ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ 2022ರ ಜೂನ್‍ಗೆ ಪುನರಾರಂಭ ಸಂಭವ
ಮೈಸೂರು

ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ 2022ರ ಜೂನ್‍ಗೆ ಪುನರಾರಂಭ ಸಂಭವ

December 22, 2021

ಮೈಸೂರು, ಡಿ.21(ಎಸ್‍ಬಿಡಿ)- ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ 2022ರ ಜೂನ್ ತಿಂಗಳಿಂದ ಪುನಾ ರಂಭವಾಗುವ ಸಾಧ್ಯತೆ ದಟ್ಟವಾಗಿದೆ. ಸಹಕಾರ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆ ಯಲ್ಲಿ ಬೆಳಗಾವಿ ಸುವರ್ಣಸೌಧದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ, ಕೆ.ಆರ್.ನಗರ ತಾಲೂಕು ಚುಂಚನಕಟ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭ ಪ್ರಕ್ರಿಯೆ ಸಂಬಂಧ ಚರ್ಚಿಸಿ, ಕೆಲ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕಾರ್ಖಾನೆ ಯನ್ನು ಕೂಡಲೇ ಪ್ರಾರಂಭ ಮಾಡುವ ನಿಟ್ಟಿನಲ್ಲಿ ಟೆಂಡರ್‍ದಾರರು ಪಾವತಿಸಬೇಕಾದ 8 ಕೋಟಿ ರೂ. ನೋಂದಣಿ ಶುಲ್ಕವನ್ನು ಮನ್ನಾ ಮಾಡಲು ಒಂದು ವಾರದಲ್ಲಿ ಕ್ಯಾಬಿನೆಟ್‍ಗೆ ಪ್ರಸ್ತಾವನೆ ಸಲ್ಲಿಸುವುದು. ಸರ್ಕಾರಕ್ಕೆ ಅಡಮಾನ ಆಗಿರುವ 85 ಎಕರೆ ಜಮೀನನ್ನು ಅಡಮಾನದಿಂದ ಕೈಬಿಡುವುದರ ಜೊತೆಗೆ ಕಾರ್ಖಾನೆಗೆ ಸೇರಿದ ಒಟ್ಟು 125 ಎಕರೆ ಜಾಗದ ಮೇಲೆ ಸಾಲ ಸೌಲಭ್ಯ ಪಡೆಯಲು ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಟೆಂಡರ್ ಷರತ್ತಿನಲ್ಲಿ ವಿನಾಯ್ತಿ ನೀಡುವಂತೆ ಕಾರ್ಖಾನೆಯ ವಾರ್ಷಿಕ ಮಹಾಸಭೆ ಅನುಮೋದನೆಯೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು. ನಂತರ ಮಹಾಸಭೆ ನಿರ್ಣಯದಂತೆ ಕ್ಯಾಬಿನೆಟ್‍ನಲ್ಲಿ ಮಂಡಿಸುವುದು. ಕಾರ್ಖಾನೆಯ ಇತರೆ ಸಾಲಗಳ(ಜವಾಬ್ದಾರಿಗಳು) ಒಟ್ಟು 27 ಕೋಟಿ ರೂ.ಗಳನ್ನು ಗುತ್ತಿಗೆದಾರರು ಪಾವತಿಸುವ 120 ಕೋಟಿ ರೂ. ಬಾಡಿಗೆ ಮೊತ್ತದಲ್ಲೇ ಹಂತ ಹಂತವಾಗಿ ಪ್ರತೀ ವರ್ಷ ಪಾವತಿಸಲು ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್, ಕಾರ್ಖಾನೆಯಿಂದ ಪಡೆದಿರುವ ಡಿಸಿಸಿ ಬ್ಯಾಂಕ್ ಸಾಲದ ಬಾಕಿ 1.36 ಕೋಟಿ ರೂ. ಅಸಲನ್ನು ಮಾತ್ರ ಪಾವತಿಸಲು ಅವಕಾಶ ನೀಡಿ, ಈ ಸಂಬಂಧ ಬ್ಯಾಂಕ್ ಆಡಳಿತ ಮಂಡಳಿಗೆ ಸೂಚನೆ ನೀಡಬೇಕು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಕೋರಿದರು. 2022ರ ಮೇ ತಿಂಗಳ ಒಳಗಾಗಿ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಿ, ಜೂನ್ ತಿಂಗಳಿಂದ ಕಬ್ಬು ಅರೆಯುವ ಕಾರ್ಯ ಆರಂಭಿಸಬೇಕು. ಇದರಿಂದ ರೈತರ ಸಮಸ್ಯೆ ಪರಿಹಾರವಾಗುವುದರ ಜೊತೆಗೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಶಾಸಕರ ಹೇಳಿಕೆಗೆ ಸಭೆಯಲ್ಲಿ ಸಹಮತ ವ್ಯಕ್ತವಾಯಿತು. ನಿರಾಣಿ ಷುಗರ್ಸ್ ಮಾಲೀಕರೂ ಆದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ರುದ್ರಪ್ಪ ನಿರಾಣಿ, ಜವಳಿ ಮತ್ತು ಸಕ್ಕರೆ ಸಚಿವ ಶಂಕರ್ ಬಿ.ಪಾಟೀಲ್ ಮುನೇನಕೊಪ್ಪ, ಪಿರಿಯಾಪಟ್ಟಣ ಶಾಸಕ ಕೆ.ಮಹದೇವು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಕ್ಕರೆ ಆಯುಕ್ತ ಶಿವಾನಂದ ಕಲ್ಕೆರಿ, ಶ್ರೀರಾಮ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ವಿಜಯ್‍ಕುಮಾರ್ ಸಭೆಯಲ್ಲಿ ಭಾಗವಹಿಸಿದ್ದರು.

ನಿರಾಣಿಗೆ ಟೆಂಡರ್?: ಏಳೆಂಟು ವರ್ಷಗಳಿಂದ ಸ್ಥಗಿತಗೊಂಡಿರುವ ಶ್ರೀರಾಮ ಸಕ್ಕರೆ ಕಾರ್ಖಾನೆ ಮುನ್ನಡೆಸಲು ಯಾವ ಗುತ್ತಿಗೆದಾರರೂ ಮುಂದಾಗಿರಲಿಲ್ಲ. ಆದರೆ 2020ರ ಏಪ್ರಿಲ್‍ನಲ್ಲಿ ಮತ್ತೆ ಟೆಂಡರ್ ಕರೆದಾಗ ನಿರಾಣಿ ಷುಗರ್ಸ್ ಸಂಸ್ಥೆ ಮಾತ್ರ ಭಾಗವಹಿಸಿತ್ತು. ಜೊತೆಗೆ ಕಾರ್ಖಾನೆ ಪುನಾರಂಭಕ್ಕೆ ಅಗತ್ಯವಾದ ಕೆಲ ಬೇಡಿಕೆಗಳನ್ನೂ ಮುಂದಿಟ್ಟಿತ್ತು. ಕೆಲ ತಿಂಗಳ ಹಿಂದೆ ಸಚಿವ ಮುರುಗೇಶ್ ನಿರಾಣಿಯವರ ಸಹೋದರ ಸಂಗಮೇಶ್ ನಿರಾಣಿ ಕಾರ್ಖಾನೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಮಾಹಿತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಕಾರ್ಮಿಕರ ಹಿತದೃಷ್ಟಿಯಿಂದ ಕಾರ್ಖಾನೆ ನಡೆಸಲು ಆಸಕ್ತಿ ಹೊಂದಿರುವ ನಿರಾಣಿ ಷುಗರ್ಸ್ ಸಂಸ್ಥೆಗೆ ಸಹಕಾರ ನೀಡುವಂತೆ ಶಾಸಕ ಸಾ.ರಾ.ಮಹೇಶ್, ಕಾರ್ಮಿಕ ಹಾಗೂ ಸಕ್ಕರೆ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

Translate »