ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ದುರ್ಮರಣ
ಮೈಸೂರು

ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ದುರ್ಮರಣ

February 3, 2022

ಮೈಸೂರು, ಫೆ.2(ಆರ್‍ಕೆ)-ಹುಣಸೂರು ತಾಲೂಕು, ಬಿಳಿಕೆರೆ ಠಾಣಾ ವ್ಯಾಪ್ತಿ ಯಲ್ಲಿ ಕಳೆದ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮೌನೇಶ್ವರ ರೆಡ್ಡಿ ಹಾಗೂ ತೇಜಸ್ ಸಾವನ್ನಪ್ಪಿದವರಾಗಿದ್ದು, ತೀವ್ರವಾಗಿ ಗಾಯ ಗೊಂಡಿರುವ ಸುಹಾನ ಮತ್ತು ಶುಭಂಕರ ಅವರುಗಳನ್ನು ಮೈಸೂರಿನ ಡಿಆರ್‍ಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿ ನಲ್ಲಿ ದ್ವಿತೀಯ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದ ನಾಲ್ವರೂ ಸ್ಕೋಡಾ ರ್ಯಾಪಿಡ್ ಕಾರಿನಲ್ಲಿ ಮೈಸೂರಿಗೆ ಬರುತ್ತಿದ್ದಾಗ ಬಿಳಿಕೆರೆ ಠಾಣಾ ವ್ಯಾಪ್ತಿಯ ರಾಮೇನಗಳ್ಳಿ ಸಮೀಪ ಸೇತುವೆ ಬಳಿ ಎದುರಿನಿಂದ ಬಂದ ಕ್ಯಾಂಟರ್‍ವೊಂದು ಡಿಕ್ಕಿ ಹೊಡೆಯಿತು.

ಪರಿಣಾಮ ಕಾರು ಚಾಲನೆ ಮಾಡುತ್ತಿದ್ದ ಮೌನೇಶ್ವರ ರೆಡ್ಡಿ ಸ್ಥಳದಲ್ಲೇ ಮೃತಪಟ್ಟರೆ, ತೇಜಸ್ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದ. ತೀವ್ರವಾಗಿ ಗಾಯಗೊಂಡಿದ್ದ ಸುಹಾಸ್ ಮತ್ತು ಶುಭಂಕರ ಅವರನ್ನು ಡಿಆರ್‍ಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಸೆಮಿಸ್ಟರ್‍ನಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವರ ದರ್ಶನ ಮಾಡಿದ್ದ ಅವರು, ತೇರ್ಗಡೆ ಹೊಂದಿದ್ದರು. ಇಂದು ಟೆಸ್ಟ್ ಇದ್ದುದರಿಂದ ಮುಂಜಾನೆ ದರ್ಶನ ಪಡೆದು ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿ, ರಾತ್ರಿಯೇ ಕಾರಿನಲ್ಲಿ ಮೈಸೂರಿಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ವಿಧಿ ಅವರನ್ನು ದೇವರ ದರ್ಶನಕ್ಕೆ ಬರುವಾಗಲೇ ಅಪ ಘಾತಕ್ಕೀಡು ಮಾಡಿ ಇಹಲೋಕ ತ್ಯಜಿಸುವಂತೆ ಮಾಡಿದೆ. ಪ್ರಕರಣ ದಾಖಲಿಸಿ ಕೊಂಡಿರುವ ಬಿಳಿಕೆರೆ ಠಾಣೆ ಸಬ್‍ಇನ್ಸ್‍ಪೆಕ್ಟರ್ ಶಿವಮಂಜು ತನಿಖೆ ನಡೆಸುತ್ತಿದ್ದಾರೆ.

Translate »