ನಿರೀಕ್ಷಿತ ಮಟ್ಟದಲ್ಲಿ ಬಂದ್‍ಗಿಲ್ಲ ಬೆಂಬಲ
ಮೈಸೂರು

ನಿರೀಕ್ಷಿತ ಮಟ್ಟದಲ್ಲಿ ಬಂದ್‍ಗಿಲ್ಲ ಬೆಂಬಲ

December 9, 2020

ಬೆಂಗಳೂರು, ಡಿ.8(ಕೆಎಂಶಿ)-ಕೃಷಿಗೆ ಮಾರಕ ವಾಗುವ ಕಾನೂನುಗಳನ್ನು ಹಿಂದಕ್ಕೆ ಪಡೆ ಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾ ರದ ವಿರುದ್ಧ ಭಾರತ್ ಬಂದ್ ಬೆಂಬಲಿಸಿ ರಾಜ್ಯದಲ್ಲೂ ರೈತರು ಬೀದಿಗಿಳಿದರಾದರೂ ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ.

ಅನ್ನ ಕೊಡುವ ರೈತನ ಕೂಗಿಗೆ ಸಾರ್ವ ಜನಿಕರು, ಸಂಘ ಸಂಸ್ಥೆಗಳು, ವಾಣಿಜ್ಯೋ ದ್ಯಮಗಳು ಹೆಚ್ಚಿನ ಪ್ರಮಾಣದಲ್ಲಿ ಕೈಜೋಡಿ ಸಲಿಲ್ಲ. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ರೈತರ ಹೋರಾಟಕ್ಕೆ ಬೆಂಬಲ ನೀಡಿದರೂ ರಾಜ್ಯದ ಕೆಲವು ವೃತ್ತಗಳಲ್ಲಿ ಮುಖಂಡರ, ನಾಯಕರ ಭಾಷಣಕ್ಕೆ ಸೀಮಿತಗೊಂಡಿತು. ವಿಧಾನಸಭೆಯಲ್ಲಿ ಪ್ರಶ್ನೋ ತ್ತರ ಅವಧಿ ಮುಗಿದ ನಂತರ ಜೆಡಿಎಸ್ ಶಾಸಕರು ರೈತರಿಗೆ ಬೆಂಬಲ ಘೋಷಿಸಿ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲು ಸದನದಿಂದ ಹೊರ ನಡೆದರು.

ಬಂದ್ ವಿಫಲಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸಿದ ಪ್ರಯುಕ್ತ ಯಶಸ್ವಿಯಾಗಿದೆ. ಇದರಿಂದ ರೈತರು ಮತ್ತು ಕೆಲವು ಸಂಘ-ಸಂಸ್ಥೆಗಳು ಕೇವಲ ರಸ್ತೆ ರೋಕೋ, ಮೆರವಣಿಗೆ ಮತ್ತು ಎರಡು ಸರ್ಕಾರಗಳ ವಿರುದ್ಧ ಸಭೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರಗಳ ವಿರುದ್ಧ ಹರಿಹಾಯ್ದರು. ರೈತರ ಹೋರಾ ಟಕ್ಕೆ ಬೆಂಬಲ ನೀಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು, ಆ ಪಕ್ಷಗಳ ನಾಯಕರು ವಿಧಾನಸೌಧ ಮತ್ತು
ವಿಕಾಸಸೌಧದ ನಡುವೆ ಇರುವ ಗಾಂಧಿ ಪ್ರತಿಮೆ ಬಳಿ ಕೆಲ ಕಾಲ ಧರಣಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಮಾತ್ರ ನಗರದ ಟೌನ್‍ಹಾಲ್ ಬಳಿ ರೈತರು ಹಾಗೂ ಸಂಘ-ಸಂಸ್ಥೆಗಳು ನಡೆಸಿದ ರ್ಯಾಲಿಯಲ್ಲಿ ಭಾಗವಹಿಸಿ ಸರ್ಕಾರದ ಕೃಷಿ ನೀತಿಯನ್ನು ಖಂಡಿಸಿದರು.

ವಿಧಾನ ಮಂಡಲದ ಅಧಿವೇಶನ ನಡೆಯುತ್ತಿರುವುದರಿಂದ ಇನ್ನುಳಿದವರು ಕೇವಲ ಪ್ರತಿಮೆ ಮುಂದೆ ಕುಳಿತು ಅಧಿವೇಶನಕ್ಕೆ ಹಿಂದಿರುಗಿದರು. ರಾಜ್ಯಾದ್ಯಂತ ರೈತ ಸಂಘಟನೆಗಳು, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ವ್ಯಕ್ತಪಡಿಸಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಎಪಿಎಂಸಿ ಹಾಗೂ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದವು.

ಎಪಿಎಂಸಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಇರುವುದು ನಿಜ. ಅದನ್ನು ಹತ್ತಿಕ್ಕಲು ಸೂಕ್ತ ಕಾನೂನು ತನ್ನಿ. ಇದನ್ನೇ ನೆಪವಾಗಿಟ್ಟುಕೊಂಡು ಇಡೀ ಕೃಷಿಕರನ್ನೇ ಅಂಬಾನಿ ಮತ್ತು ಅದಾನಿ ಅವರ ಕಾಲಿನಡಿಗೆ ಸಿಲುಕಿಸಬೇಡಿ. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಬೇಕಾದರೆ, ಬೇರೆ ಮಾರ್ಗ ಹುಡುಕಿ. ಅವರಿಗೋಸ್ಕರ ಕೃಷಿ ವ್ಯವಸ್ಥೆಯ ಕತ್ತನ್ನೇ ಹಿಸುಕಬೇಡಿ. ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರ ಭೂಮಿಯನ್ನು ಕಸಿಯಲು ಹೊರಟಿದ್ದೀರಿ. ಅನ್ನದಾತನಿಗೆ ನೀವು ಅನುಕೂಲ ಮಾಡಿಕೊಡಬೇಕು ಎಂಬುದೇ ಆಗಿದ್ದರೆ, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಮತ್ತು ಕಾಲಾನುಕಾಲಕ್ಕೆ ಬಿತ್ತನೆ ಬೀಜ, ಗೊಬ್ಬರ, ಔಷಧಿ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ. ಇದಕ್ಕೆ ಅಗತ್ಯವಾದ ಕಾನೂನು ತನ್ನಿ. ಯಾರದೋ ಲಾಭಕ್ಕಾಗಿ ಕೃಷಿ ವ್ಯವಸ್ಥೆಯನ್ನೇ ಬುಡಮೇಲು ಮಾಡಬೇಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಲ್ಲದೆ, ನಮ್ಮ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ, ಮುಂದುವರೆಯತ್ತದೆ ಎಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.

Translate »