾದ ಕೆಆರ್ ವೃತ್ತ, ಜಯಚಾಮ ರಾಜ ಒಡೆಯರ್ ವೃತ್ತ, ದೊಡ್ಡ ಗಡಿಯಾರ ಹಾಗೂ ಚಿಕ್ಕ ಗಡಿಯಾರದಲ್ಲಿ ಮಧ್ಯಾಹ್ನ 12ರವರೆಗೆ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಡಗಲಪುರ ನಾಗೇಂದ್ರ ಬಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದವು. ಇದಲ್ಲದೆ, ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಆಮ್ ಆದ್ಮಿ ಪಕ್ಷ, ದಲಿತ ಸಂಘರ್ಷ ಸಮಿತಿ ಮುಖಂಡರು ಪಾಲ್ಗೊಂ ಡರೆ, ಕಾಂಗ್ರೆಸ್‍ನಿಂದಲೂ ನಗರದ ವಿವಿಧೆಡೆ ಪ್ರತಿಭಟನೆ ನಡೆಸ ಲಾಯಿತು. ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಸುಮಾರು 6.30ಕ್ಕೆ ಬಡಗಲಪುರ ನಾಗೇಂದ್ರ ಬಣದ ರೈತ ಸಂಘದೊಂದಿಗೆ ಪ್ರಗತಿಪರ ಹಾಗೂ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ಆರಂಭಿಸಿದವು. ಈ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡು ವಿವಿಧ ಸ್ಥಳಗಳಿಗೆ ಪ್ರಯಾಣಿ ಸಲು ಕೇಂದ್ರೀಯ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿ ಕರು ಕೆಲಕಾಲ ನಿಲ್ದಾಣದಲ್ಲಿ ಕಾದು ಕುಳಿತುಕೊಳ್ಳಬೇಕಾಯಿತು.

ಬೆÀಳಗ್ಗೆ 9ರವರೆಗೆ ಕೇಂದ್ರೀಯ ಬಸ್ ನಿಲ್ದಾಣದ 2 ದ್ವಾರ ಗಳನ್ನು ಬಂದ್ ಮಾಡಿದ್ದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ದರು. ಬಳಿಕ ಇಲ್ಲಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ದೇವರಾಜ ಮಾರುಕಟ್ಟೆ ಬಳಿಕ ಚಿಕ್ಕ ಗಡಿಯಾರ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಈ ನಡುವೆ ಮಾರ್ಗ ಮಧ್ಯೆ ತೆರೆದಿದ್ದ ಅಂಗಡಿ-ಮುಂಗಟ್ಟುಗಳನ್ನು ಪ್ರತಿಭಟನಾಕಾರರು ಮುಚ್ಚಿಸಿದರು. ಇರ್ವಿನ್ ರಸ್ತೆ, ಅಶೋಕ ರಸ್ತೆ, ದೊಡ್ಡ ಗಡಿಯಾರ, ಗಾಂಧಿ ಚೌಕ, ಸಯ್ಯಾಜಿರಾವ್ ರಸ್ತೆ ಮಾರ್ಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ದೇವರಾಜ ಮಾರುಕಟ್ಟೆಯಲ್ಲಿ ತೆರೆದಿದ್ದ ಕೆಲ ಮಳಿಗೆ ಗಳನ್ನು ಮುಚ್ಚಿಸಲಾಯಿತು. ಈ ವೇಳೆ ಮಾರು ಕಟ್ಟೆಯ ಚಿಕ್ಕ ಗಡಿಯಾರ ದಿಕ್ಕಿರುವ ಮುಖ್ಯ ದ್ವಾರವನ್ನೇ ಮುಚ್ಚ ಲಾಯಿತು. ಬಳಿಕ ಚಿಕ್ಕ ಗಡಿಯಾರ ಆವರಣದಲ್ಲಿ ಜಮಾಯಿಸಿ ಪ್ರತಿಭಟನಾ ಸಭೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಹಿರಿಯ ಸಮಾಜವಾದಿ ಪ.ಮಲ್ಲೇಶ್ ಮಾತನಾಡಿ, ದೇಶದಲ್ಲಿ ರೈತರು ಸೇರಿದಂತೆ ಸಾಮಾನ್ಯ ಜನತೆ ನೆಮ್ಮದಿಯಿಂದ ಜೀವನ ಮಾಡುವಂತಹ ವಾತಾವರಣ ಇಲ್ಲವಾಗುತ್ತಿದೆ. ಇದೇ ಕಾರಣಕ್ಕೆ ಬಿಜೆಪಿಗೆ ಅಧಿಕಾರ ಸಿಗಬಾರದೆಂದು ನಾವು ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದೆವು. ಈ ಹಿಂದೆ ಜನಸಂಘ ಅಥವಾ ಬಿಜೆಪಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಇಬ್ಬರು ಆಯ್ಕೆಯಾದರೆ ಅದೇ ಹೆಚ್ಚು. ರಾಜ್ಯದ ವಿಧಾನಸಭಾ ಚುನಾವಣೆಯಲ್ಲೂ ಒಬ್ಬರು ಆಯ್ಕೆಗೊಳ್ಳುವುದು ಅಪರೂಪವಾಗಿತ್ತು. ಆದರೆ ಇಂದು ಜನ ಅವರಿಗೆ ಮತ ನೀಡಿದ್ದರಿಂದ ಇಂದು ಅವರೇ ಆಳ್ವಿಕೆ ಮಾಡುತ್ತಿದ್ದಾರೆ ಎಂದರು.

ವಿದ್ಯಾವಂತರಾದರೂ ಉದ್ಯೋಗವಿಲ್ಲದೇ ಯುವ ಜನತೆ ಸಂಕಷ್ಟದಲ್ಲಿದೆ. ಇಂತಹ ಸ್ಥಿತಿಯನ್ನು ಸರ್ಕಾರ ತಂದಿಟ್ಟಿದೆ. ಈ ಸರ್ಕಾರ ತಮ್ಮ ಸುತ್ತಮುತ್ತಲಿರುವ ಹಾಗೂ ಅಧಿಕಾರ ಉಳಿಸಿಕೊಳ್ಳಲು ಅಗತ್ಯ ಸಹಾಯ ಮಾಡುವಂತಹ ಜನಗಳನ್ನು ಓಲೈಸಿಕೊಂಡು ಆಡಳಿತ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಗೆ ಕಾಣುವುದು ಕೇವಲ ಕಾರ್ಪೊ ರೇಟ್ ವಲಯ ಮಾತ್ರವೇ. ಇವರು ನೆರವು ನೀಡುವುದು ಈ ವಲಯಕ್ಕೆ ಮಾತ್ರ. ಲಕ್ಷಾಂತರ ರೈತರು ಹೋರಾಟ ಮಾಡುತ್ತಿದ್ದರೂ ಸ್ಪಂದಿಸುವ ಸೌಜನ್ಯವನ್ನು ಪ್ರಧಾನಿ ನರೇಂದ್ರ ಮೋದಿ ತೋರಿಲ್ಲ ಎಂದು ಟೀಕಿಸಿದರು. ಬಳಿಕ ಇಲ್ಲಿಂದ ಮತ್ತೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ, ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ಮೇಟ್ರೋಪೋಲ್ ವೃತ್ತ, ಹುಣಸೂರು ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ, ಕ್ರಾಂತಿಗೀತೆಗಳನ್ನು ಹಾಡುವ ಮೂಲಕ ಕೆಲಕಾಲ ಪ್ರತಿಭಟನೆ ನಡೆಸಿ, ಅಂತ್ಯಗೊಳಿಸಲಾಯಿತು. ಹಿರಿಯ ಸಾಹಿತಿ ದೇವನೂರು ಮಹಾದೇವ, ರೈತ ಸಂಘದ ಮುಖಂಡರಾದ ಹೊಸಕೋಟೆ ಬಸವರಾಜು, ಪ್ರಸನ್ನಗೌಡ, ಉಗ್ರನರಸಿಂಹೇಗೌಡ, ಮರಂಕಯ್ಯ, ಮುಖಂಡರಾದ ಅಭಿರುಚಿ ಗಣೇಶ್, ಪುನೀತ್, ಗೋಪಾಲಕೃಷ್ಣ, ಕಾರ್ಮಿಕ ಮುಖಂಡರಾದ ಹೆಚ್.ಆರ್.ಶೇಷಾದ್ರಿ, ಜಯರಾಮ್, ಜಗದೀಶ್ ಸೂರ್ಯ, ಚಂದ್ರಶೇಖರ ಮೇಟಿ, ಮುದ್ದುಕೃಷ್ಣ, ವಿವಿಧ ಮಹಿಳಾ ಸಂಘ ಟನೆಗಳ ಮುಖಂಡರಾದ ಎಂ.ಉಮಾದೇವಿ, ಪಿ.ಎಸ್.ಸಂಧ್ಯಾ, ಜಿ.ಎಸ್.ಸೀಮಾ, ರೈತ ಕೃಷಿ ಕಾರ್ಮಿಕರ ಸಂಘದ (ಆರ್‍ಕೆಎಸ್) ಬಸವರಾಜು ಮತ್ತಿತರರು ಪಾಲ್ಗೊಂಡಿದ್ದರು.

Translate »