ಚಾಮರಾಜನಗರ, ಏ.5(ಎಸ್‍ಎಸ್)- ಕೆರೆಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಅಮಚವಾಡಿ ಗ್ರಾಮದ ಹೊರವಲಯದಲ್ಲಿರುವ ಎಣ್ಣೆಹೊಳೆ ಹೊಸಕೆರೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಚಾಮರಾಜನಗರ ಗಾಳೀಪುರ ಬಡಾವಣೆಯ ಸೈಯದ್(17) ಹಾಗೂ ಶಾರನ್(17) ಮೃತಪಟ್ಟ ಬಾಲಕರು.
ಅಮಚವಾಡಿಯಿಂದ 3 ಕಿಮೀ ದೂರಲ್ಲಿರುವ ಎಣ್ಣೆ ಹೊಳೆ ಹೊಸಕೆರೆಯಲ್ಲಿ ಈಜಲೆಂದು ಸೈಯದ್ ಹಾಗೂ ಶಾರನ್ ಸೇರಿ ದಂತೆ ನಾಲ್ಕೈದು ಮಂದಿ ತೆರಳಿದ್ದರು. ಕೆರೆಯಲ್ಲಿ ತಮ್ಮ ಸ್ನೇಹಿತ ರೊಂದಿಗೆ ಈಜುವ ವೇಳೆಗೆ ಕೆರೆಯ ಆಳದಲ್ಲಿದ್ದ ಕೆಸರಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ವೇಳೆ ಮೃತ ಬಾಲಕರ ಸ್ನೇಹಿತರು ನೀಡಿದ ಮಾಹಿತಿ ಮೇರೆಗೆ ಡಿವೈಎಸ್ಪಿ ಜೆ.ಮೋಹನ್, ಇನ್ಸ್‍ಪೆಕ್ಟರ್ ಮಂಜು ಎಸ್‍ಐ ಲೋಹಿತ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಅಲ್ಲದೇ ಮೃತ ಬಾಲಕರ ಸಂಬಂಧಿಕರು ಹಾಗೂ ಅಮಚವಾಡಿ ಗ್ರಾಮಸ್ಥರು ತಂಡೋಪತಂಡವಾಗಿ ಕೆರೆ ಬಳಿ ಜಮಾಯಿಸಿದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕೆರೆಯಿಂದ ಶವಗಳನ್ನು ಮೇಲೆತ್ತಿ ನಗರದ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಿದರು. ಈ ಸಂಬಂಧ ಚಾಮರಾಜನಗರ ಗ್ರಾಮಾಂ ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.