ರಾಜ್ಯಾದ್ಯಂತ ‘ಭಾರತ್ ಬಂದ್’ ಯಶಸ್ವಿ
ಮೈಸೂರು

ರಾಜ್ಯಾದ್ಯಂತ ‘ಭಾರತ್ ಬಂದ್’ ಯಶಸ್ವಿ

September 11, 2018

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‍ಗೆ ರಾಜ್ಯದ ಜನತೆ ಪೂರ್ಣವಾಗಿ ಬೆಂಬಲಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಹೊರತುಪಡಿಸಿದರೆ, ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆ ಇಲ್ಲದೆ ಸಂಜೆಯವರೆಗೂ, ಬಂದ್ ಯಶಸ್ವಿಯಾಯಿತು. ಕೆಲವೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೈಕೈ ಮಿಲಾಯಿಸುವ ಹಂತ ತಲುಪಿದೆ. ಇದು ಉಡುಪಿ ಜಿಲ್ಲೆಯಲ್ಲಿ ತಾರಕಕ್ಕೇರಿ ಪರಿಸ್ಥಿತಿ ತಿಳಿಗೊಳಿಸಲು ಸ್ಥಳೀಯ ಅಧಿಕಾರಿಗಳು ನಾಳೆಯವರೆಗೂ ನಿಷೇಧಾಜ್ಞೆ ಹೇರಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಕರೆ ನೀಡಿದ್ದ ಬಂದ್‍ಗೆ ಮೈತ್ರಿ ಸರ್ಕಾರದಲ್ಲಿ ಪಾಲುದಾರರಾಗಿ ರುವ ಜೆಡಿಎಸ್ ಕೂಡ ಬೆಂಬಲ ವ್ಯಕ್ತಪಡಿಸಿದ್ದರಿಂದ ಶಾಲಾ ಕಾಲೇಜುಗಳಿಗೆ ರಜೆ, ಸಾರಿಗೆ ಸಂಸ್ಥೆ ಬಸ್‍ಗಳು ರಸ್ತೆಗಿಳಿಯಲಿಲ್ಲ.

ವಾಣಿಜ್ಯ ವಹಿವಾಟು, ಹೋಟೆಲ್ ಉದ್ದಿಮೆ, ಸಿನಿಮಾ ಹಾಗೂ ಕೈಗಾರಿಕೆಗಳು ಬಂದ್‍ಗೆ ಬೆಂಬಲ ಸೂಚಿಸಿದ್ದವು.
ಸಾರಿಗೆ ವಾಹನಗಳು ರಸ್ತೆಗಿಳಿಯಲಿಲ್ಲ. ಮಧ್ಯಾಹ್ನದ ನಂತರ ಎಂದಿನಂತೆ ಸಂಚಾರ ಆರಂಭಗೊಂಡು ಸಂಜೆ ವೇಳೆಗೆ ಅಂಗಡಿ ಮುಂಗಟ್ಟುಗಳು ತಮ್ಮ ವ್ಯಾಪಾರ ವ್ಯವಹಾರ ಆರಂಭಿಸಿದವು. ಬಂದ್‍ಗೆ ಎಡಪಂಥೀಯ ಪಕ್ಷಗಳು ಮತ್ತು ಕನ್ನಡಪರ ಸಂಘಟನೆಗಳು, ಬೆಂಬಲ ವ್ಯಕ್ತಪಡಿಸಿದ್ದಲ್ಲದೆ, ರಾಜ್ಯಾದ್ಯಂತ ಮೆರವಣಿಗೆ ಮತ್ತು ಪ್ರತಿಭಟನೆ ನಡೆಸಿ, ಕೇಂದ್ರದ ನೀತಿಯನ್ನು ಖಂಡಿಸಿದವು. ಪ್ರಧಾನಿ ನರೇಂದ್ರ ಮೋದಿ ಅವರು, ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ವಿಚಾರದಲ್ಲಿ ಮಗುಮ್ಮಾಗಿ ವರ್ತಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಘಟನೆಗಳ ನಾಯಕರು ಕೆಲವೆಡೆ, ಮೋದಿ ಅವರ ಪ್ರತಿಕೃತಿ ದಹನ ಮಾಡಿ, ತಮ್ಮ ಕೋಪ ತೀರಿಸಿಕೊಂಡರು. ಏತನ್ಮಧ್ಯೆ ರಾಜಧಾನಿಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು
ಪರದಾಡುವಂತಾಗಿದೆ. ಅಷ್ಟೇ ಅಲ್ಲ ಆಟೋ, ಓಲಾ, ಉಬರ್ ಕಾರು ಚಾಲಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದಾಗಿ ಪ್ರಯಾಣಿಕರು ಆರೋಪಿಸಿದ್ದಾರೆ.

ಬೆಳಿಗ್ಗೆ 8ಗಂಟೆವರೆಗೆ ಮೆಟ್ರೋ ಸಂಚಾರ ಇದ್ದ ಪರಿಣಾಮ ಜನರು ಮುಗಿಬಿದ್ದಿದ್ದರು. ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಮೆಜೆಸ್ಟಿಕ್ ಬಿಕೋ ಎನ್ನುತ್ತಿತ್ತು. ಮೆಜೆಸ್ಟಿಕ್‍ನ ಇಂದಿರಾ ಕ್ಯಾಂಟೀನ್ ತೆರೆದಿದ್ದರಿಂದ ಜನರು ತಿಂಡಿಗಾಗಿ ಮುಗಿಬಿದ್ದಿದ್ದರು.

ಮಂಡ್ಯ ಜಿಲ್ಲೆಯಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ
ಮಂಡ್ಯ: ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಸೋಮವಾರ ಕರೆ ನೀಡಿದ ‘ಭಾರತ್ ಬಂದ್’ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಲ್ಲೆಯ ಮಂಡ್ಯ, ನಾಗಮಂಗಲ, ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣಗಳಲ್ಲಿ ಭಾರತ್ ಬಂದ್‍ಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಮಂಡ್ಯ ನಗರದ ಸಂಜಯ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಆತ್ಮಾ ನಂದ ಸೈಕಲ್ ತುಳಿಯುವ
ಮೂಲಕ ವಿನೂತನ ಪ್ರತಿಭಟನೆ ದಾಖಲಿಸಿದರು.

ಉಳಿದಂತೆ ಜಿಲ್ಲಾದ್ಯಂತ ಅಂಗಡಿ-ಮುಂಗಟ್ಟು, ಬೇಕರಿ, ಹೊಟೇಲ್‍ಗಳ ಮಾಲೀಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಕೆಲವಡೆ ಆಟೋ ಸಂಚಾರ ಸಾಮಾನ್ಯವಾಗಿತ್ತು. ಉಳಿದಂತೆ ಮೆಡಿಕಲ್, ಆಸ್ಪತ್ರೆ ಸೇವೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಸಾರಿಗೆ ಬಸ್ ಸಂಚಾರ ಮಾತ್ರ ಜಿಲ್ಲಾದ್ಯಂತ ಬೆಳಿಗ್ಗೆ 6 ರಿಂದ ಸಂಜೆ 6ಗಂಟೆಯವರೆಗೆ ಸ್ಥಗಿತವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಬಾದಾಮಿ ಹಾಲು ಹಂಚಿದ ಬಿಜೆಪಿ ಅಧ್ಯಕ್ಷ: ನಗರದ ಬನ್ನೂರು ರಸ್ತೆಯ ಚಾಮುಂಡೇಶ್ವರಿ ದೇವಸ್ಥಾನ ಸಮೀಪವಿರುವ ಬೇಕರಿ ಪಾಯಿಂಟ್‍ನ ಮಾಲೀಕ ಹಾಗೂ ಬಿಜೆಪಿ ನಗರ ಘಟಕದ ಅಧ್ಯಕ್ಷ ಅರವಿಂದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಸಾರ್ವಜನಿಕರಿಗೆ ಬಾದಾಮಿ ಹಾಲು ವಿತರಿಸಿದರು.

ಚಾಮರಾಜನಗರದಲ್ಲಿ ಬಂದ್ ಯಶಸ್ವಿ
ಚಾಮರಾಜನಗರ: ಜಿಲ್ಲೆಯಾದ್ಯಂತ ಭಾರತ್ ಬಂದ್ ಯಶಸ್ವಿಯಾಗಿದೆ. ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಹಾಗೂ ಹನೂರಿನಲ್ಲಿ ಬೆಳಿಗ್ಗೆಯಿಂದಲೇ ವರ್ತಕರು, ಆಟೋ ಚಾಲಕರು, ಬಸ್ ಹಾಗೂ ಚಿತ್ರ ಮಂದಿರ ಬಂದ್‍ಗೆ ಬೆಂಬಲ ಸೂಚಿಸಿದವು. ಕಾಂಗ್ರೆಸ್ ಕರೆ ನೀಡಿದ ಬಂದ್‍ಗೆ ಜೆಡಿಎಸ್, ಬಿಎಸ್‍ಪಿ ಹಾಗೂ ಎಸ್‍ಡಿಪಿಐ ಕಾರ್ಯ ಕರ್ತರು ಬೆಂಬಲ ಸೂಚಿಸಿದರು. ಎಲ್ಲಾ ತಾಲೂಕು ಕೇಂದ್ರಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಿತು. ಜಿಲ್ಲಾ ಕೇಂದ್ರದಲ್ಲಿ ಗ್ಯಾಸ್ ಸಿಲಿಂಡರ್, ಬೈಕ್ ಗಳನ್ನು ಎತ್ತಿನಗಾಡಿಯಲ್ಲಿಟ್ಟು ಮೆರವಣಿಗೆ ನಡೆಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಷ್ಪಾ ಅಮರ್‍ನಾಥ ಅವರು ಸೌದೆÉ ಒಲೆ ಹೊತ್ತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಾಹನ ಸಂಚಾರ ಸ್ಥಗಿತವಾಗಿದ್ದರಿಂದ ಹೊರ ರಾಜ್ಯ ಸೇರಿದಂತೆ ಗ್ರಾಮೀಣ ಪ್ರದೇಶದ ಪ್ರಯಾಣಿಕರು ಪರದಾಡುವಂತಾಯಿತು. ಆಸ್ಪತ್ರೆ, ಔಷಧಿ ಅಂಗಡಿಗಳು ಹಾಗೂ ಪೆಟ್ರೋಲ್ ಬಂಕ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಬಿಜೆಪಿಯಿಂದ ಗುಲಾಬಿ: ನಗರದಲ್ಲಿ ತೆರೆದಿದ್ದ ಕೆಲವು ಅಂಗಡಿ-ಮುಂಗಟ್ಟುಗಳಿಗೆ ಬಿಜೆಪಿ ಕಾರ್ಯಕರ್ತರು ತೆರಳಿ ಅವುಗಳ ಮಾಲೀಕರಿಗೆ ಗುಲಾಬಿ ನೀಡಿ, ಅಭಿನಂದಿಸಿದರು.

ಹಾಸನದಲ್ಲಿ ಬಂದ್ ಪ್ರತಿಭಟನೆಗೆ ಸೀಮಿತ
ಹಾಸನ:  ಜಿಲ್ಲಾದ್ಯಂತ ಭಾರತ್ ಬಂದ್ ಕೇವಲ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆಗೆ ಸೀಮಿತವಾಯಿತು. ಹಾಸನ, ಆಲೂರು, ಅರಸೀಕೆರೆ, ಬೇಲೂರು, ಸಕಲೇಶಪುರ, ಅರಕಲಗೂಡು, ಶ್ರವಣಬೆಳ ಗೊಳ, ರಾಮನಾಥಪುರ, ಹೊಳೆನರಸೀಪುರ, ಚನ್ನ ರಾಯಪಟ್ಟಣಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಆದರೆ, ಬಂದ್ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ್ದ ಕೆಲವು ಅಂಗಡಿ, ಮುಂಗಟ್ಟುಗಳು ಮಧ್ಯಾಹ್ನ 12 ಗಂಟೆಯ ನಂತರ ತೆರೆದವು. ಉಳಿದಂತೆ ಆಟೋ, ರೈಲು ಸಂಚಾರ, ಹೊಟೇಲ್, ಬ್ಯಾಂಕ್, ಪೆಟ್ರೋಲ್ ಬಂಕ್, ಮೆಡಿಕಲ್ ಸ್ಟೋರ್, ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಿಸಿದವು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Translate »