ಮೈಸೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಇಂದು ಕರೆ ನೀಡಿದ್ದ ‘ಭಾರತ್ ಬಂದ್’ಗೆ ಮೈಸೂರು ನಗರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರು ನಗರದಾದ್ಯಂತ ಅಲ್ಲಲ್ಲಿ ಭಾರೀ ಪ್ರತಿಭಟನೆ ಮಾಡಿ ಅಂಗಡಿ ಮುಂಗಟ್ಟು, ಕೆಲ ಕಚೇರಿಗಳನ್ನು ಬಲವಂತವಾಗಿ ಮುಚ್ಚಿ ಸಿದ್ದರಿಂದ ಮೈಸೂರಿನ ಹೃದಯಭಾಗದಲ್ಲಿನ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಇಂದು ಮಧ್ಯಾಹ್ನದವರೆಗೆ ಸಂಪೂರ್ಣ ಬಂದ್ ಆಗಿತ್ತು. ಕಾಂಗ್ರೆಸ್‍ಗೆ ಜೆಡಿಎಸ್, ಬಿಎಸ್‍ಪಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಮೈಸೂರಲ್ಲಿ ಬಂದ್ ಸಂಪೂರ್ಣವಾಗಿದ್ದು, ಪರಿಣಾಮ ಸಾರಿಗೆ ಸಂಪರ್ಕ, ಶಾಲಾ-ಕಾಲೇಜುಗಳು, ಚಿತ್ರ ಪ್ರದರ್ಶನ, ಅಂಗಡಿ, ಮಾರುಕಟ್ಟೆ ವಹಿವಾಟುಗಳು ಸ್ಥಗಿತ ಗೊಂಡು ಜನ ಜೀವನ ಅಸ್ತವ್ಯಸ್ತವಾಗಿತ್ತು. ಹೋಟೆಲ್‍ಗಳನ್ನು ಕೆಲವೆಡೆ ಬಲವಂತ ವಾಗಿ ಬಂದ್ ಮಾಡಿಸಲಾಗಿತ್ತು.
ರಸ್ತೆಗಿಳಿಯದ ಬಸ್ಸುಗಳು: ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತೀವ್ರ ಪ್ರತಿಭಟನೆಯಿಂದಾಗಿ ಸಾರ್ವ ಜನಿಕರು ಹಾಗೂ ವಾಹನಗಳ ಸುರಕ್ಷತೆ ದೃಷ್ಟಿಯಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬಸ್ಸುಗಳನ್ನು ರಸ್ತೆಗಿಳಿಸಲೇ ಇಲ್ಲ.
ಗ್ರಾಮಾಂತರ ಬಸ್ ನಿಲ್ದಾಣ ಹಾಗೂ ಸಿಟಿ ಬಸ್ ನಿಲ್ದಾಣದಲ್ಲಿ ಬಸ್ಸುಗಳಿಲ್ಲದೇ ಬಿಕೋ ಎನ್ನುತ್ತಿತ್ತು. ಮಧ್ಯಾಹ್ನ 3.30 ಗಂಟೆ ವರೆಗೂ ಮೈಸೂರಲ್ಲಿ ಸಾರಿಗೆ ಸಂಸ್ಥೆ ಬಸ್ಸುಗಳೇ ಕಾಣಿಸಿಕೊಳ್ಳಲಿಲ್ಲ. ಅದೇ ರೀತಿ ಬೇರೆ ಊರುಗಳಿಗೆ ಹೋಗುವ ಹಾಗೂ ಬರುವ ಗ್ರಾಮಾಂತರ ವಿಭಾಗದ ಬಸ್ಸುಗಳು ಮತ್ತು ಅಂತರರಾಜ್ಯ ಬಸ್ಸುಗಳೂ ತಮ್ಮ ಸೇವೆ ಯನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದವು.
ಖಾಸಗಿ ಬಸ್ಸುಗಳೂ…ಸ್ಥಗಿತ: ಭಾರತ್ ಬಂದ್‍ಗೆ ಖಾಸಗಿ ಬಸ್ ಮಾಲೀಕರ ಸಂಘವೂ ಬೆಂಬಲ ಸೂಚಿಸಿದ್ದರಿಂದ ವಿವಿಧ ತಾಲೂಕು ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸುಗಳೂ ಸ್ಥಗಿತಗೊಂಡಿದ್ದವು.
ಪರದಾಡಿದ ಪ್ರಯಾಣಿಕರು: ಬಂದ್ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ಸುಗಳು ಸೇವೆ ಸ್ಥಗಿತಗೊಳಿಸಿದ್ದರಿಂದ ಬೆಳಿಗ್ಗೆಯಿಂದ ಮಧ್ಯಾಹ್ನ 3.30 ಗಂಟೆವರೆಗೆ ಬೇರೆ ಊರುಗಳು ಮತ್ತು ಮೈಸೂರು ನಗರದ ನಾನಾ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗಿ ಪರಿತಪಿಸುವಂತಾಯಿತು. ಪ್ರಯಾಣಿಕರು ತಮ್ಮ ಸ್ವಂತ ಕಾರು, ರೈಲು, ದ್ವಿಚಕ್ರ ವಾಹನ ಹಾಗೂ ಟ್ಯಾಕ್ಸಿಗಳನ್ನು ಅವಲಂಬಿಸಬೇಕಾಯಿತು.
ಬಲವಂತ ಬಂದ್: ಕಾಂಗ್ರೆಸ್, ಬಿಎಸ್‍ಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಮೈಸೂರಿನ ಹೃದಯಭಾಗದಲ್ಲಿ ಅಂಗಡಿ-ಮುಂಗಟ್ಟು, ಉದ್ದಿಮೆ, ಮಾರುಕಟ್ಟೆ, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಹೋಟೆಲ್, ಚಿತ್ರಮಂದಿರ, ಪೆಟ್ರೋಲ್ ಬಂಕ್‍ಗಳನ್ನು ಬಲವಂತವಾಗಿ ಬಾಗಿಲು ಮುಚ್ಚಿಸಿದರು.
ಬಿಕೋ ಎನ್ನುತ್ತಿದ್ದವು
ಬಂದ್ ಪರಿಣಾಮ ಮೈಸೂರಿನ ಹೃದಯ ಭಾಗವಾದ ಕೆ.ಆರ್.ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಬಂಬೂ ಬಜಾರ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ, ಬಿಎನ್ ರಸ್ತೆ, ಮಕ್ಕಾಜಿ ಚೌಕ, ಡಿ.ದೇವರಾಜ ಅರಸ್ ರಸ್ತೆ, ಧನ್ವಂತರಿ ರಸ್ತೆ, ಶಿವರಾಂಪೇಟೆ ರಸ್ತೆ, ದೇವರಾಜ ಮಾರುಕಟ್ಟೆ, ಕೆ.ಆರ್. ಮಾರ್ಕೆಟ್, ಮಂಡಿ ಮಾರುಕಟ್ಟೆ, ಹಳೇ ಆರ್‍ಎಂಸಿ, ಬಂಡೀ ಪಾಳ್ಯ ಎಪಿಎಂಸಿ ಮಾರುಕಟ್ಟೆಗಳ ಅಂಗಡಿಗಳು ಸಂಪೂರ್ಣ ಮುಚ್ಚಿದ್ದರಿಂದ ಪ್ರಮುಖ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡು ಬಿಕೋ ಎನ್ನುತ್ತಿದ್ದವು.
ಸರ್ಕಾರಿ ಕಚೇರಿಗಳಿಗೂ ಬೀಗ: ಪ್ರತಿಭಟನಾ ನಿರತ ಕೆಲ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕಾಡಾ, ಮುಡಾ, ಪಾಲಿಕೆ, ತಾಲೂಕು ಕಚೇರಿ, ಪಾಲಿಕೆ ವಲಯ ಕಚೇರಿಗಳಿಗೆ ತೆರಳಿ ಘೋಷಣೆಗಳನ್ನು ಕೂಗಿ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಹೊರಗೆ ಕಳಿಸಿ ಬೀಗ ಹಾಕಿಸಿದರು.
ಅವರು ಬರುತ್ತಿದ್ದಂತೆಯೇ ಸಿಬ್ಬಂದಿ ತಮ್ಮ ಮೇಲಧಿಕಾರಿಗಳ ನಿರ್ದೇಶನ ಬರುವ ಮುನ್ನವೇ ಕಚೇರಿಯಿಂದ ಹೊರನಡೆಯುತ್ತಿದ್ದ ದೃಶ್ಯವೂ ಕಂಡು ಬಂದಿತು. ಇದರಿಂದ ಸಾರ್ವಜನಿಕರು ತಮ್ಮ ಕೆಲಸವಾಗದೆ ಹಿಡಿಶಾಪ ಹಾಕುತ್ತಾ ವಾಪಸ್ ತೆರಳುತ್ತಿದ್ದರು.
ನಗರದ ಮಧ್ಯ ಭಾಗದಲ್ಲಿ ಟ್ಯಾಕ್ಸಿಗಳ ಸಂಚಾರ ವಿರಳವಾಗಿತ್ತು. ಚಿತ್ರಮಂದಿರಗಳ ಬೆಳಗಿನ ಪ್ರದರ್ಶನ ಸ್ಥಗಿತಗೊಂಡಿದ್ದವಲ್ಲದೆ, ಕೆಲವು ಪೆಟ್ರೋಲ್ ಬಂಕ್‍ಗಳೂ ಮುಚ್ಚಿದ್ದವು.
ಎಂದಿನಂತಿದ್ದ ಸೇವೆ: ಬಂದ್ ಸಂಪೂರ್ಣವಾದರೂ, ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್, ನಂದಿನಿ ಹಾಲು, ನೀರು ಮಾರಾಟ ಎಂದಿನಂತಿತ್ತು. ಹಲವೆಡೆ ಹೋಟೆಲ್‍ಗಳು ತೆರೆದಿದ್ದವು. ಪೆಟ್ರೋಲ್ ಬಂಕ್‍ಗಳಲ್ಲಿ ಮಾಮೂಲಿನಂತೆ ವಹಿವಾಟು ನಡೆಯಿತು. ಇಂದಿರಾ ಕ್ಯಾಂಟೀನ್, ಅರಮನೆ, ಮೃಗಾಲಯಗಳಿಗೆ ಬಂದ್ ಬಿಸಿ ತಟ್ಟಲಿಲ್ಲ. ಜನಸಾಮಾನ್ಯರ ದ್ವಿಚಕ್ರ ವಾಹನ, ಕಾರುಗಳು ಸಹಜ ರೀತಿ ಸಂಚರಿಸುತ್ತಿದ್ದುದ್ದು ಕಂಡು ಬಂದಿತು.
ಸಹಜ ಸ್ಥಿತಿಯಲ್ಲಿತ್ತು: ಭಾರತ್ ಬಂದ್‍ಗೆ ಮೈಸೂರಿನ ಬಡಾವಣೆಗಳಲ್ಲಿ ಅಷ್ಟೇನು ಪ್ರತಿಕ್ರಿಯೆ ದೊರೆಯಲಿಲ್ಲ. ಹೆಬ್ಬಾಳು, ವಿವಿ ಮೊಹಲ್ಲಾ, ಮೇಟಗಳ್ಳಿ, ಕಾಳಿದಾಸ ರಸ್ತೆ, ಕುವೆಂಪುನಗರ, ರಾಮಕೃಷ್ಣನಗರ, ಜೆ.ಪಿ.ನಗರ, ವಿದ್ಯಾರಣ್ಯಪುರಂ, ಇಟ್ಟಿಗೆಗೂಡು, ಸಿದ್ದಾರ್ಥ ಬಡಾವಣೆ ಸೇರಿದಂತೆ ಅಂಗಡಿ ಮುಂಗಟ್ಟು ತೆರೆದಿದ್ದು, ಆಟೊ ಟ್ಯಾಕ್ಸಿ, ಪೆಟ್ರೋಲ್ ಬಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದ ಕಾರಣ ಅಲ್ಲಿ ಬಂದ್ ಬಿಸಿ ಜನಸಾಮಾನ್ಯರಿಗೆ ತಟ್ಟಲಿಲ್ಲ.
ಕಾಣಿಸಲಿಲ್ಲ ವಿದ್ಯಾರ್ಥಿಗಳು: ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತವೇ ರಜೆ ಘೋಷಿಸಿದ್ದರಿಂದ ಮೈಸೂರು ನಗರದಲ್ಲಿ ವಿದ್ಯಾರ್ಥಿಗಳೇ ಇಂದು ಕಾಣಿಸಿಗಲಿಲ್ಲ. ಸ್ನಾತಕೋತ್ತರ ಪದವಿ ತರಗತಿಗಳಲ್ಲೂ ವಿದ್ಯಾರ್ಥಿಗಳ ಹಾಜರಾತಿ ತೀರಾ ಕಡಿಮೆ ಇತ್ತು ಎಂದು ಪ್ರಾಧ್ಯಾಪಕರು ಮಾತನಾಡಿಕೊಳ್ಳುತ್ತಿದ್ದರು.
ರೈಲು ಸಂಚಾರಕ್ಕಿಲ್ಲ ಅಡ್ಡಿ: ಭಾರತ್ ಬಂದ್‍ಗೆ ಕರೆ ನೀಡಿದ್ದರೂ ರೈಲು ಸಂಚಾರಕ್ಕೆ ಅಡ್ಡಿಯಾಗಲಿಲ್ಲ. ಇಂದು ಬೆಳಿಗ್ಗೆಯಿಂದಲೇ ಮೈಸೂರಿನಿಂದ ವಿವಿಧೆಡೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ರೈಲುಗಳೂ ಎಂದಿನಂತೆ ಸಂಚರಿಸಿದವು. ಪ್ರಯಾಣಿಕರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ರೈಲು ಸೇವೆಯನ್ನು ಅವಲಂಬಿಸಿದ್ದರು.
ಭಾರೀ ಭದ್ರತೆ: ಬಂದ್ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಕಟ್ಟೆಚ್ಚರ ವಹಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಾದ ಎನ್‍ಆರ್ ಮೊಹಲ್ಲಾ, ಕೆಸರೆ, ಉದಯಗಿರಿ, ಶಾಂತಿನಗರ, ಬೀಡಿ ಕಾಲೋನಿ, ಗಾಯತ್ರಿಪುರಂ, ರಾಜೀವ್‍ನಗರಗಳಲ್ಲಿ ಶಸ್ತ್ರ ಸಜ್ಜಿತ ಪೊಲೀಸರನ್ನು ನಿಯೋಜಿಸಿ, ಹಿರಿಯ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ ಮೇಲ್ವಿಚಾರಣೆ ನಡೆಸಿದರು.
ಕೆಲವೆಡೆ ಟಯರ್‍ಗಳಿಗೆ ಬೆಂಕಿ ಹಾಕಿ ಪ್ರತಿಕೃತಿಗಳನ್ನು ಸುಟ್ಟು ಹಾಕಿದ್ದನ್ನು ಹೊರತುಪಡಿಸಿದರೆ, ಉಳಿದಂತೆ ಮೈಸೂರು ನಗರದಾದ್ಯಂತ ಬಂದ್ ಶಾಂತಿಯುತವಾಗಿತ್ತು.
ಪೆಟ್ರೋಲ್ ಸುಂಕ ಕಡಿಮೆ ಮಾಡಲು ಸಾಧ್ಯವೇ ಇಲ್ಲ
ನವದೆಹಲಿ: ಯಾವುದೇ ಕಾರಣಕ್ಕೂ ಪೆಟ್ರೋಲ್ ಮೇಲಿನ ಸುಂಕ ವನ್ನು ಕಡಿಮೆ ಮಾಡಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್ ದರ ಏರಿಕೆ ವಿರೋಧಿಸಿ ಬಂದ್‍ಗೆ ಕರೆ ನೀಡಿದ್ದ ವಿರೋಧ ಪಕ್ಷಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪೆಟ್ರೋಲ್ ಬೆಲೆ
ಏರಿಕೆ,ಇಳಿಕೆ ಕೇಂದ್ರದ ಕೈನಲ್ಲಿ ಇಲ್ಲ. ತೈಲ ಕಂಪನಿಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈಗಾಗಲೇ ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ತೈಲ ಉತ್ಪಾದನಾ ರಾಷ್ಟ್ರಗಳ ಮೇಲೆ ಭಾರತ ಸರ್ಕಾರದ ಹಿಡಿತ ಇರುವುದಿಲ್ಲ. ಕಾಂಗ್ರೆಸ್‍ನಿಂದ ಭಾರತ ಬಂದ್ ನಡೆಸುತ್ತಿರುವ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಬಿಹಾರದಲ್ಲಿ ಪ್ರತಿಭಟನೆ ವೇಳೆ ಆಂಬುಲೆನ್ಸ್‍ನಲ್ಲಿದ್ದ ಮಗು ಸಾವನ್ನಪ್ಪಿದ್ದಕ್ಕೆ ತೀವ್ರವಾಗಿ ಖಂಡಿಸಿದರು. ದೇಶದಲ್ಲಿ ಹಿಂಸಾ ತಾಂಡವ ಹಾಗೂ ಸಾವಿನ ಆಟ ಬಂದ್ ಆಗಬೇಕು. ಜನರಲ್ಲಿ ನೋವು ಇರಬಹುದು. ಆದರೆ ಈ ಬಂದ್‍ಗೆ ಬೆಂಬಲ ನೀಡಿಲ್ಲ. ಜನರ ತೊಂದರೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಜನರ ಜತೆ ಇದೆ ಎಂದು ತಿಳಿಸಿದರು.