ಮೈಸೂರು ಹೊರವಲಯದಲ್ಲಿ ಕೋಟ್ಯಾಂತರ ಮೌಲ್ಯದ  ಐದು ಎಕರೆ ಒತ್ತುವರಿ ತೆರವುಗೊಳಿಸಿದ ಪಾಲಿಕೆ
ಮೈಸೂರು

ಮೈಸೂರು ಹೊರವಲಯದಲ್ಲಿ ಕೋಟ್ಯಾಂತರ ಮೌಲ್ಯದ ಐದು ಎಕರೆ ಒತ್ತುವರಿ ತೆರವುಗೊಳಿಸಿದ ಪಾಲಿಕೆ

December 22, 2021

ಮೈಸೂರು, ಡಿ. 21(ಆರ್‍ಕೆ)- ಭೂಮಿ ಬೆಲೆ ಗಗನಕ್ಕೇರುತ್ತಿದ್ದಂತೆಯೇ ಮೈಸೂರು ಸುತ್ತಮುತ್ತ ಸರ್ಕಾರಿ ಜಾಗ ಕಬಳಿಸಲು ಮಾಫಿಯಾ ಪ್ರಯತ್ನಿಸುತ್ತಿದೆ.

ಇತ್ತೀಚೆಗಷ್ಟೇ ವಿಜಯನಗರ 4ನೇ ಹಂತದಲ್ಲಿ 5.5 ಎಕರೆಯಷ್ಟು ವಸತಿ ಬಡಾವಣೆಗೆ ಸ್ವಾಧೀನಪಡಿಸಿಕೊಂಡಿದ್ದ 100 ಕೋಟಿ ರೂ. ಬೆಲೆಬಾಳುವ ಜಾಗ ದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ಗಳನ್ನು ನೆಲಸಮಗೊಳಿಸಿ ಮುಡಾ ಅಧಿ ಕಾರಿಗಳು ವಶಕ್ಕೆ ಪಡೆದ ಬೆನ್ನಲ್ಲೇ ಇದೀಗ ಗೊರೂರು ಬಳಿ ಆಶ್ರಯ ಮನೆಗೆಂದು ಮೀಸಲಿರಿಸಿದ್ದ 55 ಎಕರೆ ಪೈಕಿ 5 ಎಕರೆ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಮೈಸೂರು ಮಹಾನಗರ ಪಾಲಿಕೆ ಅಧಿ ಕಾರಿಗಳು ಇಂದು ತೆರವುಗೊಳಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ. ಮೈಸೂರು ತಾಲೂಕು, ಗೊರೂರು ಮೂಲ ಸರ್ವೆ ನಂಬರ್ 38ರ 55 ಎಕರೆ ಸರ್ಕಾರಿ ಭೂಮಿ ಪೈಕಿ (ಹೊಸ ಸರ್ವೆ ನಂಬರ್ 112, 113, 121, 127) 5 ಎಕರೆ ಪ್ರದೇಶಕ್ಕೆ ತಂತಿ ಬೇಲಿ ಹಾಕಿ ಕೊಂಡು ಮೂವರು ವ್ಯಕ್ತಿಗಳು, ಅಲ್ಲಿ ಶೆಡ್ ಗಳನ್ನು ನಿರ್ಮಿಸಿ ಬೆಳೆ ಬೆಳೆಯುತ್ತಿದ್ದರು.

ಮಂಡಕಳ್ಳಿ ವಿಮಾನ ನಿಲ್ದಾಣದ ಪಕ್ಕದಲ್ಲಿ ರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಶೈಕ್ಷಣಿಕ ಭವನ (ಕೋವಿಡ್ ಕೇರ್ ಸೆಂಟರ್)ಕ್ಕೆ ಹೊಂದಿಕೊಂಡಂತಿ ರುವ ಈ ಜಾಗವು ಅರಮನೆ ಕಾವಲ್ ವರ್ಗದಲ್ಲಿದ್ದು, ಕೆಆರ್ ವಿಧಾನಸಭಾ ಕ್ಷೇತ್ರದ ವಸತಿ ರಹಿತರಿಗಾಗಿ ಆಶ್ರಯ ಮನೆ ನಿರ್ಮಿಸಿಕೊಡುವ ಸಲುವಾಗಿ 2004ರಲ್ಲಿ ಜಿಲ್ಲಾಡಳಿತವು 55 ಎಕರೆ ಭೂಮಿಯನ್ನು ಮೈಸೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿತ್ತು
ಎಂದು ಮೈಸೂರು ತಹಸೀಲ್ದಾರ್ ಕೆ.ಆರ್. ರಕ್ಷಿತ್ ತಿಳಿಸಿದ್ದಾರೆ. ತದನಂತರ ಸದರಿ ಜಾಗಕ್ಕೆ ತಂತಿ ಬೇಲಿ ಹಾಕಿ ರಕ್ಷಿಸದೇ, ಅಲ್ಲಿ ವಸತಿ ಯೋಜನೆಯನ್ನೂ ಅನುಷ್ಠಾನಗೊಳಿಸದೇ ಹಾಗೆಯೇ ಖಾಲಿ ಬಿಟ್ಟಿದ್ದರಿಂದ ಮೂವರು ವ್ಯಕ್ತಿಗಳು 5 ಎಕರೆ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿ ತಂತಿ ಬೇಲಿ ನಿರ್ಮಿಸಿ, ಈ ಹಿಂದೆ ಮಹಾರಾಜರು ತಮ್ಮ ಪೂರ್ವಿಕರಿಗೆ ನೀಡಿದ್ದರು ಎಂದು ಹೇಳಿ ಸ್ವಾಧೀನದಲ್ಲಿದ್ದರು.

ಆ ವಿಷಯ ತಿಳಿಯುತ್ತಿದ್ದಂತೆಯೇ ಪಾಲಿಕೆ ಅಧಿಕಾರಿಗಳು ತಾಲೂಕು ಸರ್ವೆಯರ್ ಗಳನ್ನು ಕರೆದೊಯ್ದು ಸರ್ವೆ ಮಾಡಿಸಿದಾಗ 5 ಎಕರೆ ಭೂಮಿ ಒತ್ತುವರಿಯಾಗಿರುವುದು ತಿಳಿಯಿತು. ರೆವಿನ್ಯೂ ದಾಖಲೆಗಳನ್ನು ಪರಿಶೀಲಿಸಿ ಅನಧಿಕೃತವಾಗಿ ಸ್ವಾಧೀನದಲ್ಲಿದ್ದಾ ರೆಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು. ಮೈಸೂರು ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತೆ ರೂಪಾ ನೇತೃತ್ವದಲ್ಲಿ ಅಧಿಕಾರಿಗಳು ಇಂದು ಬೆಳಿಗ್ಗೆ 6ರಿಂದ ಜೆಸಿಬಿಗಳ ಮೂಲಕ ಕಾರ್ಯಾಚರಣೆ ನಡೆಸಿ, ತಂತಿ ಬೇಲಿ ಹಾಗೂ ಶೆಡ್‍ಗಳನ್ನು ನೆಲಸಮಗೊಳಿಸಿ ಆಸ್ತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಕಂದಾಯ ಇಲಾಖೆ ರೆವಿನ್ಯೂ ಇನ್ಸ್‍ಪೆಕ್ಟರ್ ರಾಘವೇಂದ್ರ, ಗ್ರಾಮ ಲೆಕ್ಕಿಗರಾದ ನಾಗೇಶ್, ಮಹದೇವಸ್ವಾಮಿ ಸೇರಿದಂತೆ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಒತ್ತುವರಿಯಾಗಿದ್ದ ಸುಮಾರು 3 ಕೋಟಿ ರೂ. ಮೌಲ್ಯದ ಭೂಮಿಯನ್ನು ವಶಕ್ಕೆ ಪಡೆದು ಸ್ಥಳದಲ್ಲಿ ‘ಪಾಲಿಕೆಗೆ ಸೇರಿದ ಆಸ್ತಿ’ ಫಲಕ ಅಳವಡಿಸಿದರು. ಈ ಸಂದರ್ಭ ಸ್ಥಳಕ್ಕೆ ಧಾವಿಸಿದ ಮೂವರು ವ್ಯಕ್ತಿಗಳು, ನಾವೇ ಫೆನ್ಸಿಂಗ್ ತೆರವುಗೊಳಿಸುತ್ತೇವೆ ಎಂದು ಕೇಳಿಕೊಂಡರಾದರೂ, 4 ಜೆಸಿಬಿಗಳ ಮೂಲಕ ನೆಲಸಮಗೊಳಿಸಿದ ಪಾಲಿಕೆ ಅಧಿಕಾರಿಗಳು, ಇದೀಗ ಎಲ್ಲಾ 55 ಎಕರೆ ಪ್ರದೇಶಕ್ಕೂ ತಂತಿ ಬೇಲಿ ನಿರ್ಮಿಸಿ ಆಸ್ತಿ ಸಂರಕ್ಷಿಸಲು ಮುಂದಾಗಿದ್ದಾರೆ.

ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಇನ್ಸ್‍ಪೆಕ್ಟರ್ ಜೀವನ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆಗೆ 50ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಿ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಸದರಿ ಜಾಗವನ್ನು ಬಡವರಿಗೆ ಮನೆ ನಿರ್ಮಿಸಲು ಕರ್ನಾಟಕ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿಗೆ ಹಸ್ತಾಂತರಿಸಲು ಮೈಸೂರು ಮಹಾನಗರ ಪಾಲಿಕೆಯು ಪ್ರಕ್ರಿಯೆ ಆರಂಭಿಸಿದೆ.

Translate »